

ಬಾಗಲಕೋಟೆ: ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ಬರುವ ವಿವಿಧ ಆಸ್ತಿಗಳ ಕಟ್ಟಡಗಳಿಗೆ ಅನುಗುವಣವಾಗಿ ಕರ ವಸೂಲಿ ಮಾಡುವಂತೆ ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಬುಧವಾರ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಆಸ್ತಿ ಮಾಲಿಕರು ನೈಜ ಆಸ್ತಿ ಕಟ್ಟಡಕ್ಕೆ ಅನುಗುಣವಾಗಿ ಕರವನ್ನು ಭರಣ ಮಾಡುತ್ತಿಲ್ಲ. ಈಗಾಗಲೇ ಇದ್ದ ಕಟ್ಟಡದಲ್ಲಿ ಹೆಚ್ಚುವರಿಯಾಗಿ ನಿರ್ಮಿಸಲಾದ ಕಟ್ಟಡಕ್ಕೆ ಕರ ಕಟ್ಟದೇ ಇರುವುದು ಬಹಳಷ್ಟು ಕಂಡುಬರುತ್ತಿವೆ. ಇದರಿಂದ ಸ್ಥಳೀಯ ಸಂಸ್ಥೆಗಳ ಆದಾಯ ಕುಂಠಿತಗೊಳ್ಳುತ್ತಿದೆ ಎಂದರು.
ಕೆಲವು ಆಸ್ತಿ ಮಾಲೀಕರು ಮನೆ ಮೇಲೆ ವಾಣಜ್ಯ ಮಳಿಗೆ ಕಟ್ಟಿಕೊಂಡರು ಸಹ ಮನೆ ಮೇಲಿನ ಕರ ಮಾತ್ರ ಕಟ್ಟುತ್ತಿದ್ದಾರೆ. ಆದರೆ ವಾಣಜ್ಯ ಬಳಕೆಗಾಗಿ ಕಟ್ಟಿದ ಕಟ್ಟಡಕ್ಕೆ ಕರ ಕಟ್ಟದಿರುವುದು ಕಂಡುಬಂದಿರುತ್ತದೆ. ಅಲ್ಲದೇ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜು, ಹಾಸ್ಪಿಟಲ್‌ಗಳ ಕಟ್ಟಡಗಳಿಗೂ ಸರ್ಕಾರದ ನಿಯಮಾವಳಿ ಪ್ರಕಾರ ಕರ ನಿಗಽಪಡಿಸಲಾಗಿದ್ದು, ಅಳತೆಗೆ ಅನುಗುಣವಾಗಿ ಕರ ವಸೂಲಿಗೆ ಕ್ರಮವಹಿಸಬೇಕು. ಸ್ಥಳೀಯ ಸಂಸ್ಥೆಗಳ ಅಭಿಯಂತರರು ಪ್ರತಿಯೊಂದು ಆಸ್ತಿಗಳ ನೈಜ ಅಳತೆಯನ್ನು ಪರಿಶೀಲಿಸಿ ಕರ ನಿಗದಿ ಮಾಡಿದಲ್ಲಿ ಆದಾಯದ ಮೂಲ ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಾತನಾಡಿ, ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ಪೌರಕಾರ್ಮಿಕ ಹುದ್ದೆಗಳು ಬಹಳಷ್ಟು ಖಾಲಿ ಇರುತ್ತವೆ. ಈಗಾಗಲೇ ನೇರ ಪಾವತಿ ಮೂಲಕ ತೆಗೆದುಕೊಳ್ಳಲಾದ ಕೆಲವರನ್ನು ಪೌರಕಾರ್ಮಿಕರನ್ನು ಖಾಯಂಗೊಳಿಸಲಾಗಿದೆ. ಆದರೆ ಇನ್ನು ಸಾಕಷ್ಟು ಸಿಬ್ಬಂದಿಗಳು ಬೇಕಾಗುತ್ತದೆ. ಇದರಿಂದ ನಗರ, ಪಟ್ಟಣಗಳ ಸ್ಥಚ್ಚತೆಗೆ ತೊಂದರೆಯಾಗುತ್ತಿದೆ. ಸ್ವಚ್ಚತೆ ಇರಲಿಲ್ಲ ಎಂದರೆ ಹೇಗೆ ತಾತ್ಕಾಲಿಕವಾದರೂ ಸಿಬ್ಬಂದಿಗಳನ್ನು ನೇಮಿಸಲು ಅನುಮತಿ ನೀಡುವಂತೆ ಮನವಿ ಮಾಡಿದರು.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಮಾತನಾಡಿ, ಸಹಾಯಕ ಇಂಜಿನಿಯರಗಳ ಕೊರತೆ ಇದ್ದು, ೩ ದಿನಗಳ ಒಂದು ಕಡೆ ಕೆಲಸ ಮಾಡಿದರೆ, ಇನ್ನು ೩ ದಿನ ಮತ್ತೊಂದು ಕಡೆಗಳಲ್ಲಿ ಕೆಲಸ ನಿರ್ವಹಿಸುವ ಪ್ರಸಂಗ ಎದುರಾಗಿದೆ. ಇಂದಿರಾ ಕ್ಯಾಂಟಿನ್‌ಗೆ ಸಂಬಂಧಿಸಿದಂತೆ ಇಳಕಲ್ಲನಲ್ಲಿ ಬೇಡಿಕೆ ಹೆಚ್ಚಿಗೆ ಇದೆ. ಬೆಳಗಿನ, ಮಧ್ಯಾಹ್ನ ಹಾಗೂ ರಾತ್ರಿಯ ಊಟದಲ್ಲಿ ಮೂರು ಹಂತದಲ್ಲಿ ೩೦೦ ಜನಕ್ಕೆ ನಿಗದಿಪಡಿಸಿದ್ದು, ಅದರ ಪ್ರಮಾಣ ಹೆಚ್ಚಿಸುವಂತೆ ಆಗ್ರಹಿಸಿದರು.
ಸಚಿವ, ಶಾಸಕರ ಮನವಿ ಆಲಿಸಿದ ಸಚಿವ ರಹೀಂ ಖಾನ್ ಮಾತನಾಡಿ, ಬೆಳಗ್ಗೆ ಮತ್ತು ಮಧ್ಯಾಹ್ನ ಹಾಗೂ ರಾತ್ರಿವೇಳೆಯಲ್ಲಿ ೩೦೦ ಜನ ಸೇವೆ ಪಡೆಯುತ್ತಿರುವ ಬಗ್ಗೆ ಪರಿಶೀಲಿಸಿ, ಪ್ರತಿ ಟಿಪನ್ ಮತ್ತು ಊಟದ ಬಿಲ್‌ಗಳನ್ನು ಪರಿಶೀಲಿಸಿ ಕಡಿಮೆ ಇರುವ ವೇಳೆಯಲ್ಲಿನ ಪ್ರಮಾಣವನ್ನು ಹೆಚ್ಚಿಗೆ ಬೇಡಿಕೆ ಇರುವ ವೇಳೆಯಲ್ಲಿ ಬಳಕೆ ಮಾಡಿಕೊಳ್ಳಲು ತಿಳಿದರು. ಅಲ್ಲದೇ ಸಿಸಿಟಿವಿಯನ್ನು ಕಡ್ಡಾಯವಾಗಿ ಕ್ಯಾಂಟಿನ್‌ನಲ್ಲಿ ಹಾಕಲು ತಿಳಿಸಿದ ಅವರು ಆರೋಗ್ಯ ನಿರೀಕ್ಷಕರು ವಾರಕ್ಕೆ ಒಂದು ಬಾರಿ ಕ್ಯಾಂಟಿನ್‌ಗೆ ಭೇಟಿ ನೀಡಿ ಊಟ ಮಾಡಿ ಆಹಾರ ಗುಣಮಟ್ಟ ಪರಿಶೀಲಸುವ ಕಾರ್ಯವಾಗಬೇಕು ಎಂದರು.
ಮುಧೋಳ ನಗರಕ್ಕೆ ಸಂಬಂಧಿಸಿದ ಕುಡಿಯುವ ನೀರಿನ ಪ್ರಸ್ತಾವನೆ ಸಲ್ಲಿಸಿದ್ದು, ಬೇಗನೆ ಮಂಜೂರಾತಿ ಕ್ರಮವಹಿಸಲು ತಿಳಿಸಿದರು. ಆಲಮಟ್ಟಿಯಿಂದ ಕಮತಗಿ, ಗುಳೇದಗುಡ್ಡ ಹಾಗೂ ಅಮೀನಗಡಕ್ಕೆ ಕುಡಿಯುವ ನೀರು ಸರಬರಾಜು ಆಗುತ್ತಿದ್ದು, ಸರಿಯಾಗಿ ನಿರ್ವಹಣೆ ಇಲ್ಲದೇ ನೀರು ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ಪದೇ ಪದೇ ಒಂದಲ್ಲ ಒಂದು ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.
ಕುಡಿಯುವ ನೀರನ್ನು ಪದೇ ಪದೇ ಪರಿಶೀಲಿಸುವ ಕಾರ್ಯವಾಗಬೇಕು. ಪರಿಶೀಲಿಸಿದ ಬಗ್ಗೆ ವರದಿ ಪಡೆದುಕೊಳ್ಳುವಂತೆ ಜಿಲ್ಲಾಽಕಾಗಳಿಗೆ ತಿಳಿಸಿದರು. ಡೆಂಘ್ಯೆ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕು. ಜಿಲ್ಲೆಯಲ್ಲಿ ಶೇ.೭೦ ರಷ್ಟು ಕೆಲಸವಾಗಿದೆ. ಬಾಕಿ ಕಾಮಗಾರಿಗಳನ್ನು ಕೂಡಲೇ ಟೆಂಡರ್ ಕರೆದು ಮುಗಿಸಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಶಾಸಕ ಹಾಗೂ ಬಿಡಿಟಿಎ ಅಧ್ಯಕ್ಷ ಎಚ್.ವೈ.ಮೇಟಿ, ಶಾಸಕ ಎಚ್.ವೈ.ಮೇಟಿ, ಪೌರಾಡಳಿತ ಇಲಾಖೆಯ ನಿರ್ದೇಶಕ ಪ್ರಭುಲಿಂಗ ಕವಳಕಟ್ಟಿ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಉಪವಿಭಾಗಾಽಕಾರಿ ಸಂತೋಷ ಜಗಲಾಸರ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಮುಖ್ಯಾಽಕಾರಿಗಳು ಉಪಸ್ಥಿತರಿದ್ದರು.