ಕರೊನಾ ತಡೆಗಟ್ಟಲು ಎಲ್ಲ ಸಿಬ್ಬಂದಿ ಸಕ್ರಿಯವಾಗಿರಿ

13KWR4
Published on

ಕಾರವಾರ: ಕರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಗ್ರಾಮ, ಪಟ್ಟಣ ಮತ್ತು ತಾಲೂಕು ಮಟ್ಟದ ಸ್ಥಳೀಯ ಅಧಿಕಾರಿಗಳು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತರು ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ಕೆ.ಪಿ. ಮೋಹನರಾಜ ಅವರು ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಸೋಮವಾರ ಅವರು, ಜಿಲ್ಲೆಯ ಎಲ್ಲ ಉಪವಿಭಾಗಾಧಿಕಾರಿಗಳು ಹಾಗೂ ತಾಲೂಕು ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳೊಂದಿಗೆ ಮಾತನಾಡಿದರು.

ಇಂದಿನವರೆಗಗೂ ಲಾಕ್​ಡೌನ್ ಅನ್ನು ಜಿಲ್ಲೆಯ ಎಲ್ಲ ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಿದ್ದೀರಿ, ಮುಂದಿನ ಅವಧಿಗೂ ಕೂಡ ಇನ್ನೂ ಚೆನ್ನಾಗಿ ನಿರ್ವಹಿಸಿ. ಸ್ಥಳೀಯ ಮಟ್ಟದ ಅಧಿಕಾರಿಗಳು ತಮ್ಮ ಕೇಂದ್ರ ಸ್ಥಾನಗಳಲ್ಲೇ ಇದ್ದು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ಸೂಚಿಸಿದರು.

ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಅವರು ಮಾತನಾಡಿ, ಗ್ರಾಮ ಮಟ್ಟದ ಆರೋಗ್ಯ ತಂಡಗಳು ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿಸುವ ಕಾರ್ಯವಾಗಬೇಕು. ಆಶಾ ಕಾರ್ಯಕರ್ತೆಯರು ಪೋನ್ ಕರೆ ಮಾಡುವ ಮೂಲಕ ಮಾಹಿತಿ ಸಂಗ್ರಹಿಸಬೇಕು. ಆರೋಗ್ಯ ತಪಾಸಣೆಯನ್ನು ಪುನಃ ಮಾಡಿ, ಸಲಹೆ ಸೂಚನೆಗಳಿದ್ದರೆ ಸಂಬಂಧಿಸಿದವರಿಂದ ಕೇಳಿ ಸ್ಥಳೀಯವಾಗಿ ಕಾರ್ಯನಿರ್ವಹಿಸಬೇಕು ಎಂದರು.

ಎಸ್​ಪಿ ಶಿವಪ್ರಕಾಶ ದೇವರಾಜು ಮಾತನಾಡಿ, ಮುಂದಿನ ಹದಿನೈದು ದಿನಗಳಲ್ಲಿ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಬರುವವರನ್ನು ಚೆಕ್ ಪೊಸ್ಟ್​ಗಳಲ್ಲಿ ತಡೆಹಿಡಿಯಿರಿ. ಒಂದು ವೇಳೆ ಜನರು ಬಂದಿದ್ದೇ ಆದಲ್ಲಿ ಅವರಿಗೆ ಪರ್ಯಾಯ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಿ, ದೂರದೃಷ್ಟಿಯಿಂದ ಕಾರ್ಯನಿರ್ವಹಿಸಿ, ಪೊಲೀಸ್ ಇಲಾಖೆಯೊಂದಿಗೆ ತಹಸೀಲ್ದಾರರು ಸಹಕಾರ ನೀಡಿ ರೆಡ್, ಆರೇಂಜ್ ಮತ್ತು ಗ್ರೀನ್ ಜೋನ್​ಗಳೆಂದು ಸ್ಥಳಗಳನ್ನು ಗುರುತಿಸಿ, ಸಮೀಕ್ಷೆ ಮಾಡಿಕೊಳ್ಳಬೇಕು. ರೆಡ್ ಝೋನ್​ನಲ್ಲಿ ಪ್ರತಿ ದಿನ, ಆರೇಂಜ್ ಜೋನಿನದಲ್ಲಿ ವಾರದಲ್ಲಿ ಎರಡು ಬಾರಿ ಮತ್ತು ಗ್ರೀನ್ ಜೋನಿನಲ್ಲಿ ವಾರಕೊಮ್ಮೆ ಸಮೀಕ್ಷೆ ನಡೆಸಬೇಕು ಎಂದರು. ವಯೋವೃದ್ಧರು, ಮಕ್ಕಳು ಮತ್ತು ದೀರ್ಘಕಾಲದ ರೋಗದಿಂದ ಬಳಲುತ್ತಿರುವವರನ್ನು ವಿಶೇಷವಾಗಿ ಸಮೀಕ್ಷೆ ಮಾಡಬೇಕಲ್ಲದೇ, ಯಾವುದೇ ರೀತಿಯ ಸಾವುಗಳು ಸಂಭವಿಸಿದರೂ ಅದರ ಮಾಹಿತಿ ತಹಸೀಲ್ದಾರರು ಹೊಂದಿರಬೇಕಾಗಿರುತ್ತದೆ ಎಂದರು. ಜಿಪಂ ಸಿಇಒ ಎಂ. ರೋಷನ್, ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ., ಆರೋಗ್ಯ ಸರ್ವೆಕ್ಷಣಾಧಿಕಾರಿ ಡಾ. ವಿನೋದ ಭೂತೆ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net