ಕರವೇ ಕಾರ್ಯಕರ್ತರಿಂದ ಪ್ರತಿಭಟನೆ

oppo_2
oppo_2
Published on

ಮದ್ದೂರು: ನಗರದ ಸೇರಿದಂತೆ ತಾಲೂಕಿನ ಎಲ್ಲ ಅಂಗಡಿ ಮುಂಗಟ್ಟು ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಾಹೀರಾತು ಫಲಕಗಳು ಕಡ್ಡಾಯವಾಗಿ ಕನ್ನಡ ಭಾಷೆಯೇ ಬಳಕೆ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಗುರುವಾರ ಕಚೇರಿ ಮುಂದೆ ಆಗಮಿಸಿದ ವೇದಿಕೆ ಕಾರ್ಯಕರ್ತರು ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿತನ ಪ್ರದರ್ಶನ ಮಾಡುತ್ತಿದ್ದಾರೆಂದು ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆಯ ತಾಲೂಕು ಅಧ್ಯಕ್ಷ ಮಣಿಗೆರೆ ರಾಮಚಂದ್ರೇಗೌಡ ಮಾತನಾಡಿ, ರಾಜ್ಯದಲ್ಲೇ ಮಂಡ್ಯ ಜಿಲ್ಲೆಯಲ್ಲಿ ಅತಿ ಹೆಚ್ಚು ಕನ್ನಡ ಮಾತನಾಡುವವರ ಸಂಖ್ಯೆ ಹೆಚ್ಚಿರುವುದು ಹೆಮ್ಮೆಯ ವಿಷಯವಾಗಿದೆ. ರಾಜ್ಯದ ಅಧಿಕೃತ ಭಾಷೆ ಕನ್ನಡವಾಗಿದೆ. ರಾಜ್ಯ ಸರ್ಕಾರದ ನಿಬಂಧನೆಗಳ ಪ್ರಕಾರ ವ್ಯಾಪಾರಸ್ಥರು, ಕಂಪನಿಗಳು, ಜಾಹೀರಾತು ಸಂಸ್ಥೆಗಳು ತಮ್ಮ ನಾಮಫಲಕಗಳಲ್ಲಿ ಬಹುತೇಕ ಹೆಚ್ಚಾಗಿ ಕನ್ನಡ ಭಾಷೆಯನ್ನೇ ಬಳಸಬೇಕು. ಆದರೆ ಅನ್ಯ ಭಾಷೆ ಬಳಸಿದ್ದಾರೆ. ಇದನ್ನು ನೋಡಿದರೂ ನೋಡದಂತೆ ಅಧಿಕಾರಿಗಳು ಇರುವುದು ಬೇಸರ ಸಂಗತಿಯಾಗಿದೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವ್ಯಾಪಾರಸ್ಥರು ತಮ್ಮ ಅಂಗಡಿಗಳ ಮುಂದೆ ಹಾಕುವ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬರಹ ಹಾಕಬೇಕು ಹಾಗೂ ಹೆದ್ದಾರಿಯಲ್ಲಿ ಹಾಕಿರುವ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಬೇಕು. ಇಲ್ಲದಿದ್ದರೆ ಅಂತಹ ಅಂಗಡಿ ಮಾಲೀಕರಿಗೆ ಹಾಗೂ ಕಂಪನಿಯವರಿಗೆ ನೋಟಿಸ್ ನೀಡಬೇಕೆಂದು ಆಗ್ರಹಿಸಿದರು.

ಒಂದು ವೇಳೆ ಈ ಕೆಲಸ ತಾಲೂಕು ಆಡಳಿತದ ವತಿಯಿಂದ ಆಗಲ್ಲ ಎಂದು ತಿಳಿಸಿದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಆಂಗ್ಲಭಾಷೆಯ ನಾಮಫಲಕಗಳನ್ನು ತೆರವುಗೊಳಸಿ ಕನ್ನಡ ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸ್ಥಳಕ್ಕೆ ಆಗಮಿಸಿ ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ ಮನವಿ ಸ್ವೀಕರಿಸಿ ಮಾತನಾಡಿ, ಈ ಸಂಬಂಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರತಿಭಟನೆಯಲ್ಲಿ ವೇದಿಕೆಯ ತಾಲೂಕು ಮಹಿಳಾ ಅಧ್ಯಕ್ಷೆ ಪ್ರಭಾವತಿ ಬೋರೇಗೌಡ, ಉಪಾಧ್ಯಕ್ಷರಾದ ಗಣೇಶ್, ಗಿರೀಶ್, ಕಾರ್ಯದರ್ಶಿ ಪುಟ್ಟರಾಜು, ಮುಖಂಡರಾದ ಶಿವರಾಜು, ಕಾಂತರಾಜು, ಮದ್ದೂರು ಮಹದೇವು, ವಸಂತಮ್ಮ, ನಂದಿನಿ, ಶಿವಮಾದು, ಶಿವರಾಜ್, ನಾಗೇಶ್, ಕಿರಣ್, ರಘುಪತಿ, ಕಾಂತರಾಜು, ಲೋಕೇಶ್‌ಕುಮಾರ್, ಪುರುಷೋತ್ತಮ್, ವರ್ಷನ್, ಮಹೇಶ್, ಹೇಮಂತ್, ಮಂಜೇಶ್‌ಕುಮಾರ್, ಭರತ್, ಜಯರಾಮ್, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net