

ಕಾರವಾರ: ಜಿಲ್ಲೆಯಲ್ಲಿ ಗುರುವಾರದಿಂದ ಶುರುವಾರ ಮಳೆ ಶುಕ್ರವಾರವೂ ಮುಂದುವರಿದಿದೆ. ಸೆ.12 ಹಾಗೂ 13 ರಂದು ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಶುಕ್ರವಾರ ಬೆಳಗಿನ ವರದಿಯಂತೆ ಅಂಕೋಲಾದಲ್ಲಿ 4, ಭಟ್ಕಳ- 65, ಹಳಿಯಾಳ- 4.4, ಹೊನ್ನಾವರ- 19.8, ಕಾರವಾರ- 55.5, ಕುಮಟಾ- 11.2, ಮುಂಡಗೋಡ- 9. ಸಿದ್ದಾಪುರ- 2.6, ಶಿರಸಿ-15.5, ಜೊಯಿಡಾ- 3, ಯಲ್ಲಾಪುರದಲ್ಲಿ 5.2 ಮಿಮೀ ಮಳೆಯಾಗಿದೆ. ಶುಕ್ರವಾರ ಇಡೀ ದಿನ ಕರಾವಳಿಯ ಎಲ್ಲ ತಾಲೂಕು ಹಾಗೂ ಘಟ್ಟದ ಮೇಲಿನ ಶಿರಸಿ, ಯಲ್ಲಾಪುರ, ಸಿದ್ದಾಪುರ ಭಾಗದಲ್ಲೂ ಎಡಬಿಡದೇ ಮಳೆಯಾಯಿತು.
ದಡ ಸೇರಿದ ದೋಣಿಗಳು: ಅರಬ್ಬಿ ಸಮುದ್ರದಲ್ಲಿ ಬಿರುಗಾಳಿ ಎದ್ದಿದ್ದು, ಅಬ್ಬರದ ಅಲೆಗಳು ಏಳುತ್ತಿವೆ. ಇದರಿಂದ ಗೋವಾ, ಮಂಗಳೂರಿನ ಮಲ್ಪೆ ಸೇರಿ ಬೇರೆ ಬೇರೆ ಬಂದರುಗಳ 100 ಕ್ಕೂ ಅಧಿಕ ಮೀನುಗಾರಿಕೆ ಬೋಟ್ಗಳು ಕಾರವಾರ ತೀರಕ್ಕೆ ಬಂದು ರಕ್ಷಣೆ ಪಡೆದಿವೆ. ಇದ್ದಕ್ಕಿದ್ದಂತೆ ಹೆಚ್ಚಿನ ಬೋಟ್ಗಳ ಬೈತಖೋಲ್ ಬಂದರಿನ ಸಮೀಪ ಬಂದು ಲಂಗರು ಹಾಕಿದ್ದರಿಂದ ಕೋಸ್ಟ್ಗಾರ್ಡ್ ಹಾಗೂ ವಾಣಿಜ್ಯ ಹಡಗುಗಳ ಓಡಾಟಕ್ಕೆ ವ್ಯತ್ಯಯ ಉಂಟಾಯಿತು. ಇದರಿಂದ ಬಂದರು ಅಧಿಕಾರಿಗಳು ಟಗ್ ಬೋಟ್ನಲ್ಲಿ ತೆರಳಿ ಮೀನುಗಾರಿಕೆ ಬೋಟ್ಗಳನ್ನು ಹೊರಗೆ ನಿಲ್ಲಿಸುವಂತೆ ಸೂಚನೆ ನೀಡುತ್ತಿರುವುದು ಕಂಡುಬಂತು.
24 ಮೀನುಗಾರರ ರಕ್ಷಣೆ; ಕಾರವಾರ: ಇಂಜಿನ್ ಸ್ಥಗಿತವಾಗಿದ್ದರಿಂದ ಅಪಾಯಕ್ಕೆ ಸಿಲುಕಿದ್ದ ಮೀನುಗಾರಿಕೆ ಬೋಟ್ನಲ್ಲಿದ್ದ 24 ಮೀನುಗಾರರನ್ನು ಕೋಸ್ಟ್ ಗಾರ್ಡ್ ರಕ್ಷಿಸಿದೆ. ಸೆ. 9 ರಂದು ಮೀನುಗಾರಿಕೆಗೆ ತೆರಳಿದ್ದ ಭಟ್ಕಳ ಮೂಲದ ನೌಷಾದ್ ಖಾನ್ ಅವರಿಗೆ ಸೇರಿದ ಕಮರುಲ್ ಬಾಹರ್ ಎಂಬ ಪರ್ಸೀನ್ ಬೋಟ್ ತೀರದಿಂದ ಸುಮಾರು 15 ನಾಟಿಕಲ್ ಮೈಲ್ನ ಆಚೆಗೆ ಆಳ ಸಮುದ್ರದಲ್ಲಿ ಸೆ. 10 ರಂದು ಅಪಾಯಕ್ಕೆ ಸಿಲುಕಿತ್ತು. ಇಂಜಿನ್ ಬಂದ್ ಆಗಿತ್ತು. ಬಿರುಗಾಳಿ ಇರುವುದರಿಂದ ಬೋಟ್ ಮುಳುಗುವ ಅಪಾಯವಿತ್ತು. ಇದರಿಂದ ಬೋಟ್ ಮಾಲೀಕರು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರ ಸಹಾಯ ಕೋರಿದ್ದರು. ಅವರ ಕೋರಿಕೆಯಂತೆ ಮಂಗಳೂರಿನಿಂದ ಆಗಮಿಸಿದ ಕಸ್ತೂರಬಾ ಗಾಂಧಿ ಎಂಬ ಕೋಸ್ಟ್ ಗಾರ್ಡ್ ಹಡಗು ಭಟ್ಕಳದ ಎಲ್ಲ 24 ಮೀನುಗಾರರನ್ನು ಸುರಕ್ಷಿತವಾಗಿ ರಕ್ಷಿಸಿ ಶುಕ್ರವಾರ ಮಧ್ಯಾಹ್ನ ಕಾರವಾರಕ್ಕೆ ಕರೆತಂದಿದೆ. ಭಟ್ಕಳ ತಂಜಿಂ ಮುಖಂಡರು ಮೀನುಗಾರರನ್ನು ಸ್ವಾಗತಿಸಿ ಕೋಸ್ಟ್ಗಾರ್ಡ್ ಕಾರ್ಯಕ್ಕೆ ಅಭಿನಂದನೆ ಸಲ್ಲಿಸಿದರು.