

ಕುಶಾಲನಗರ: ಕುಶಾಲನಗರ ತಾಲೂಕು ಕಣಿವೆಯ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶಿಕ್ಷಣ ಇಲಾಖೆಯ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾದ ಕಲಿಕೋತ್ಸವ ಕಾರ್ಯಕ್ರಮ ಗುರುವಾರ ಸಡಗರದಿಂದ ನಡೆಯಿತು.
ಕ್ಲಸ್ಟರ್ ವ್ಯಾಪ್ತಿಯ ವಿದ್ಯಾರ್ಥಿಗಳು ಹಾಗೂ ಸಂಬಂಧಿಸಿದ ಶಾಲೆಗಳ ಶಿಕ್ಷಕರು ಕಲಿಕೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು. ಮಕ್ಕಳಿಗಾಗಿ ಕಲಿಕೋತ್ಸವದಲ್ಲಿ ಉತ್ತಮ ಕೈ ಬರಹ, ಸಂತೋಷದಾಯಕ ಗಣಿತ, ಗಟ್ಟಿ ಓದು, ಕಥೆ ಕಟ್ಟುವುದು, ಜ್ಞಾಪಕ ಸಾಮರ್ಥ್ಯ ಪರೀಕ್ಷೆ, ರಸಪ್ರಶ್ನೆ, ಪಾಲಕರ ಮತ್ತು ಮಕ್ಕಳ ಸಹ ಸಂಬಂಧ ಆಟ ಮೊದಲಾದ ಚಟುವಟಿಕೆಗಳು ನಡೆದವು. ತೀರ್ಪುಗಾರರಾಗಿ ವಿವಿಧ ಶಾಲೆಗಳ ಶಿಕ್ಷಕರಾದ ಹುಲುಸೆ ಬಸವರಾಜು, ನಾಗರಾಜು, ಮಹದೇವಕುಮಾರ್, ಸುಂದರ್, ಉದಯಪ್ರಕಾಶ್, ನಳಿನಿ, ದೀಪಿಕಾ ಕಾರ್ಯನಿರ್ವಹಿಸಿದರು.
ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಮೂಲಕ ಮುಚ್ಚುವ ಹಂತದಲ್ಲಿನ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು ಹಾಗೆ ದಾಖಲಾಗುವ ಮಕ್ಕಳಿಗೆ ಗುಣಮಟ್ಟಣ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ವಿವಿಧ ಆಯಾಮಗಳಲ್ಲಿ ಮಕ್ಕಳ ಕಲಿಕೆಯನ್ನು ದೃಢೀಕರಿಸುವ ಚಟುವಟಿಕೆ ಇದಾಗಿದೆ ಎಂದು ಕೂಡಿಗೆ ಡಯಟ್‌ನ ಹಿರಿಯ ಉಪನ್ಯಾಸಕ ಹೇಮಂತ್ ರಾಜ್ ಹೇಳಿದರು.
ಶರಣ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ ಕೆ.ಎಸ್.ಮೂರ್ತಿ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಶಾಲಾ ಶಿಕ್ಷಕರ ಪರಿಶ್ರಮ ಶ್ಲಾಘನೀಯ. ಖಾಸಗಿ ಶಾಲೆಗಳ ಆರ್ಭಟದಿಂದಾಗಿ ಸರ್ಕಾರಿ ಶಾಲೆಗಳು ಅಧೋಗತಿಯತ್ತ ಸಾಗಿವೆ. ಮಕ್ಕಳನ್ನು ಶಾಲೆಗಳಿಗೆ ಸೆಳೆಯಲು ಇಲಾಖೆ ಏನೆಲ್ಲಾ ಕಸರತ್ತು ನಡೆಸುತ್ತಿದೆ. ಗ್ರಾಮಗಳ ಅಸ್ಮಿತೆಯಾಗಿರುವ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಪಾಲಕರು ಮುಂದಾಗಬೇಕು ಎಂದರು.
ಹೆಬ್ಬಾಲೆ ಗ್ರಾಪಂ ಅಧ್ಯಕ್ಷೆ ಅರುಣಾ ಕುಮಾರಿ, ಪಿಡಿಒ ಮೋಹನ್, ಕಾರ್ಯದರ್ಶಿ ಸುರೇಶ್, ಕ್ಲಸ್ಟರ್ ಸಂಪನ್ಮೂಲ ಶಿಕ್ಷಕ ಆದರ್ಶ, ಹಳಗೋಟೆ ಶಾಲೆಯ ಮುಖ್ಯ ಶಿಕ್ಷಕ ರಮೇಶ್, ಕಣಿವೆ ಶಾಲೆಯ ಕಸ್ತೂರಿ, ಮಣಜೂರು ಶಾಲೆಯ ರಾಣಿ, ಜೇನುಕಲ್ಲು ಬೆಟ್ಟ ಶಾಲೆಯ ರಾಮೇಗೌಡ, ಹೆಬ್ಬಾಲೆಯ ವೆಂಕಟೇಶ್, ನಲ್ಲೂರು ಶಾಲೆಯ ಚಂದ್ರಶೇಖರ್, ಶಿರಂಗಾಲ ಶಾಲೆಯ ವಸಂತ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿರೂಪಾಕ್ಷ, ಸದಸ್ಯೆ ಪವಿತ್ರಾ ಇದ್ದರು.