

ಬಾಗಲಕೋಟೆ: ಪುರಾತನ ಕಾಲದಿಂದಲೂ ಕರ್ನಾಟಕದ ಅಳಿವು,ಉಳಿವು, ಸಂಸ್ಕೃತಿ,ನಡೆ, ನುಡಿ,ಅಸ್ಮಿತೆಗಾಗಿ ಕನ್ನಡಿಗರೂ ಹೋರಾಡುತ್ತಾ ಬಂದಿದ್ದು, ನಮ್ಮ ಜೀವನದ ಭಾಷೆ ಕನ್ನಡವಾಗಬೇಕು ಎಂದು ಬಾದಾಮಿಯ ಹಿರಿಯ ವೈದ್ಯ, ಸಾಹಿತಿ ಡಾ. ಕರವೀರಪ್ರಭು ಕ್ಯಾಲಕೊಂಡ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಘಟಕ, ಕನ್ನಡ ವಿಭಾಗ, ಕನ್ನಡ ಸ್ನಾತಕೋತ್ತರ ವಿಭಾಗ ಹಾಗೂ ಸಾಂಸ್ಕೃತಿಕತಿಕ ಚಟುವಟಿಕೆಗಳ ಸಮಿತಿ ಇವರ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಕನ್ನಡ ಭಾಷೆಯ ಅಳವಡಿಕೆ ಅತ್ಯವಶ್ಯಕ. ಜನರ ಉದ್ಧಾರಕ್ಕೆ ಕನ್ನಡವೇ ಕೊನೆ. ಪ್ರಾಚೀನ ಕಾಲದಲ್ಲಿ ಕನ್ನಡ ನಾಡಿನ ವಿಸ್ತಾರ ಈಗಿನ ಇಡೀ ಭಾರತದಷ್ಟು ಇತ್ತು. ಕನ್ನಡದಲ್ಲಿ ಓದಿದವರು ಹೆಚ್ಚಿನ ವಿದ್ಯಾಭ್ಯಾಸ ಪಡೆಯಲು ಸಾಧ್ಯವಿಲ್ಲ ಎಂದು ಕೊಂಡವರು ಮೂರ್ಖರು ಎನ್ನಬಹುದು. ಭಾಷಾಭಿಮಾನ ಮಾತಿಗಷ್ಟೇ ಸಿಮೀತವಾಗವಾರದು. ಕಾರ್ಯರೂಪಕ್ಕೆ ಬರಬೇಕು. ಕಣಕಣದಲ್ಲಿಯೂ ಕನ್ನಡವಾಗಬೇಕು. ಕೆಲವು ಸಮಸ್ಯೆಗಳನ್ನು ಕನ್ನಡಿಗರೇ ಮಾಡಿಕೊಂಡಿರುವುದು ನಮ್ಮ ದುರಾದೃಷ್ಟ. ಆದರೆ ಕನ್ನಡಕ್ಕೆ ತನ್ನದೇ ಆದ ಇತಿಹಾಸ ಇದೆ. ಕಾವ್ಯ ಸಮಿತಿ, ಕನ್ನಡ ಸಂಘ, ಬೆಳೆಸುವುದರಿಂದ ಕನ್ನಡ ತನ್ನಷ್ಟಕ್ಕೆ ತಾನೇ ಬೆಳವಣಿಗೆ ಕಾಣುತ್ತದೆ ಎಂದು ಹೇಳಿದರು.
ಕನ್ನಡ ಶಾಲೆಗಳು ಕಣ್ಣೆದುರೇ ಮುಚ್ಚಿ ಹೋಗುತ್ತಿವೆ. ಕನ್ನಡದ ಸಲುವಾಗಿ ಗಿಡ ನೆಟ್ಟು, ನೀರು ಹಾಕಿ, ಹೂ ಬಿಡುವ ಹಾಗೇ ಮಾಡುವುದರಿಂದ ಕನ್ನಡ ಭಾಷೆ ಮತ್ತೆ ರಾರಾಜಿಸುತ್ತದೆ. ಕನ್ನಡ ಮಾಧ್ಯಮದಲ್ಲಿ ಕಲಿತು, ಎತ್ತರಕ್ಕೆ ಬೆಳೆದವರಲ್ಲಿ ನಾನು ಒಬ್ಬ ಎನ್ನುವುದು ನನಗೆ ಹೆಮ್ಮೆ ಎಂದು ತಿಳಿಸಿದರು.
ಪ್ರಾಚಾರ್ಯ ಎಸ್.ಆರ್.ಮೂಗನೂರಮಠ ಮಾತನಾಡಿ, ನಮ್ಮ ಮಾತೃ ಭಾಷೆಗೆ ಶಕ್ತಿ ಇದೆ. ಆಲೋಚನೆಯ ಭಾಷೆ, ಚಿಂತನೆಯ ಭಾಷೆ, ಎದೆಯ ಭಾಷೆ, ಜ್ಞಾನದ ಭಾಷೆ, ಅನ್ನದ ಭಾಷೆಯೇ ನಮ್ಮ ಕನ್ನಡ. ಕನ್ನಡದ ಬಗ್ಗೆ ತಾಸ್ತಾರ ಬೇಡ. ತಂತ್ರಜ್ಞಾನ, ಕಂಪ್ಯೂಟರ್, ವೈದ್ಯಕೀಯದಲ್ಲಿನ ಭಾಷೆ ಕನ್ನಡದಲ್ಲಿ ಬರಬೇಕು. ಬೇರೆ ಬೇರೆ ಮೂಲಗಳಿಂದ ಜ್ಞಾನ ಹರಿದು ಕನ್ನಡಕ್ಕೆ ಬರಲಿ. ಒಂದು ಕ್ಷಣ ಹಿಂತಿರುಗಿ ನಿಂತು ನೋಡಿದಾಗ ಕನ್ನಡ ವಿಸ್ತಾರ ತಿಳಿಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನಾಗರಾಜು. ಆರ್, ಸಾಂಸ್ಕೃತಿಕ ಚಟುವಟಿಕೆಗಳ ಸಮಿತಿ ಸಂಯೋಜಕ ಡಾ.ಕೆ.ವಿ.ಮಠ, ಐಕ್ಯೂಎಸಿ ಸಂಯೋಜಕ ಡಾ. ಎ.ಯು.ರಾಠೋಡ, ಕನ್ನಡ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ.ವೀಣಾ. ಕಲ್ಮಠ, ಪ್ರಾಧ್ಯಾಪಕ ಎಸ್.ಡಿ.ಕೆಂಗಲಗುತ್ತಿ, ಡಾ. ವಿರುಪಾಕ್ಷಿ. ಎನ್. ಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.