

ಗೋಕರ್ಣ: ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಗರಿಷ್ಠ ಮಟ್ಟದಲ್ಲಿ ಹಣ ಮಂಜೂರು ಮಾಡುತ್ತಿದೆ. ಅದನ್ನು ಬಳಸಿ ಜನರಿಗೆ ತೃಪ್ತಿ ಮತ್ತು ಅನುಕೂಲವಾಗುವ ಮಟ್ಟದಲ್ಲಿ ಕಾಮಗಾರಿ ನಡೆಯುವಂತೆ ಅಧಿಕಾರಿಗಳು ನೋಡಿಕೊಳ್ಳುವಂತಾಗಲಿ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
ಹತ್ತಿರದ ತೊರ್ಕೆ ಗ್ರಾಪಂ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ನಂತರ ಕಾಮಗಾರಿ ಫಲಕ ಉದ್ಘಾಟಿಸಿ ಅವರು ಮಾತನಾಡಿದರು.
ಇದೇ ಗ್ರಾಪಂ ವ್ಯಾಪ್ತಿಯ ಮಳಲಿ ಗ್ರಾಮದಲ್ಲಿ ನಿರ್ವಿುಸಲಾದ ಸಿಮೆಂಟ್ ರಸ್ತೆ ಕೆಲವೇ ದಿನಗಳಲ್ಲಿ ಕಿತ್ತು ಹೋಯಿತು. ಕಾಮಗಾರಿ ನಡೆಯುವಾಗಲೇ ಅಧಿಕಾರಿಗಳು ಗುಣಮಟ್ಟದ ಬಗ್ಗೆ ಲಕ್ಷ್ಯ ವಹಿಸದೇ ಇರುವುದು ಇದಕ್ಕೆ ಮುಖ್ಯ ಕಾರಣ. ಆದ್ದರಿಂದ ಮುಂದೆ ಇಂತಹ ಘಟನೆ ಆಗದಂತೆ ಜಾಗೃತಿ ವಹಿಸುವಂತಾಗಬೇಕು ಎಂದರು.
ಜಿಪಂ ಸದಸ್ಯ ಪ್ರದೀಪ ನಾಯಕ, ತಾಪಂ ಸದಸ್ಯೆ ನೀಲಾಂಬಿಕಾ ನಾಯಕದೊರೆ, ಮಹೇಶ ಶೆಟ್ಟಿ, ತಾಪಂ ಇಒ ಸಿ.ಟಿ.ನಾಯ್ಕ, ಗ್ರಾಪಂ ಮಾಜಿ ಅಧ್ಯಕ್ಷರಾದ ಸುಮಿತ್ರಾ ಗೌಡ, ಮಂಜುನಾಥ ನಾಯಕ, ಗ್ರಾಪಂ ಆಡಳಿತಾಧಿಕಾರಿ ವಸಂತ ಹೆಗಡೆ, ಆರ್.ಜಿ. ಗುನಗಿ, ಬಿಜೆಪಿಯ ನಾಗರಾಜ ನಾಯಕ ತೊರ್ಕೆ, ಆನಂದ ಕವರಿ, ರಾಮು ಕೆಂಚನ್ ಮುಂತಾದವರಿದ್ದರು. ಪಿಡಿಒ ಮುಮ್ತಾಜ್, ಕಾರ್ಯದರ್ಶಿ ವಿನಾಯಕ ನಾಯ್ಕ ನಿರ್ವಹಿಸಿದರು.