

ಕಾರವಾರ: ಕರೊನಾ ಸೋಂಕಿತರ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಉತ್ತರ ಕನ್ನಡ ಜಿಲ್ಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಕೆ. ಹೇಳಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ರಾಜ್ಯದಲ್ಲೇ ಅತ್ಯಂತ ಕಡಿಮೆ ಎಂದರೆ ಸುಮಾರು ಶೇ. 5 ರಿಂದ 6 ರಷ್ಟು ಮಾತ್ರ ಸೋಂಕು ಪತ್ತೆಯಾಗುತ್ತಿದೆ. ಇದುವರೆಗೂ ಜಿಲ್ಲೆಯಲ್ಲಿ 46406 ಸೋಂಕು ಪತ್ತೆ ಪರೀಕ್ಷೆಗಳನ್ನು ನಡೆಸಲಾಗಿದ್ದು, 3368 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಪೈಕಿ 2420 ಜನರು ಸಂಪೂರ್ಣ ಗುಣವಾಗಿದ್ದಾರೆ. ರಾಜ್ಯದ ಇತರೆ ಜಿಲ್ಲೆಗೆ ಹೋಲಿಸಿದರೆ ಇದು ತುಂಬಾ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಇಂದು 80 ಪ್ರಕರಣ: ಮಂಗಳವಾರ ಜಿಲ್ಲೆಯಲ್ಲಿ 113 ಜನ ಕೋವಿಡ್ನಿಂದ ಗುಣ ಹೊಂದಿ ಬಿಡುಗಡೆಯಾಗಿದ್ದು, 80 ಜನರಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಭಟ್ಕಳದ 32 ವರ್ಷದ ಯುವಕ ಸಾವನ್ನಪ್ಪಿದ್ದಾರೆ. ಒಟ್ಟಾರೆ ಮೃತರ ಸಂಖ್ಯೆ 34 ಕ್ಕೇರಿದೆ. ಭಟ್ಕಳದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 500 ದಾಟಿದ್ದು, ದಾಂಡೇಲಿ ಹಾಗೂ ಹಳಿಯಾಳದಲ್ಲಿ ಸೋಂಕಿತರ ಸಂಖ್ಯೆ 1 ಸಾವಿರ ದಾಟಿದೆ.
ಕಾರವಾರದಲ್ಲಿ 17, ಅಂಕೋಲಾದಲ್ಲಿ 5, ಕುಮಟಾದಲ್ಲಿ 4, ಹೊನ್ನಾವರದಲ್ಲಿ 14, ಭಟ್ಕಳದಲ್ಲಿ 15, ಶಿರಸಿಯಲ್ಲಿ 4, ಸಿದ್ದಾಪುರದಲ್ಲಿ 1, ಯಲ್ಲಾಪುರದಲ್ಲಿ 8 ಮುಂಡಗೋಡಿನಲ್ಲಿ 2 ಜೊಯಿಡಾದಲ್ಲಿ 1, ದಾಂಡೇಲಿ ಹಾಗೂ ಹಳಿಯಾಳ ಸೇರಿ 42 ಜನ ಗುಣ ಹೊಂದಿ ಬಿಡುಗಡೆಯಾಗಿದ್ದಾರೆ.
ಕಾರವಾರದಲ್ಲಿ 5, ಅಂಕೋಲಾದಲ್ಲಿ 1, ಕುಮಟಾದಲ್ಲಿ 16, ಭಟ್ಕಳದಲ್ಲಿ 5, ಶಿರಸಿಯಲ್ಲಿ 9, ಸಿದ್ದಾಪುರದಲ್ಲಿ 15, ಮುಂಡಗೋಡಿನಲ್ಲಿ 7, ಜೊಯಿಡಾದಲ್ಲಿ 1, ದಾಂಡೇಲಿ ಹಾಗೂ ಹಳಿಯಾಳ ಸೇರಿ 21 ಪ್ರಕರಣಗಳು ಪತ್ತೆಯಾಗಿವೆ.
ಕೋವಿಡ್ ಸೋಂಕಿತೆಗೆ ಹೆರಿಗೆ: ಕೋವಿಡ್ ಸೋಂಕಿತೆಗೆ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ವೆಂಕಟಾಪುರದ 29 ವರ್ಷದ ಗರ್ಭಿಣಿಗೆ ಕೋವಿಡ್ ತಗುಲಿತ್ತು.
ಡಾ.ಶಾಮಶನೂರ್, ದಾದಿಯರಾದ ಸುಮಿತ್ರಾ, ಲವೀಣಾ ಹಾಗೂ ಭಾರತಿ ಪಿಪಿಇ ಕಿಟ್ ಧರಿಸಿ ಹೆರಿಗೆ ಮಾಡಿಸಿದ್ದಾರೆ. 2.750 ಗ್ರಾಂ ತೂಕದ ಹೆಣ್ಣು ಮಗು ಆರೋಗ್ಯವಾಗಿದೆ.