ಕನ್ನಡ ನಾಡು ನುಡಿ ಸಂರಕ್ಷಣೆಗೆ ವಿಶೇಷ ಆದ್ಯತೆ

bkt-1-1 c (1)
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳ ಸಾಂಸ್ಕೃತಿಕ ನೃತ್ಯ ಗಮನ ಸೆಳೆಯಿತು.
Published on

ಬಾಗಲಕೋಟೆ: ಕನ್ನಡ ಭಾಷೆ, ನಾಡ ನುಡಿ ಸಂರಕ್ಷಣೆಗೆ ನಮ್ಮ ಸರ್ಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ೬೭ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಾಡಿನ ಸಮೃದ್ಧಿ ಅಭಿವೃದ್ಧಿಗೆ ಪ್ರತೀಕವಾಗಿದ್ದು, ಅದಕ್ಕೆ ಪೂರಕವಾಗಿ ಸರ್ಕಾರವು ಕನ್ನಡ ನಾಡಿನ ಕಲೆ, ಸಂಸ್ಕೃತಿ, ಭಾಷೆ, ನೆಲ ಜಲ ಸಂರಕ್ಷಣೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ. ದೇಶದ ಸ್ವಾತಂತ್ರ‍್ಯದ ೭೫ನೇ ಅಮೃತ ಮಹೋತ್ಸವ ಹಿನ್ನಲೆಯಲ್ಲಿ ಕನ್ನಡತನವನ್ನು ವಿಜೃಂಬಿಸುವದಕ್ಕಾಗಿ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ವಿಶ್ವಭಾರತಿಗೆ ಕನ್ನಡದಾರತಿ ಎಂಬ ಕಾರ್ಯಕ್ರಮ ಏರ್ಪಡಿಸಿ ಯಶಸ್ಸು ಕಂಡಿದೆ ಎಂದರು.
ಮೊನ್ನೆಯಷ್ಟೇ ಏರ್ಪಡಿಸಿದಂತಹ ಕೋಟಿ ಕಂಠ ಗಾಯನ ಕಾರ್ಯಕ್ರಮಕ್ಕೆ ಅದ್ಬುತ ಯಶಸ್ಸು ದೊರೆತಿದೆ. ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಎಂಬ ಆಶಯದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ನಮ್ಮ ಸರ್ಕಾರ ಹಲವು ಜನಪರ ಯೋಜನೆಗಳನ್ನು ರೂಪಿಸಿದೆ. ರಾಜ್ಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ಸಿಗಬೇಕು. ಬಯಲು ಸೀಮೆಯಾಗಿರುವ ಬಾಗಲಕೋಟೆ ಜಿಲ್ಲೆಯಲ್ಲಿನ ಜನ ಸಮುದಾಯಗಳ ಸಂಪ್ರದಾಯ, ಜಾನಪದ ಕಲೆ, ಸಾಹಿತ್ಯ ಸಮೃದ್ದಿಯಾಗಿದೆ ಎಂದರು.
ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ಪ್ರಾರಂಭಿಸಿದ್ದು, ಜಿಲ್ಲೆಯಲ್ಲಿ ೨೧೧ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಲೋಕೋಪಯೋಗಿ ಇಲಾಖೆಯಿಂದ ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಯಿಂದ ಜಿಲ್ಲಾ ಮುಖ್ಯ ರಸ್ತೆಯನ್ನಾಗಿ ಒಟ್ಟು ೫೬೫ ಹಾಗೂ ಜಿಲ್ಲಾ ಮುಖ್ಯ ರಸ್ತೆಯಿಂದ ರಾಜ್ಯ ಹೆದ್ದಾರಿಗಳನ್ನಾಗಿ ಒಟ್ಟು ೨೧೦ ಕಿ.ಮೀ ಉದ್ದದ ರಸ್ತೆಗಳನ್ನು ಮೇಲ್ದರ್ಜೆಗೇರಿಸಲಾಗಿದೆ. ೨೩೭ ಕೋಟಿ ಅನುದಾನದಲ್ಲಿ ೩೧೯ ಕಿ.ಮೀ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳನ್ನು ಸುಧಾರಣೆಗೊಳಿಸಲಾಗುತ್ತಿದೆ ಎಂದು ಹೇಳಿದರು.
ವಿಶೇಷ ಅಭಿವೃದ್ಧಿ ಯೋಜನೆಯಡಿ ೧೧ ಕೋಟಿ ರೂ. ಮೊತ್ತದ ೧೪ ಕಿ.ಮೀ ರಸ್ತೆ ಹಾಗೂ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ೩೧ ಕೋಟಿ ರೂ.ಗಳ ಮೊತ್ತದ ೩೬ ಕಿ.ಮೀ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಪ್ರಕೃತಿ ವಿಕೋಪ ನಿರ್ವಹಣೆ ಅಡಿಯಲ್ಲಿ ೨೬ ಕೋಟಿ ರೂ. ಮೊತ್ತದ ೪೧ ಕಿ.ಮೀ ರಸ್ತೆ ಹಾಗೂ ಸೇತುವೆಗಳನ್ನು ಸುಧಾರಣೆಗೊಳಿಸಲಾಗುತ್ತಿದೆ. ಅಲ್ಲದೆ ನಬಾರ್ಡ-೨೫ ಅಡಿಯಲ್ಲಿ ೨೮ ಕೋಟಿ ರೂ. ಅನುದಾನದ ೧೧೪ ಶಾಲಾ ಕಟ್ಟಡಗಳನ್ನು ಹಾಗೂ ೬ ಕೋಟಿ ರೂ. ಅನುದಾನದಲ್ಲಿ ೩೩ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಬಾಗಲಕೋಟೆ ನವನಗರದ ಹಂತ-೩ರಲ್ಲಿ ಒಟ್ಟು ೧೬೭೮ ಎಕರೆ ಜಮೀನಿನಲ್ಲಿ ೧೧ ಸೆಕ್ಟರಗಳನ್ನು ಅಭಿವೃದ್ಧಿ ಪಡಿಸಿ ಮೂಲಭೂತ ಸೌಕರ್ಯ ಒದಗಿಸಲು ಟೆಂಡರ್ ಕರೆಯಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಮುಳುಗಡೆ ಮುಖ್ಯ ಸಂತ್ರಸ್ತರಿಗೆ, ಬಾಡಿಗೆದಾರರಿಗೆ, ವಯಸ್ಕ ಮಕ್ಕಳಿಗೆ ಹೀಗೆ ಸೇರಿ ಒಟ್ಟು ೨೧೨೮ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಗಿದೆ. ೫೨೮ ಕೋಟಿ ರೂ.ಗಳ ವೆಚ್ಚದಲ್ಲಿ ಕೆರೂರ ಏತ ನೀರಾವರಿ ಯೋಜನೆಗೆ ಬಾದಾಮಿ ತಾಲೂಕಿನ ಉಗಲವಾಟದಲ್ಲಿ ಮುಖ್ಯಮಂತ್ರಿಗಳು ಶಂಕುಸ್ಥಾಪನೆ ನೆರವೇರಿಸಿದ್ದು, ಇದರಿಂದ ೪೦ ಸಾವಿರ ಎಕರೆ ಭೂಮಿಗೆ ನೀರಾವರಿಯಾಗಲಿದೆ ಎಂಧು ಹೇಳಿದರು.
ಕಾರ್ಯಕ್ರಮದಲ್ಲಿ ಶಾಸಕ ವೀರಣ್ಣ ಚರಂತಿಮಠ, ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಜಿಲ್ಲಾಽಕಾರಿ ಪಿ.ಸುನೀಲ್‌ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ ಹಕ್ಕರಕಿ, ಜಿ.ಪಂ ಸಿಇಒ ಟಿ.ಭೂಬಾಲನ್, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ವಿನಯಕುಮಾರ ಪಾಟೀಲ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net