ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್

29spt2
Published on

ಸೋಮವಾರಪೇಟೆ: ಕನ್ನಡ ನಾಡು, ನುಡಿಯ ಸಂರಕ್ಷಣೆ ಮತ್ತು ಕನ್ನಡ ಭಾಷೆಗಾಗಿ ಶ್ರಮಿಸಲು ಕಟ್ಟಲಾಗಿರುವ ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ ಎಂದು ಸಾಹಿತ್ಯ ಪರಿಷತ್‌ನ ಮಾಜಿ ಜಿಲ್ಲಾಧ್ಯಕ್ಷ ಟಿ.ಪಿ.ರಮೇಶ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾ, ಸೋಮವಾರಪೇಟೆ ತಾಲೂಕು ಮತ್ತು ಹೋಬಳಿ ಘಟಕದ ವತಿಯಿಂದ ಬುಧವಾರ ಸಂಜೆ ಪಟ್ಟಣದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಸಾಹಿತ್ಯ ಪರಿಷತ್ ಸಂಸ್ಥಾಪನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

1915ರಲ್ಲಿ ಮೈಸೂರು ಅರಸರಾಗಿದ್ದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 5 ಸಾವಿರ ರೂ. ದಾನವಾಗಿ ನೀಡಿ, ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡಿದರು. ಮುಂದೆ 1935ರಲ್ಲಿ ಕನ್ನಡ ಸಾಹಿತ್ಯ ಪರಿಷತ್ ಎಂದು ನಾಮಕರಣವಾಯಿತು. ಸಮೃದ್ಧವಾಗಿರುವ ಕನ್ನಡ ಸಾಹಿತ್ಯವನ್ನು ಮತ್ತಷ್ಟು ಶ್ರೀಮಂತಗೊಳಿಸಿ ನಾಡಿನ ಮೂಲೆಮೂಲೆಗೆ ಕನ್ನಡ ಕಂಪನ್ನು ಪಸರಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ಸದ್ದಿಲ್ಲದೆ ಮಾಡುತ್ತಿದೆ ಎಂದು ಹೇಳಿದರು.

ಕೊಡಗು ಸಾಹಿತ್ಯ ಕೃಷಿಯಲ್ಲಿ ಬೇರೆ ಜಿಲ್ಲೆಗಳಿಗೆ ಸಮಾನವಾಗಿ ಬೆಳೆದಿದೆ. ಮುಂದೆ ಯುವಜನರಲ್ಲಿ ಕನ್ನಡ ಭಾಷೆಯ ಆಸಕ್ತಿಯನ್ನು ಬೆಳೆಸುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ಮಾಡುತ್ತಿದೆ. ಮುಂದಿನ ಪೀಳಿಗೆ ಕನ್ನಡ ಕಟ್ಟುವ ಜವಾಬ್ದಾರಿಯನ್ನು ಹೊರಬೇಕಿದೆ. ಕೊಡಗಿನಲ್ಲಿ 41 ದತ್ತಿ ಸ್ಥಾಪನೆ ಮಾಡಲಾಗಿದೆ. ವರ್ಷವಿಡೀ ಕನ್ನಡ ಭಾಷಾ ಬೆಳವಣಿಗೆಯ ಬಗ್ಗೆ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ ಎಂದು ಹೇಳಿದರು.

ಕನ್ನಡಿಗರಿಗೆ ಕನ್ನಡ ಅನ್ನ ಕೊಡುವ ಭಾಷೆಯಾಗಬೇಕು, ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಉನ್ನತ ಹುದ್ದೆಗಳು ಸಿಗುವಂತಾಗಬೇಕು. ಈ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲೇಬೇಕು ಎಂದು ಆಶಿಸಿದರು.

ಸಾಹಿತ್ಯ ಪರಿಷತ್ ನಿರ್ದೇಶಕರು ಹಾಗೂ ಸಹಕಾರ ಸಂಘಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಶಾಂತಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಇ.ಜಯೇಂದ್ರ, ಚೌಡ್ಲು ಸಹಕಾರ ಸಂಘದ ಅಧ್ಯಕ್ಷ ಕೆ.ಟಿ.ಪರಮೇಶ್, ಮಡಿಕೇರಿ ದಿವ್ಯಜ್ಯೋತಿ ಸಹಕಾರ ಸಂಘದ ನಿರ್ದೇಶಕರಾದ ಎಸ್.ಎಂ.ಡಿಸಿಲ್ವಾ, ಜೋಕಿಂವಾಸ್, ಡಿಸಿಸಿ ಬ್ಯಾಂಕ್ ನಿರ್ದೇಶಕಿ ಜಲಜಾಶೇಖರ್, ಸೋಮವಾರಪೇಟೆ ಸಹಕಾರ ಸಂಘದ ನಿರ್ದೇಶಕರಾದ ಪಿ.ಕೆ.ರವಿ, ಬಿ.ಕೆ.ಉದಯಕುಮಾರ್, ಹಂಡ್ಲಿ ಸಹಕಾರ ಸಂಘದ ನಿರ್ದೇಶಕ ಮೋಹನ್ ಅವರನ್ನು ಸನ್ಮಾನಿಸಲಾಯಿತು.

ಇತ್ತೀಚೆಗೆ ನಿಧನರಾದ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದ ಮಾಜಿ ಅಧ್ಯಕ್ಷ ಎಚ್.ಎಂ.ಶಿವಾನಂದ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಚಿತ್ರನಟ ಕಮಲ್ ಹಾಸನ್ ಅವರ ಕನ್ನಡ ಭಾಷೆ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಸಭೆಯಲ್ಲಿ ಖಂಡಿಸಲಾಯಿತು. ಮೈಸೂರು ಸ್ಯಾಂಡಲ್ ಸೋಪಿನ ರಾಯಭಾರಿಯನ್ನಾಗಿ ಕನ್ನಡಿಗರನ್ನು ನೇಮಿಸಬೇಕು ಎಂದು ಸರ್ಕಾರವನ್ನು ಸಭೆ ಒತ್ತಾಯಿಸಿತು.

ಪರಿಷತ್‌ನ ತಾಲೂಕು ಅಧ್ಯಕ್ಷ ಎಸ್.ಡಿ.ವಿಜೇತ್, ಮಾಜಿ ಅಧ್ಯಕ್ಷ ಜೆ.ಸಿ.ಶೇಖರ್, ಗೌರವ ಕಾರ್ಯದರ್ಶಿಗಳಾದ ಜ್ಯೋತಿ ಅರುಣ್, ಎ.ಪಿ.ವೀರರಾಜು, ಖಜಾಂಚಿ ಕೆ.ಪಿ.ದಿನೇಶ್, ಜಿಲ್ಲಾ ನಿರ್ದೇಶಕ ಶ್ರೀಧರ್ ಹೂವಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net