ಕದರಮಂಡಲಗಿ ಗ್ರಾಮಸ್ಥರಿಂದ ಪ್ರತಿಭಟನೆ

29byd2
Published on

ಬ್ಯಾಡಗಿ: ನೀರು ಶುದ್ಧೀಕರಿಸುವ ಘಟಕ ದುರಸ್ತಿಗೆ ಆಗ್ರಹಿಸಿ ತಾಲೂಕಿನ ಕದರಮಂಡಲಗಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಾರ್ಯಾಲಯ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ರೈತ ಸಂಘದ ರಾಜ್ಯ ಸಮಿತಿ ಸದಸ್ಯ ಶಶಿಧರಸ್ವಾಮಿ ಛತ್ರದಮಠ ಮಾತನಾಡಿ, ಕಳೆದ ಹದಿನೈದು ದಿನಗಳಿಂದ ನೀರು ಶುದ್ಧೀಕರಿಸುವ ಘಟಕ ಹಾಳಾಗಿ ಗ್ರಾಮಸ್ಥರಿಗೆ ನೀರು ಸಿಗದಂತಾಗಿದೆ. ಈ ಹಿಂದೆ ಈ ಘಟಕದಲ್ಲಿ ವಾಸನೆಯುಕ್ತ ನೀರು ಪೂರೈಕೆಯಾಗುತ್ತಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿತ್ತು. ಕರೊನಾ ವೈರಸ್ ಇತ್ಯಾದಿ ಸಾಂಕ್ರಾಮಿಕ ರೋಗ ಹರುಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ಶುದ್ಧ ನೀರು ಅಗತ್ಯವಾಗಿದೆ. ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನತೆ ಸವಳು ನೀರು ಸೇವಿಸುವಂತಾಗಿದೆ. ಅನಿವಾರ್ಯವಾಗಿ ಪಕ್ಕದ ಗ್ರಾಮಗಳಿಗೆ ತೆರಳಿ ಶುದ್ಧ ನೀರು ತರಬೇಕಾಗಿದೆ. ಸಂಬಂಧಿಸಿದವರು ತಕ್ಷಣ ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

ಬಳಿಕ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಗ್ರಾಪಂ ಅಭಿವೃದ್ಧಿ ಅಧಿಕಾರಿ ಶಾರದಾ ಕುದರಿ, ನೀರು ಶುದ್ಧೀಕರಿಸುವ ಘಟಕದ ನಿರ್ವಹಣೆಯನ್ನು ಗುತ್ತಿಗೆದಾರರಿಗೆ ವಹಿಸಲಾಗಿದೆ. ಈ ಕುರಿತು ವಾರದ ಹಿಂದೆ ಅವರಿಗೆ ಮಾಹಿತಿ ನೀಡಲಾಗಿದೆ. ನಾಲ್ಕು ದಿನಗಳಲ್ಲಿ ದುರಸ್ತಿ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು.

ಮಾಲತೇಶ ಕಮ್ಮಾರ, ವಿಶ್ವನಾಥ ಹಿರೇಮಠ, ನಾಗರಾಜ ಟೈಲರ್, ಶಿವರಾಜ ಉಜ್ಜನಿ, ರಮೇಶ ನಾಯ್ಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net