

ಬೆಳಗಾವಿ: ಮಾತೃಭಾಷೆ ಉಳಿವಿಗೆ ಕಾನೂನಾತ್ಮಕ ಹೋರಾಟ ನಡೆಸುವ ಪರಿಸ್ಥಿತಿ ಇದೆ. ಕನ್ನಡ ಭಾಷೆ ಸರಳವಾಗಿ ಕಲಿಸಲು ರಾಜ್ಯಾದ್ಯಂತ 100 ಕಲಿಕಾ ಕೇಂದ್ರಗಳನ್ನು ಆರಂಭಿಸುತ್ತಿದ್ದೇವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಹೇಳಿದರು.
ನಗರದ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಕಚೇರಿ ಸಭಾಂಗಣದಲ್ಲಿ ಗುರುವಾರ ಪ್ರತ್ಯೇಕವಾಗಿ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಕುರಿತು ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.25 ಜನರು ಕನ್ನಡ ಭಾಷೆ, ಅಕ್ಷರ ಬಳಸುವುದಿಲ್ಲ. ನಗರದ ಬಹುತೇಕ ಕಡೆ ಕನ್ನಡ ಮಾತನಾಡುವುದಿಲ್ಲ. ಇಂತಹ ಪರಿಸ್ಥಿತಿ ಹೋಗಲಾಡಿಸುವ ಕೆಲಸ ಮಾಡಬೇಕು ಎಂದರು.
ಪ್ರತಿ ಇಲಾಖೆಯಲ್ಲಿ ಕನ್ನಡ ಭಾಷೆ ಬಳಸಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಎಲ್ಲ ಇಲಾಖೆಗಳ ಸಮನ್ವಯದೊಂದಿಗೆ ವರ್ಷಕ್ಕೆ ಮೂರು ಬಾರಿ ಸಭೆ ನಡೆಸಬೇಕು. ಕನ್ನಡಪರ ಸಂಘಟನೆಗಳು ಸಂಘ-ಸಂಸ್ಥೆಗಳ ಜತೆಗೆ ಕನ್ನಡ ಭಾಷೆ ಬಳಕೆ, ಭಾಷಾ ಅನುಷ್ಠಾನ ಸಮಸ್ಯೆಗಳನ್ನು ಆಲಿಸಿ, ಸ್ಪಂದಿಸಬೇಕು. ಭಾಷೆ ಬಳಕೆ, ಕನ್ನಡ ನಾಮಫಲಕ ಅಳವಡಿಕೆ, ಕನ್ನಡದಲ್ಲಿ ಪತ್ರ ವ್ಯವಹಾರ ಸೇರಿ ಗಡಿಭಾಗದಲ್ಲಿ ಕನ್ನಡ ಭಾಷೆ ಪರಿಣಾಮಕಾರಿ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಬೇಕು. ವಡಗಾವಿಯ ಗಡಿಭವನವನ್ನು ಕಾರ್ಯಕ್ರಮ, ಸಭೆ- ಸಮಾರಂಭ ಆಯೋಜಿಸಲು, ಸರ್ಕಾರಿ ಕಚೇರಿ ಉಪಯೋಗಕ್ಕೆ ಬಳಸಲು ಕ್ರಮವಹಿಸಬೇಕು ಎಂದರು.
ಕಾಗವಾಡ, ನಿಪ್ಪಾಣಿ, ಅಥಣಿ, ಖಾನಾಪುರ ತಾಲೂಕು ಸೇರಿ ಗಡಿ ಭಾಗದ ಶಾಲೆಗಳಲ್ಲಿ ಕನ್ನಡ ಶಿಕ್ಷಕರ ಕೊರತೆ ಇದ್ದು, ಶಿಕ್ಷಕರನ್ನು ನೇಮಿಸಬೇಕು. ಕನ್ನಡದಲ್ಲಿ ಅನುತ್ತೀರ್ಣ ಹೊಂದಿರುವ ವಿದ್ಯಾರ್ಥಿಗಳ ಅಂಕಿ- ಅಂಶ ಪ್ರಾಧಿಕಾರಕ್ಕೆ ಸಲ್ಲಿಸಬೇಕು.
ಅಂಥವರ ಕನ್ನಡ ಕಲಿಕೆಯನ್ನು ಗಮನ ಹರಿಸಬೇಕು. ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.22 ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿ ಅನುತ್ತೀರ್ಣ ಹೊಂದಿದ್ದು, ಅದರ ಕಾರಣ ಗುರುತಿಸಬೇಕು ಎಂದು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಡಾ.ಸಂತೋಷ್ ಹಾನಗಲ್, ನಾಮ ನಿರ್ದೇಶಿತ ಸದಸ್ಯೆ ದಾಕ್ಷಾಯಿಣಿ ಹುಡೇದ, ಗಡಿ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಅಶೋಕ ಚಂದರಗಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ ಗುಲಾಬರಾವ್, ಜಿಪಂ ಸಿಇಒ ರಾಹುಲ್ ಶಿಂಧೆ, ಎಸ್‌ಪಿ ಡಾ.ಭೀಮಾಶಂಕರ ಗುಳೇದ, ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರುತಿ, ಮಹಾನಗರ ಪಾಲಿಕೆ ಆಯುಕ್ತೆ ಶುಭ ಬಿ. ಇತರರಿದ್ದರು.