

ಕೆ.ಆರ್.ನಗರ: ಕರ್ನಾಟಕ ಸರ್ಕಾರ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುತ್ತಿರುವುದನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಗುರುವಾರ ಕೆ.ಆರ್.ನಗರ ಮತ್ತು ಹುಣಸೂರು ತಾಲೂಕುಗಳ ಕಪ್ಪಡಿ ಕ್ಷೇತ್ರದ ಭಕ್ತರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
400-500 ವರ್ಷಗಳ ಇತಿಹಾಸವಿರುವ ಶ್ರೀಮಂಟೇಸ್ವಾಮಿ ಪರಂಪರೆಯ ಭಾಗವಾಗಿ ಬೊಪ್ಪೇಗೌಡನಪುರ ಮತ್ತು ಮಳವಳ್ಳಿ ಮಠಗಳ ಗುರುಪರಂಪರೆ, ನೀಲಗಾರ, ದೇವರಗುಡ್ಡರ ಹಾಗೂ ಭಕ್ತರು ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ಚನ್ನಪಟ್ಟಣ, ರಾಮನಗರ, ಬೆಂಗಳೂರು, ಶಿವಮೊಗ್ಗ, ಯಾದಗಿರಿ ಭಾಗದವರು ಸುಮಾರು 15-18 ಕೋಮಿನ ಜನಗಳ ಶಿಷ್ಯರು ಧರ್ಮಗುರುವಿನ ದೀಕ್ಷೆ ಪಡೆದಿದ್ದಾರೆ. ಮೈಸೂರು-ಮಂಡ್ಯ-ಚಾಮರಾಜನಗರ ಭಾಗದ ಸುಮಾರು 500 ಗ್ರಾಮಗಳು ಅವಿನಾಭಾವ ಸಂಬಂಧ ಹೊಂದಿರುವ ಒಂದು ಜೀವಂತ ಜಾನಪದ ಬದುಕಿನ ಜೀವನ ಶೈಲಿ ಇದಾಗಿದ್ದು, ಇದು ಕರ್ನಾಟಕ ರೈತಾಪಿ ವರ್ಗದ ಗ್ರಾಮೀಣ ಬದುಕಿನ ಇತಿಹಾಸದ ಜೀವಂತ ಕುರುಹಾಗಿದೆ ಎಂದು ಭಕ್ತರು ವಿವರಿಸಿದರು.
ಸರಳ ಹಾಗೂ ಪ್ರಸಿದ್ಧವಾದ ಪರಂಪರೆ ಕರ್ನಾಟಕದ ಬಹುದೊಡ್ಡ ಜಾತ್ರೆಗಳ ಸಾಲಿಗೆ ಸೇರಿರುವ ಹೆಗ್ಗಳಿಕೆ ನೀಲಗಾರರ ಶಿಸ್ತು ಮತ್ತು ಭಕ್ತಿಯ ಜತೆಗೆ ಮಠದ ಜತೆಗಿನ ಅವಿನಾಭಾವ ಸಂಬಂಧವನ್ನು ಎತ್ತಿ ಹಿಡಿಯುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಈ ವಿಭಿನ್ನ ಪರಂಪರೆಯ ಕ್ಷೇತ್ರಗಳಾದ ಬೊಪ್ಪಗೌಡನಪುರ, ಮುತ್ತನಹಳ್ಳಿ, ಚಿಕ್ಕಲ್ಲೂರು, ಕುರುಬನಕಟ್ಟೆ, ಕಪ್ಪಡಿ ಕ್ಷೇತ್ರ, ಮಳವಳ್ಳಿ, ಆದಿ ಹೊನ್ನಾಯಕನಹಳ್ಳಿಗಳನ್ನು ಒಳಗೊಂಡು ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಕರ್ನಾಟಕ ಸರ್ಕಾರ ಮುಂದಾಗಿರುವುದು ಮಠದ ಮತ್ತು ನೀಲಗಾರ ಭಕ್ತರ ಮನಸ್ಸಿಗೆ ಅತ್ಯಂತ ತೀವ್ರ ನೋವನ್ನುಂಟು ಮಾಡಿದೆ ಎಂದರು.
ಬೊಪೇಗೌಡನಪುರ ಹಾಗೂ ಮಳವಳ್ಳಿ ಶತಮಾನಗಳಿಂದಲೂ ಸರ್ಕಾರದ ಯಾವುದೇ ದೇಣಿಗೆಯಿಂದಾಗಲಿ ಅಥವಾ ಹಣಕಾಸಿನ ಸಹಾಯವನ್ನು ಪಡೆಯದೆ ಸ್ವಯಂ ಆಗಿ, ಭಕ್ತರು, ನೀಲಗಾರ ದೇವರಗುಡ್ಡರ ಸಹಾಯದಿಂದ ನಡೆದು ಬಂದ ಪರಂಪರೆ ಇದಾಗಿದೆ ಎಂದರು.
ಜಾತ್ರೆ ಕಾರ್ಯಕ್ರಮಗಳಲ್ಲಿ ಸಾವಿರಾರು ಭಕ್ತರಿಗೆ ಅನ್ನ ದಾಸೋಹ, ಗುರುದೀಕ್ಷೆ, ಗದ್ದುಗೆಯ ಪೂಜಾ ವಿಧಿ ವಿಧಾನಗಳು ಮಠಗಳಿಂದ ತಲೆ ತಲೆಮಾರುಗಳಿಂದ ನಡೆದುಕೊಂಡು ಬಂದಿರುತ್ತವೆ. ಅದರಲ್ಲೂ ಬೊಪ್ಪೇಗೌಡನಪುರವನ್ನು ಹೊರತುಪಡಿಸಿ ಬಾಕಿ ಎಲ್ಲ ಕ್ಷೇತ್ರಗಳಲ್ಲೂ ಗದ್ದಿಗೆಗಳು ಕಾಡಿನ ಅಂಚುಗಳಲ್ಲಿ ಅಥವಾ ಊರುಗಳ ಹೊರಭಾಗದ ನಿರ್ಜನ ಪ್ರದೇಶದಲ್ಲಿ ಇದ್ದು, ಇಲ್ಲಿ ಮೂಲ ಸೌಕರ್ಯಗಳು ಇಲ್ಲದ ಕಾಲದಿಂದಲೂ ತಲೆ ತಲೆಮಾರುಗಳಿಂದ ಮಠದ ಭಕ್ತರು ಹಾಗೂ ನೀಲಗಾರರ ದಾನ ಧರ್ಮದಿಂದ ಬೆಳೆದಂತಹ ಪರಂಪರೆ ಇದಾಗಿದೆ. ಪ್ರಾಧಿಕಾರ ರಚನೆಗೆ ಮುಂದಾಗಿರುವ ಕಾರ್ಯವನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತ್ತೇವೆ ಎಂದರು.
ಪ್ರತಿಭಟನೆಯಲ್ಲಿ ಡಿ.ಕೆ.ಕೊಪ್ಪಲು ಅಪ್ಪಾಜೀಗೌಡ, ನಿವೃತ್ತಾ ಡಿಡಿಪಿಐ ರಾಮಲಿಂಗು, ಮುಖಂಡರಾದ ಶ್ರೀಧರ್, ರಾಮಚಂದ್ರ, ರಾಜೇಶ್ವರಿ, ಸಿ.ಕೆ.ರಾಮಕೃಷ್ಣ, ಹರೀಶ್, ಡಿ.ಕೆ.ಕೊಪ್ಪಲು ಹಿರಣಯ್ಯ, ಕೆಂಪುಗೌಡ, ರಾಮಚಂದ್ರಗೌಡ, ವೆಂಕಟರಾಮು, ರವಿ ಮತ್ತಿತರರು ಪಾಲ್ಗೊಂಡಿದ್ದರು.