

ಮಂಜುನಾಥ ಕೋಳಿಗುಡ್ಡ ಬೆಳಗಾವಿ: ಮಳೆ ಕೊರತೆ, ಜಲಾಶಯಗಳಲ್ಲಿ ನೀರು ತುಂಬಿಲ್ಲದ ಕಾರಣ ಪ್ರಸಕ್ತ ಸಾಲಿನಲ್ಲಿ ಕಬ್ಬು ಬೆಳೆಯುವ ಪ್ರಮಾಣ ಅಧಿಕ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಸರಿಸುಮಾರು 8 ರಿಂದ 10 ಸಾವಿರ ಹೆಕ್ಟೇರ್ ಪ್ರದೇಶ ಇಳಿಮುಖವಾಗಿದೆ.
ರಾಜ್ಯದಲ್ಲಿಯೇ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ ಬೆಳಗಾವಿಯಾಗಿದ್ದು, ವಾರ್ಷಿಕ ಸರಾಸರಿ 2.94 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಆದರೆ, ಈ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದಿರುವ ಹಿನ್ನೆಲೆಯಲ್ಲಿ ಜೂನ್, ಜುಲೈ, ಆಗಸ್ಟ್‌ನಲ್ಲಿ ಹೊಸ ಕಬ್ಬು ನಾಟಿ ಮಾಡಿಲ್ಲ. ಕೆಲವು ಕಡೆ ನೀರಿನ ಲಭ್ಯತೆ ಆಧಾರದ ಮೇಲೆ ನಾಟಿ ಮಾಡಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಸುಮಾರು 10 ಸಾವಿರ ಹೆಕ್ಟೇರ್ ಹೊಸ ಕಬ್ಬಿನ ಬೆಳೆಯುವ ಪ್ರದೇಶ ಕಡಿಮೆಯಾಗಿದೆ.
ನೀರಾವರಿ ನಂತರ ಮಳೆ ಮೇಲೆ ಅವಲಂಬಿತವಾಗಿರುವ ಕಬ್ಬು ಬೆಳೆಯಲು 12 ತಿಂಗಳು ಕಾಲಾವಕಾಶ ಬೇಕು. ಕಬ್ಬಿಗೆ ಬಹುತೇಕ ವರ್ಷವೀಡಿ ನೀರು ಅಗತ್ಯವಿರುತ್ತದೆ. ಆದರೆ, ಮಳೆ ಕೊರತೆ ಕಾರಣ ಹಿಡಕಲ್, ನವೀಲುತೀರ್ಥ ಜಲಾಶಯಗಳ ವ್ಯಾಪ್ತಿಯ ನೀರಾವರಿ ಸೌಲಭ್ಯ ಅವಲಂಬಿಸಿರುವ ರೈತರಿಗೆ ದೀರ್ಘಾವಧಿ ಬೆಳೆ ಬೆಳೆಯದಂತೆ ಪರಿಸ್ಥಿತಿ ಎದುರಾಗಿದೆ.
ಜಲಾಶಯಗಳಲ್ಲಿ ಕಡಿಮೆ ನೀರಿರುವ ಕಾರಣ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ, ನೀರಿಲ್ಲದೆ ರೈತರು ಕಬ್ಬು ಬೆಳೆಯುವ ಸಾಹಸಕ್ಕೆ ಮುಂದಾಗುತ್ತಿಲ್ಲ. ಹೀಗಾಗಿ, ಅಲ್ಪಾವಧಿಯ ಬೆಳೆಗಳ ಕಡೆ ತಮ್ಮ ಗಮನ ಹರಿಸುವ ಪರಿಸ್ಥಿತಿ ಎದುರಾಗಿದೆ. ಸರ್ಕಾರ ನೀರಾವರಿ ಪ್ರದೇಶ ರೈತರಿಗೂ ಬರ ಬೆಳೆಹಾನಿ ಕೊಡಲು ಕ್ರಮ ವಹಿಸಬೇಕು. ಸಾವಿರಾರು ರೂ. ವೆಚ್ಚ ಮಾಡಿ ಕಬ್ಬು ನಾಟಿ ಮಾಡಿರುವ ರೈತರು ಇದೀಗ ನೀರಿಲ್ಲದೆ ಕಬ್ಬಿನ ಬೆಳೆ ಒಣಗುತ್ತಿರುವುದು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದೇವೆ ಎಂದು ಕಬ್ಬು ಬೆಳೆಗಾರರಾದ ಮಂಜುನಾಥ ಕೊಪ್ಪದ, ನಿಂಗಪ್ಪ ಹೊರಟ್ಟಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
2019-20ನೇ ಸಾಲಿನ ಅವಧಿಯಲ್ಲಿ ಜಿಲ್ಲೆಯ 2.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿತ್ತು. ಅದರಲ್ಲಿ ಕುಳೆ ಕಬ್ಬು- 165398 ಹೆಕ್ಟರ್, ಹೊಸ ಕಬ್ಬು -70753 ಹೆಕ್ಟರ್ ಪ್ರದೇಶಲ್ಲಿ ಬೆಳೆಯಲಾಗಿತ್ತು. 2020-21ನೇ ಸಾಲಿನ ಅವಧಿಯಲ್ಲಿ 2.64 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಅದರಲ್ಲಿ ಕುಳೆ ಕಬ್ಬು -1.68 ಲಕ್ಷ ಹೆಕ್ಟೇರ್, ಹೊಸ ಕಬ್ಬು 96.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. 2021-22ನೇ ಸಾಲಿನ ಅವಧಿಯಲ್ಲಿ 2.60 ಲಕ್ಷ ಹೆಕ್ಟೇರ್ ಹಾಗೂ 2022-23ನೇ ಸಾಲಿನಲ್ಲಿ 2.89 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಾಗಿದೆ.
ಈ ವರ್ಷ ಮುಂಗಾರು ಹಂಗಾಮಿನಲ್ಲಿ ರೈತರು ಮುಂಗಡವಾಗಿ ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬೀಜ, ರಸಗೊಬ್ಬರ ಪಡೆಯಲು ಮುಂದಾಗಿದ್ದರು. ಆದರೆ, ಅನಾವೃಷ್ಟಿಯಿಂದಾಗಿ ರೈತರು ಹೊಸದಾಗಿ ಕಬ್ಬು ಬೆಳೆಗಳನ್ನು ನಾಟಿ ಮಾಡಿಲ್ಲ. ಅಲ್ಲದೆ, ನದಿ ದಡದ, ಕೊಳವೆ, ತೆರೆದ ಬಾವಿ ಅವಲಂಬಿತ ರೈತರೇ ಅಧಿಕ ಪ್ರಮಾಣದಲ್ಲಿ ಕಬ್ಬು ನಾಟಿ ಮಾಡಿಲ್ಲ. ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಕಬ್ಬಿನ ಇಳುವರಿ ಕಡಿಮೆಯಾಗಿದೆ ಎಂದು ಎಸ್.ನಿಜಲಿಂಗಪ್ಪ ಸಕ್ಕರೆ ಸಂಸ್ಥೆ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರತಿ ವರ್ಷ ಜೂನ್‌ನಿಂದ ಆಗಸ್ಟ್ ಅವಧಿಯಲ್ಲಿ ರೈತರು ಹೊಸ ಕಬ್ಬು ನಾಟಿ ಮಾಡಿಕೊಂಡು ಬರುತ್ತಿದ್ದರು. ಆದರೆ, ಈ ವರ್ಷ ಮುಂಗಾರು ಹಂಗಾಮಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗದಿರುವ ಕಾರಣ ರೈತರು ಹೊಸದಾಗಿ ಕಬ್ಬು ನಾಟಿ ಮಾಡಿಲ್ಲ. ಮುಂದೆ ಉತ್ತಮ ಮಳೆ ಸುರಿದರೆ ಅಕ್ಟೋಬರ್‌ನಲ್ಲಿ ಕಬ್ಬು ನಾಟಿ ಮಾಡಲು ಅವಕಾಶ ಇದೆ.|ಶಿವನಗೌಡ ಪಾಟೀಲ, ಕೃಷಿ ಇಲಾಖೆ ಜಂಟಿ ನಿರ್ದೇಶಕ