ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಸಮೀಪದ ಕಣಗಾಲು ಗ್ರಾಮದಲ್ಲಿ ಮೇ 30ರಂದು ಶ್ರೀ ದಿಡ್ಡಿಯಮ್ಮ ದೇವಿಯ ಬಂಡಿ (ತೇರು) ಹಬ್ಬ ನಡೆಯಲಿದೆ.
ಎರಡು, ಮೂರು ವರ್ಷಕ್ಕೊಮ್ಮೆ ಗ್ರಾಮದಲ್ಲಿ ದೇವಿಯ ಹಬ್ಬವನ್ನು ಆಯೋಜನೆ ಮಾಡಿಕೊಂಡು ಬರುತ್ತಿದ್ದು, ಕಳೆದ ಬಾರಿ ಗ್ರಾಮದ ಒಳಿತಿಗಾಗಿ ಚಂಡಿಕಾ ಹೋಮ, ಪೂಜೆ ನೆರವೇರಿಸಲಾಗಿತ್ತು. ಈ ಬಾರಿ ನಾಲ್ಕು ವರ್ಷದ ಬಳಿಕ ಹಬ್ಬವು ನಡೆಯುತ್ತಿದೆ. ಗ್ರಾಮದಲ್ಲಿರುವ ಹದಿನೆಂಟು ಸಮುದಾಯದ ಮುಖಂಡರು ಒಗ್ಗೂಡಿ ಆಚರಣೆ ಮಾಡುತ್ತಿದ್ದು, ಯುಗಾದಿ ಹಬ್ಬದ ಬಳಿಕ ದೇವಿಯ ಹಬ್ಬದ ಆಚರಣೆ ಬಗ್ಗೆ ಪಂಚಾಂಗ ಕೇಳಿದಾಗ ಮೇ 30 ರಂದು ನಡೆಸಲು ಅನುಮತಿ ಸಿಕ್ಕಿದೆ. ಹಬ್ಬಕ್ಕೂ ಮುನ್ನ ಕನ್ನಂಬಾಡಿ ದೇವಿಯ ಅನುಗ್ರಹ ಪಡೆದುಕೊಂಡು, ಗ್ರಾಮದಲ್ಲಿ ಕೆಟ್ಟಶಕ್ತಿ, ಸೋಂಕು ಎಲ್ಲ ಹೋಗಲಾಡಿಸಲು ಮಾರಿ ಹಬ್ಬ ಆಚರಣೆ ಮಾಡಲಾಗಿದೆ. ಇದಾದ ಒಂದು ವಾರದ ಬಳಿಕ ಶ್ರೀ ದಿಡ್ಡಿಯಮ್ಮ (ದೊಡ್ಡಮ್ಮ)ಬಂಡಿ ಹಬ್ಬ ಜರುಗಲಿದೆ.