ಕರೊನಾ ಎದುರಿಸಲು ಜಿಲ್ಲಾಡಳಿತಸಜ್ಜು

13KWR5
Published on

ಕಾರವಾರ: ಕರೊನಾ ಸೋಂಕು ಎದುರಿಸಲು ಜಿಲ್ಲಾಡಳಿತ ಸಾಕಷ್ಟು ಕ್ರಮಗಳನ್ನು ಕೈಗೊಂಡು ಸಜ್ಜಾಗಿದೆ.

ಜಿಲ್ಲೆಯಲ್ಲಿ ಇದುವರೆಗೂ ಒಂದೂ ಸೋಂಕಿತರು ಪತ್ತೆಯಾಗಿಲ್ಲ. ಅದರೂ ಎಲ್ಲ 12 ತಾಲೂಕುಗಳ ಎನ್​ಡಬ್ಲ್ಯುಕೆಆರ್​ಟಿಸಿ ಬಸ್ ನಿಲ್ದಾಣಗಳಲ್ಲಿ, ಕಾರವಾರ, ಗೋಕರ್ಣ, ಮುರ್ಡೆಶ್ವರ, ಗೋಕರ್ಣ ಹಾಗೂ ಭಟ್ಕಳ ರೈಲ್ವೆ ನಿಲ್ದಾಣಗಳಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಲಾಗಿದೆ.

ಸೋಂಕಿನ ಬಗ್ಗೆ ಅನುಮಾನ ಇದ್ದವರನ್ನು ಥರ್ಮಲ್ ಸ್ಕ್ಯಾನರ್ ಮೂಲಕ ಪರೀಕ್ಷೆಗೊಳಪಡಿಸುವುದು. ಜನರಲ್ಲಿ ಜಾಗೃತಿ ಮೂಡಿಸುವುದು. ಹಾಗೂ ಹೊರ ದೇಶಗಳಿಂದ ಬರುವವರಿಂದ ಸ್ವಯಂ ಘೊಷಣಾ ಪತ್ರವನ್ನು ಪಡೆಯುವ ಜವಾಬ್ದಾರಿಯನ್ನು ಈ ಸಹಾಯವಾಣಿ ಕೇಂದ್ರಗಳು ಮಾಡಲಿವೆ.

ರೆಸಾರ್ಟ್, ಹೋಟೆಲ್ ಮಾಲೀಕರ ಸಭೆಯನ್ನು ಈಗಾಗಲೇ ಮಾಡಲಾಗಿದ್ದು, ಬರುವ ವಿದೇಶಿಗರು ಹಾಗೂ ಇತರ ಪ್ರವಾಸಿಗರ ಸಂಪೂರ್ಣ ಮಾಹಿತಿ ಪಡೆಯುವಂತೆ ಸೂಚಿಸಲಾಗಿದೆ. ಗೋಕರ್ಣ ಹಾಗೂ ಮುಂಡಗೋಡಿನಲ್ಲಿ ಮನೆ, ಮನೆ, ಹೋಟೆಲ್, ರೆಸಾರ್ಟ್​ಗಳಿಗೆ ತೆರಳಿ 7 ಸಾವಿರಕ್ಕೂ ಅಧಿಕ ಜನರ ಪರಿಶೀಲಿಸಲಾಗಿದೆ.

ವಿದೇಶಗಳಿಂದ ಬರುವ ಜನರ ಬಗ್ಗೆ ಮಾಹಿತಿ ಪಡೆದು ಪರಿಶೀಲಿಸಲು 14 ದಿನದವರೆಗೆ ಕಡ್ಡಾಯವಾಗಿ ನಿಗಾದಲ್ಲಿಡಲು ಸೂಚಿಸಲಾಗಿದೆ. ಕಾರವಾರ ಅರಗಾದ ಐಎನ್​ಎಸ್ ಪತಂಜಲಿ ನೌಕಾ ಆಸ್ಪತ್ರೆಯಲ್ಲಿ ಕರೊನಾ ಸೋಂಕಿತರಿಗಾಗಿ 100 ಹಾಸಿಗೆಗಳನ್ನು ಸಿದ್ಧಪಡಿಸಿ ಇಡಲಾಗಿದೆ.

ಖಾಸಗಿ ಆಸ್ಪತ್ರೆಗಳ ಜತೆ ಸಂಪರ್ಕ ಸಾಧಿಸಿ ಚಿಕಿತ್ಸೆಗೆ ಬರುವ ಎಲ್ಲ ರೋಗಿಗಳ ಬಗ್ಗೆ ಸಂಪೂರ್ಣ ನಿಗಾ ಇಡುವಂತೆ ಸೂಚಿಸಲಾಗಿದೆ.

ಮುನ್ನೆಚ್ಚರಿಕೆ ಕ್ರಮಗಳು: ರಾಜ್ಯ ಸರ್ಕಾರದ ಸೂಚನೆಯಂತೆ ಶಾಲೆಗಳಿಗೆ ಜೂನ್​ವರೆಗೆ. ಕಾಲೇಜ್​ಗಳಿಗೆ 15 ದಿನ ರಜೆ. *ಅಂಗನವಾಡಿಗಳಿಗೆ ರಜೆ ನೀಡುವ ಬಗ್ಗೆ ಇದುವರೆಗೂ ನಿರ್ಧಾರವಾಗಿಲ್ಲ. * ಚಿತ್ರಮಂದಿರಗಳು, ಖಾಸಗಿ ಸಮಾರಂಭಗಳನ್ನು ರದ್ದು ಮಾಡಲು ಜಿಲ್ಲಾಡಳಿತದಿಂದ ಸೂಚನೆ

ರದ್ದಾದ ಕಾರ್ಯಕ್ರಮಗಳು: *ಸಚಿವ ಶಿವರಾಮ ಹೆಬ್ಬಾರ ಅವರು ಯಲ್ಲಾಪುರದಲ್ಲಿ ಮಾ. 14 ರಂದು ನಡೆಸಲಿರುವ ಕಾರ್ಯಕ್ರಮಗಳು * ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಾ. 15 ರಂದು ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮಗಳು. *ಜಿಲ್ಲಾ ರೆಡ್​ಕ್ರಾಸ್ ಸೊಸೈಟಿಯಿಂದ ಮಾ. 15 ರಂದು ಹಿಂದು ಹೈಸ್ಕೂಲ್​ನಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಶಿಬಿರ * ಮಾ.14 ಕಾರವಾರ ಸರ್ಕಾರಿ ಪಾಲಿಟೆಕ್ನಿಕ್ ಕ್ರೀಡಾ ಸಂಘ, ಸಾಂಸ್ಕೃತಿಕ ಸಂಘದ ಸಮಾರೋಪ.

ಮುಂಜಾಗ್ರತೆ ಕೈಗೊಳ್ಳಿ: ವೈರಸ್ ಹರಡುತ್ತಿರುವುದರಿಂದ ಆತಂಕ ಪಡುವ ಅವಶ್ಯಕತೆ ಇಲ್ಲ, ಬದಲಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೀಶ್ ಮೌದ್ಗಿಲ್ ಜಿಲ್ಲೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ, ವಿಡಿಯೋ ಸಂವಾದ ನಡೆಸಿದರು. ಕರೋನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಅಂಕಿ-ಅಂಶಗಳನ್ನು ಬಿತ್ತರಿಸುತ್ತಿರುವುದು ಜನರನ್ನು ಹೆದರಿಸುವ ಕಾರಣಕ್ಕಲ್ಲ. ಎಚ್ಚೆತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ವೈರಸ್ ಹರಡದಂತೇ ತಡೆಯುವುದಕ್ಕಾಗಿ ಎಂದರು. ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ. ಜಿಪಂ ಸಿಇಒ ಎಂ.ರೋಶನ್, ಡಿಎಚ್​ಒ ಡಾ.ಜಿ.ಎನ್.ಅಶೋಕ ಕುಮಾರ್, ಕಾರವಾರ ಉಪವಿಭಾಗಾಧಿಕಾರಿ ಪ್ರಿಯಾಂಗಾ ಎಂ. ಡಾ.ವಿನೋದ ಭೂತೆ ಇದ್ದರು.

ಜನ ತಮ್ಮ ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಜನಸಂದಣಿ ಸೇರುವ ಸಭೆ-ಸಮಾರಂಭಗಳಲ್ಲಿ ಅನಾವಶ್ಯಕವಾಗಿ ಭಾಗವಹಿಸದೇ, ಕೆಲ ದಿನಗಳ ಕಾಲ ಜನ ಸ್ವಯಂ ನಿರ್ಬಂಧ ಹೇರಿಕೊಳ್ಳುವುದು ಒಳ್ಳೆಯದು. ಡಾ.ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ, ಉತ್ತರ ಕನ್ನಡ

ಕರೊನಾ ಹೆಲ್ಪಡೆಸ್ಕ್ ಆರಂಭ: ಸಿದ್ದಾಪುರ: ಎಲ್ಲ ಕಡೆಗಳಲ್ಲಿ ಕರೊನಾ ವೈರಸ್ ಹರಡುತ್ತಿರುವುದರಿಂದ ತಾಲೂಕು ಆರೋಗ್ಯ ಇಲಾಖೆ ಮುನ್ನೇಚ್ಚರಿಕೆಯಾಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಕರೊನಾ ಹೆಲ್ಪ್ ಡೆಸ್ಕ್ ಶುಕ್ರವಾರದಿಂದ ತೆರೆಯಲಾಗಿದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಆಗಮಿಸುವ ಪ್ರಯಾಣಿಕರನ್ನು ಥರ್ಮಲ್ ಸ್ಕಾ್ಯನರ್ ಮೂಲಕ ತಪಾಸಣೆ ನಡೆಸಲಾಗುತ್ತದೆ. ನಿತ್ಯ ಬೆಳಗ್ಗೆ 6ರಿಂದ ರಾತ್ರಿ 8ರವರೆಗೆ ಹೆಲ್ಪ್ ಡೆಸ್ಕ್ ಕಾರ್ಯನಿರ್ವಹಿಸಲಿದೆ. ಇಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯನಿರ್ವಹಿಸಲಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net