

ಬಾಗಲಕೋಟೆ: ಕನ್ನಡ ಅತ್ಯಂತ ಪ್ರಾಚೀನ, ಶ್ರೀಮಂತ ಭಾಷೆ. ಕನ್ನಡ ಭಾಷೆಯಲ್ಲಿ ಈಚೆಗೆ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಗರಿಷ್ಠ ಅಂಕ ಪಡೆದು ಪಾಸಗುತ್ತಿರುವುದು ಹೆಮ್ಮಯ ವಿಷಯ. ಕನ್ನಡ ಶ್ರೀಮಂತ ಭಾಷೆಯಾಗಿದೆ ಎಂದು ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ ಹೇಳಿದರು.
ನವನಗರದ ಕಸಾಪ ಸಭಾಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕ ಘಟಕ ಸಹಯೋಗದಲ್ಲಿ ಭಾನುವಾರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ವಿಷಯ ಕುರಿತು ಹಮ್ಮಿಕೊಂಡಿದ್ದ ಒಂದು ದಿನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಲ್ಲಿ ಕನ್ನಡಿಗರು ಉತ್ತಮ ಅಂಕ ಪಡೆದು ನಾಡಿನ ಗರಿಮೆ, ಹಿರಿಮೆ ಹೆಚ್ಚಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹಳೇಗನ್ನಡ, ನಡುಗನ್ನಡ ಮತ್ತು ಹೊಸಗನ್ನಡದ ಸಾಹಿತಿಗಳನ್ನು ನಿರಂತರವಾಗಿ ಅಧ್ಯಯನ ಮಾಡುವ ಹವ್ಯಾಸವನ್ನು ಪರೀಕ್ಷಾರ್ಥಿಗಳು ರೂಢಿಸಿಕೊಳ್ಳಬೇಕು. ಕಠಿಣ ಪರಿಶ್ರಮ, ಸಮಯ ಪಾಲನೆ ನಿಮ್ಮ ಭವಿಷ್ಯವನ್ನು ಉಜ್ಜಲಗೊಳಿಸುತ್ತದೆ. ಆ ನಿಟ್ಟಿನಲ್ಲಿ ಕಾರ್ಯಾಗಾರ ತಮಗೆ ಉಪಯುಕ್ತವಾಗಲಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಮಾತನಾಡಿ, ಕನ್ನಡ ಭಾಷೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ವಿಷಯದ ಜೊತೆಗೆ ಇನ್ನಿತರ ಭಾಷೆಗಳನ್ನು ಆಸಕ್ತಿಯಿಂದ ಅಧ್ಯಯನ ಮಾಡಿದಾಗ ಗುರಿ ತಲುಪಲು ಸಾಧ್ಯವಾಗುತ್ತದೆ. ದೊಡ್ಡ ಹುದ್ದೆಗಳನ್ನು ಅಲಂಕರಿಸಿದ ನಂತರವು ತಾಯಿ ಭಾಷೆ ಕನ್ನಡ ಮೇಲಿನ ಪ್ರೀತಿ ಕಡಿಮೆಯಾಗಬಾರದು ಎಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಐಎಎಸ್-ಕೆಎಎಸ್ ಸ್ಟಡಿ ಸೆಂಟರ್ ನಿರ್ದೇಶಕ ಡಾ.ರುದ್ರೇಶ ಮೇಟಿ, ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಸಿದ್ಧರಾಮ ಶಿರೋಳ, ಡಾ.ಚಂದ್ರಶೇಖರ ಕಾಳನ್ನವರ, ಕೋಶಾಧ್ಯಕ್ಷ ಪ್ರೊ.ಸಿ.ಎಂ.ಜೋಶಿ, ಕಸಾಪ ಬಾಗಲಕೋಟೆ ತಾಲೂಕ ಅಧ್ಯಕ್ಷ ಪಾಂಡುರಂಗ ಸಣ್ಣಪ್ಪನವರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಬಸಲಿಂಗಯ್ಯ ಮಠಪತಿ ಪ್ರಾರ್ಥಿಸಿದರು. ಡಾ.ಎಚ್.ಎಸ್.ಘಂಟಿ ಸ್ವಾಗತಿಸಿದರು. ಆನಂದ ಪೂಜಾರಿ ನಿರೂಪಿಸಿದರು. ಮಲ್ಲಿಕಾರ್ಜುನ ಸಜ್ಜನ ವಂದಿಸಿದರು.