ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ

19 apr tnp 01
Published on

ತಿ.ನರಸೀಪುರ: ವ್ಯವಸಾಯಕ್ಕೆ ಚಿನ್ನಾಭರಣಗಳ ಮೇಲೆ ರೈತರು ಪಡೆದ ಸಾಲಗಳಿಗೆ ಬಡ್ಡಿ ಹಣ ಕಟ್ಟಿಸಿಕೊಂಡು ರೈತರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸುವಂತೆ ಆಗ್ರಹಿಸಿ ಕಬ್ಬು ಬೆಳೆಗಾರರ ಸಂಘದ ರೈತ ಮುಖಂಡರು ತಾಲೂಕಿನ ಬನ್ನೂರು ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ) ಮುಂಭಾಗ ಶನಿವಾರ ಪ್ರತಿಭಟನೆ ನಡೆಸಿದರು.

ಬ್ಯಾಂಕ್ ಮುಂಭಾಗ ಜಮಾವಣೆಗೊಂಡಿದ್ದ ರೈತ ಮುಖಂಡರು ಹಾಗೂ ಕಾರ್ಯಕರ್ತರು, ರೈತರು ಚಿನ್ನಾಭರಣಗಳ ಮೇಲೆ ಕೃಷಿ ಸಾಲ ಪಡೆದಿದ್ದು, ಸಾಲದ ಅವಧಿ ಮುಗಿದಿರುವ ರೈತರಿಗೆ ಬ್ಯಾಂಕ್ ಶಾಖೆಯಲ್ಲಿ ಬಡ್ಡಿ ಹಣ ಕಟ್ಟಿಸಿಕೊಂಡು ಹೊಸ ಸಾಲವಾಗಿ ರಿನಿವಲ್ ಮಾಡಿಕೊಡುತ್ತಿದ್ದರು. ಆದರೆ ಈಗ ಅಸಲು-ಬಡ್ಡಿ ಸೇರಿಸಿ ಕಟ್ಟಬೇಕೆಂದು ನೋಟಿಸ್ ನೀಡಿ ಕಿರುಕುಳ ನೀಡುತ್ತಿರುವ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್ ಮಾತನಾಡಿ, ರೈತರ ಆಭರಣದ ಮೇಲಿನ ಕೃಷಿ ಸಾಲವನ್ನು ನವೀಕರಣಗೊಳಿಸದೆ ಅಸಲು-ಬಡ್ಡಿ ವಸೂಲಿ ಮಾಡಲು ಮುಂದಾಗಿರುವುದರಿಂದ ರೈತರಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಕಾರಣ ರೈತರಿಗೆ ಯಾವುದೇ ಸಂಬಳ ಬರುವುದಿಲ್ಲ, ಮಾಸಿಕ ಹಾಗೂ ತ್ರೈಮಾಸಿಕ ಆದಾಯ ಬರುವುದಿಲ್ಲ, ಅಲ್ಲದೆ ಬರಗಾಲ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಹವಾಮಾನ ವೈಪರೀತ್ಯದಿಂದ ಬೆಳೆ ಬೆಳೆದರೂ ಕೈಗೆ ಬಂದ ತುತ್ತು ಬಾಯಿಗೆ ಸಿಗದಂತಾಗಿದ್ದು, ರೈತರು ಹಲವಾರು ಸಮಸ್ಯೆಗಳಿಗೆ ಸಿಲುಕಿ ಜೀವನ ನಿರ್ವಹಣೆ ನಡೆಸುವುದೇ ಕಷ್ಟವಾಗುತ್ತಿದೆ. ಆದ್ದರಿಂದ ಬಂಗಾರದ ಅಭರಣಗಳ ಸಾಲದ ಮೇಲೆ ಹಾಗೂ ಇತರ ಸಾಲಗಳ ಮೇಲಿನ ಬಡ್ಡಿ ಕಟ್ಟಿಸಿಕೊಂಡು ರಿನಿವಲ್ ಮಾಡಿಕೊಡುವಂತೆ ಒತ್ತಾಯಿಸಿದರು.

ಬಳಿಕ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮೈಸೂರು ಆಡಳಿತ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕರಿಗೆ ಒತ್ತಾಯ ಪತ್ರವನ್ನು ಶಾಖಾ ವ್ಯವಸ್ಥಾಪಕರ ಮೂಲಕ ಸಲ್ಲಿಸಲಾಯಿತು.

ಕಬ್ಬು ಬೆಳೆಗಾರರ ಸಂಘದ ತಾಲೂಕು ಉಪಾಧ್ಯಕ್ಷ ಹೆಗ್ಗೂರು ರಂಗರಾಜು, ಮುಖಂಡರಾದ ಅತ್ತಹಳ್ಳಿ ಸಿ.ಲಿಂಗಣ್ಣ, ಅರುಣ್ ಕುಮಾರ್, ಬನ್ನೂರು ಸೂರಿ, ಪಿ.ಚೇತನ್, ಎ.ಎಂ. ರಾಮಕೃಷ್ಣ, ಕುಂತನಹಳ್ಳಿ ಕುಳ್ಳೆಗೌಡ, ರಾಮ, ಆತ್ತಹಳ್ಳಿ ಮಧು, ಎ.ಪಿ.ನವೀನ, ಹೊನ್ನಯ್ಯ, ಚಾಮನಹಳ್ಳಿ ನಿಂಗಣ್ಣ, ಕರಿಯಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net