

ಚನ್ನಪಟ್ಟಣ : ತಾಲೂಕಿನಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದ್ದು, ನಗರದ ಸಮೀಪಕ್ಕೂ ಗಜಪಡೆ ಮುಖ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ನಗರದ ಮೆಹಂದಿನಗರ ಸೇರಿ ಅಕ್ಕಪಕ್ಕದ ಬಡಾವಣೆಗಳಲ್ಲಿ ಶನಿವಾರ ರಾತ್ರಿ ನಾಲ್ಕು ಕಾಡಾನೆಗಳ ಹಿಂಡು ಸಂಚಾರ ಮಾಡಿ, ನಿವಾಸಿಗಳಿಗೆ ಭಯಹುಟ್ಟಿಸಿದವು. ಕಾಡಾನೆಗಳು ರಾತ್ರಿ ಇಡೀ ಜನವಸತಿ ಪ್ರದೇಶದಲ್ಲೇ ತಿರುಗುತ್ತಾ ದಾಂಧಲೆ ಎಬ್ಬಿಸಿದ್ದು, ಮೆಹಂದಿನಗರದ ಖಾಸಗಿ ಲೇಔಟ್‌ನ ಕಾಂಪೌಂಡ್ ಧ್ವಂಸ ಮಾಡಿವೆ.
ಹಬ್ಬದ ದಿನವೇ ದರ್ಶನ!
ಊರಹಬ್ಬದ ದಿನವೇ ಗ್ರಾಮಕ್ಕೆ ಕಾಡಾನೆಗಳು ಬಂದಿದ್ದು, ಗ್ರಾಮಸ್ಥರು ದಿಕ್ಕಾಪಾಲಾಗಿ ಓಡಿದ ಘಟನೆ ನಗರ ಸಮೀಪದ ಕರಿಯಪ್ಪನದೊಡ್ಡಿಯಲ್ಲಿ ನಡೆದಿದೆ. ಕರಿಯಪ್ಪನದೊಡ್ಡಿಯಲ್ಲಿ ಊರಹಬ್ಬ ನಡೆಯುವ ವೇಳೆ ಏಕಾಏಕಿ ನಾಲ್ಕು ಕಾಡಾನೆಗಳು ಗ್ರಾಮಕ್ಕೆ ನುಗ್ಗಿವೆ. ಈ ವೇಳೆ ದೇವಾಲಯದ ಸಮೀಪ ಇದ್ದ ಜನ ಸ್ಥಳದಿಂದ ಓಡಿದ್ದಾರೆ. ಈ ದೃಶ್ಯಗಳು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿವೆ. ಇಷ್ಟುದಿನ ಕೇವಲ ಕಾಡಂಚಿನ ಗ್ರಾಮಗಳಲ್ಲಿ ಕಾಡಾನೆಗಳು ಉಪಟಳ ನೀಡುತ್ತಿದ್ದವು. ಆದರೆ, ಇತ್ತೀಚೆಗೆ ಅವುಗಳು ನಗರದ ಸನಿಹಕ್ಕೂ ಲಗ್ಗೆ ಇಡುತ್ತಿರುವುದು ಜನತೆಯ ಆತಂಕಕ್ಕೆ ಕಾರಣವಾಗಿದೆ. ಕಾಡಾನೆಗಳ ಉಪಟಳಕ್ಕೆ ಸರ್ಕಾರ ಹಾಗೂ ಇಲಾಖೆ ಕಡಿವಾಣ ಹಾಕುವಂತೆ ಆಗ್ರಹಿಸಿದ್ದಾರೆ.
ಪಕ್ಕದ ತೆಂಗಿನಕಲ್ಲು ಅರಣ್ಯ ಪ್ರದೇಶದಿಂದ ಕಾಡಾನೆಗಳು ಬಂದಿವೆ. ಶೀಘ್ರವೇ ಅವುಗಳನ್ನು ಕಾಡಿಗಟ್ಟುವ ಕೆಲಸ ಮಾಡುತ್ತೇವೆ. ಅಲ್ಲದೇ ಕಾಡಾನೆಗಳ ಚಲನವಲನಗಳ ಮೇಲೆ ಡ್ರೋನ್ ಮೂಲಕ ನಿಗಾ ಇರಿಸಲಾಗಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.