ಕಣ್ಮನ ಸೆಳೆದ ಕಲಾತ್ಮಕ ಛಾಯಾಚಿತ್ರ ಪ್ರದರ್ಶನ

Pradarshana
Published on

ಕಲಬುರಗಿ: ವಿಶ್ವ ಛಾಯಾಗ್ರಾಹಕರ ದಿನ ನಿಮಿತ್ತ ದೃಶ್ಯಬೆಳಕು ಸಾಂಸ್ಕೃತಿಕ ಸಂಸ್ಥೆ ಮತ್ತು ಕೃತಿಕ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಬಿದ್ದಾಪುರ ಕಾಲನಿಯ ಜಾನೆ ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ಆಯೋಜಿಸಿದ್ದ ಕಲಾತ್ಮಕ ಛಾಯಾಚಿತ್ರಗಳ ಪ್ರದರ್ಶನ ನೋಡುಗರ ಕಣ್ಮನ ಸೆಳೆಯಿತು.
ಅಪರೂಪದ ಪಕ್ಷಿ, ಚಿಟ್ಟೆ, ಗ್ರಾಮೀಣ ಜನರ ಬದುಕು, ಜನಪದರ ವೇಷಭೂಷಣ, ಐತಿಹಾಸಿಕ ಸ್ಮಾರಕ, ಬೀದಿ ವ್ಯಾಪಾರಿಗಳ ಸ್ಥಿತಿಗತಿ, ನಗರ ಜೀವನ, ಬಿತ್ತನೆಯ ಕಾಯಕ, ಹೋಳಿ ಹಬ್ಬದ ಸಂಭ್ರಮ ಸೇರಿ ಯುವ ಛಾಯಾಗ್ರಾಹಕರು ತಮ್ಮ ಕ್ಯಾಮರಾಗಳಲ್ಲಿ ಸೆರೆಹಿಡಿದ ಕಲಾತ್ಮಕ ಭಿನ್ನ-ವಿಭಿನ್ನ ಫೋಟೋಗಳನ್ನು ವೀಕ್ಷಿಸಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಫೋಟೋಗ್ರಾಫರ್‌ಗಳ ಕಲಾ ಕೌಶಲವನ್ನು ಕೊಂಡಾಡಿದರು.
ಪ್ರದರ್ಶನಕ್ಕೆ ಚಾಲನೆ ನೀಡಿದ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆನಂದ ಭಕ್ಷಿ ಮಾತನಾಡಿ, ಕ್ಯಾಮರಾ ಕಂಡು ಹಿಡಿದ ಆರಂಭಿಕ ದಿನಗಳಲ್ಲಿ ಒಂದು ಫೋಟೋ ಸೆರೆ ಹಿಡಿಯಲು ಛಾಯಾಗ್ರಾಹಕರು ಅನೇಕ ಗಂಟೆ ನಿಲ್ಲಬೇಕಾಗಿತ್ತು. ಆದರೆ ಇಂದಿನ ತಂತ್ರಜ್ಞಾನ ಯುಗದಲ್ಲಿ ಸೆಕೆಂಡ್‌ನಲ್ಲಿ ಹಲವಾರು ಛಾಯಾಚಿತ್ರಗಳನ್ನು ತೆಗೆಯಬಹುದಾಗಿದೆ. ಇಂದಿನ ಛಾಯಾಗ್ರಾಹಕರಿಗೆ ಸಾಮಾನ್ಯ ಛಾಯಾಚಿತ್ರಣ ಮತ್ತು ಸೃಜನಶೀಲ ಛಾಯಾಚಿತ್ರಗಳ ನಡುವಿನ ವ್ಯತ್ಯಾಸ ಗೊತ್ತಾಗಬೇಕಿದೆ ಎಂದರು.
ಹಿರಿಯ ಛಾಯಾಗ್ರಾಹಕ ತಾಜುದ್ದೀನ್ ಆಜಾದ್ ಪತ್ರಿಕಾ ಛಾಯಾಗ್ರಾಹಕರ ಜವಾಬ್ದಾರಿ, ಸವಾಲು ಮತ್ತು ಸಾಧ್ಯತೆಗಳು ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ್ ಮಾತನಾಡಿದರು.
ಛಾಯಾಗ್ರಾಹಕರಾದ ಮೋಹನ ಚಿಂಚೋಳಿ, ಡಾ.ಪರಶುರಾಮ ಪಿ., ವೀರಶೆಟ್ಟಿ ಪಾಟೀಲ್, ಶಿವಶರಣ ಬೆಣ್ಣೂರ, ಶಿವಶರಣ ಡೊಣ್ಣೂರಕರ್, ಸೋಮಶೇಖರ ಪಾಟೀಲ್ ಮತ್ತು ಮಲ್ಲಿಕಾರ್ಜುನ ವಿಭೂತಿ ಅವರದು ಸೇರಿ ೮೦ಕ್ಕೂ ಹೆಚ್ಚು ಛಾಯಾಚಿತ್ರಗಳು ಪ್ರದರ್ಶನಗೊಂಡವು. ಫೋಟೋಗ್ರಾಫರ್‌ಗಳನ್ನು ಸತ್ಕರಿಸಲಾಯಿತು. ಆ.೨೪ರವರೆಗೆ ಬೆಳಗ್ಗೆ ೧೧.೩೦ರಿಂದ ಸಂಜೆ ೭ರವರೆಗೆ ಛಾಯಾಚಿತ್ರ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net