ಕಬ್ಬು ನುರಿಸಲು ಪರವಾಣಿಗೆ ನೀಡಬೇಡಿ

bkt-24-2
ಬಾಗಲಕೋಟೆ ನಗರದ ಹೊಸ ಪ್ರವಾಸಿ ಮಂದಿರದಲ್ಲಿ ಸೋಮವಾರ ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Published on

ಬಾಗಲಕೋಟೆ: ಈ ಹಿಂದಿನ ವರ್ಷ ಸರ್ಕಾರವೇ ನಿಗದಿ ಮಾಡಿದ್ದ ಪ್ರತಿ ಟನ್‌ಗೆ ೧೫೦ ರೂ. ಹೆಚ್ಚುವರಿ ಹಣ ಹಾಗೂ ಬಾಕಿ ಮೊತ್ತ ಪಾವತಿ ಮಾಡದ ಹೊರತು ಪ್ರಸಕ್ತ ಹಂಗಾಮಿನಲ್ಲಿ ಕಬ್ಬು ನುರಿಸಲು ಕಾರ್ಖಾನೆಗಳಿಗೆ ಪರವಾಣಿಗೆ ನೀಡಬಾರದು. ಬಾಕಿ ನೀಡುವ ಕಾರ್ಖಾನೆಗಳಿಗೆ ಮಾತ್ರ ಕಬ್ಬು ಅರೆಯಲು ಅವಕಾಶ ನೀಡಬೇಕು ಎಂದು ರಾಜ್ಯ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಹೇಳಿದರು.

ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ ೭೦೦ ಕೋಟಿ ರೂ.ಪಾವತಿ ಮಾಡುವ ಬಾಕಿ ಇದೆ. ಅವುಗಳ ಮೊತ್ತ ಜಮೆ ಮಾಡಲು ಸರ್ಕಾರ ಮುತುವರ್ಜಿ ವಹಿಸಬೇಕು. ಸಾಕಷ್ಟು ಸಮಯಾವಾಕಾಶವಿದೆ. ಆಯಾ ಜಿಲ್ಲಾಡಳಿತ, ಸಕ್ಕರೆ ಆಯುಕ್ತರು, ಸಚಿವರು, ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರಿಂದ ಬರ, ನೆರೆಯಿಂದ ತತ್ತರಿಸಿರುವ ಕಬ್ಬು ಬೆಳೆಗಾರರಿಗೆ ಸಹಾಯವಾಗುತ್ತದೆ ಎಂದರು.
ಇನ್ನು ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ತೂಕದಲ್ಲಿ ಮೋಸವಾಗುತ್ತಿದೆ. ರೈತರು ಅನೇಕ ಸಾರಿ ಈ ಬಗ್ಗೆ ಸಾಕಷ್ಟು ದೂರು ನೀಡಿದ್ದಾರೆ. ಪಾರದರ್ಶಕವಾದ ತೂಕ ನಡೆಬೇಕಾಗಿದೆ. ಹೀಗಾಗಿ ಸರ್ಕಾರ ಸಕ್ಕರೆ ಕಾರ್ಖಾನೆ ಎದುರು ಕಬ್ಬು ತೂಕದ ಯಂತ್ರ ಸ್ಥಾಪಿಸಿ ಕಬ್ಬು ಬೆಳೆಗಾರರಿಗೆ ಆಗುತ್ತಿರುವ ಮೋಸ ತಪ್ಪಿಸಬೇಕು. ಬೆಳೆ, ಬೆಲೆ ನಷ್ಟ, ಸಾಲ ಹಾಗೂ ಸರ್ಕಾರಗಳ ನೀತಿ, ನಿರೂಪಣೆ ಸೇರಿದಂತೆ ನಾನಾ ಕಾರಣಗಳಿಂದ ರೈತರ ಆತ್ಯಹತ್ಯೆಗೆ ಕಾರಣವಾಗಿದೆ. ಕರ್ನಾಟಕವು ದೇಶದಲ್ಲಿ ರೈತರ ಆತ್ಮಹತ್ಯೆಯಲ್ಲಿ ಎರಡನೇ ಸ್ಥಾನದಲ್ಲಿರುವುದು ಆತಂಕಕಾರಿ ವಿಷಯವಾಗಿದೆ ಎಂದು ಹೇಳಿದರು.

ರಾಜ್ಯ ಉಪಾಧ್ಯಕ್ಷ ಸುರೇಶ ಮಾ ಪಾಟೀಲ, ರಾಜ್ಯ ಸಂಘಟನಾ ಕಾರ್ಯದರ್ಶಿ ಹತ್ತಳ್ಳಿ ದೇವರಾಜ, ಧಾರವಾಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ, ಬಾಗಲಕೋಟೆ ಜಿಲ್ಲಾ ಉಪಾಧ್ಯಕ್ಷ ಕಲ್ಲಪ್ಪ ಬಿರದಾರ, ರೇವಣ್ಣಯ್ಯ ಹಿರೇಮಠ, ಬೆಳಗಾವಿ ಜಿಲ್ಲಾ ಉಪಾಧ್ಯಕ್ಷ ಬಾಪುಗೌಡ ಪಾಟೀಲ ಇತರರು ಇದ್ದರು.

ಜು.೨೫ ರಂದು ರಾಜ್ಯಮಟ್ಟದ ರೈತ ಜಾಗೃತಿ ಕಾರ್ಯಗಾರ
ಬಾಗಲಕೋಟೆ: ರಾಜ್ಯ ರೈತರ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳಗಾರರ ಸಂಘದ ಆಶ್ರಯದಲ್ಲಿ ಜು.೨೫ ರಂದು ಕೂಡಲಸ ಸಂಗಮದಲ್ಲಿ ರಾಜ್ಯಮಟ್ಟದ ರೈತ ಜಾಗೃತಿ ಕಾರ್ಯಾಗಾರ ಬೆಳಗ್ಗೆ ೧೧.೩೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ ಶಾಂತಕುಮಾರ ಅಧ್ಯಕ್ಷತೆ ವಹಿಸಲಿದ್ದಾರೆ. ಹೋರಾಟ ಸಂಘಟನೆ ಮಹತ್ವ ಕುರಿತು ಲೇಖಕ ಮಲ್ಲಿಕಾರ್ಜುನ ಹೆಗ್ಗಳಿಗಿ ಉಪನ್ಯಾಸ ನೀಡಲಿದ್ದಾರೆ. ೫ ಗಂಟೆಗೆ ಸಭೆ ನಡೆಯಲಿದೆ. ಜ.೨೬ ರಂದು ಬೆಳಗ್ಗೆ ೯ ಗಂಟೆಗೆ ಕಬ್ಬಿನ ಬೇಸಾಯದಲ್ಲಿ ಹನಿ ನೀರಾವರಿ ಬಳಕೆ ಕುರಿತು ಚಿದಂಬರ ಜೋಶಿ, ೧೧ ಗಂಟೆಗೆ ಕಬ್ಬಿನಿಂದ ಬೆಲ್ಲ ಉತ್ಪಾದನೆ ಕುರಿತು ಕಲ್ಮೇಶ ಯಲ್ಲದಗಿ ಉಪನ್ಯಾಸ ನೀಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net