

ನುಗ್ಗೇಹಳ್ಳಿ: ಮಟ್ಟನವಿಲೆ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಸುಮಾರು 20 ಹಳ್ಳಿಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವ ಸಲುವಾಗಿ ಸುಮಾರು 20 ಕೋಟಿ ರೂ.ವೆಚ್ಚದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಯಮಿತ ಚನ್ನರಾಯಪಟ್ಟಣ ಮತ್ತು ನುಗ್ಗೇಹಳ್ಳಿ ವಿಭಾಗ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ಹೋಬಳಿಯ ಕಗ್ಗೆರೆ ಗ್ರಾಮದ ಬಳಿ ಸುಮಾರು 20 ಕೋಟಿ ರೂ.ವೆಚ್ಚದ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಮಟ್ಟನವಿಲೆ 66/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಕಗ್ಗೆರೆ ಗ್ರಾಮದ ಬಳಿ ಸೆಸ್ಕ್ ಹಾಗೂ ರಾಮಲಿಂಗಂ ಕನ್‌ಸ್ಟ್ರಕ್ಷನ್ ಸಹಭಾಗಿತ್ವದಲ್ಲಿ ಸುಮಾರು 20 ಕೋಟಿ ರೂ.ವೆಚ್ಚದಲ್ಲಿ 25 ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಮಾಡಲಾಗುತ್ತಿದೆ. ಪ್ಲಾಂಟ್‌ನಿಂದ 7 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ ಹೊಂದಲಾಗಿದೆ ಎಂದರು.
ಮಟ್ಟನವಿಲೆ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಸುಮಾರು 20 ಗ್ರಾಮಗಳ ರೈತರಿಗೆ ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡಬಹುದಾಗಿದೆ. ಪ್ರತಿದಿನ ಕನಿಷ್ಠ 14 ಗಂಟೆ ವಿದ್ಯುತ್ ಪೂರೈಕೆ ಮಾಡಬಹುದು. ಇದರಿಂದ ಈ ಭಾಗದ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಹೆಚ್ಚು ಅನುಕೂಲವಾಗಲಿದೆ. ಕಗ್ಗೆರೆ ಗ್ರಾಮದ ಬಳಿ ಭೂಮಿ ನೀಡಿರುವ ರೈತರಿಗೆ ಪ್ರತಿ ಎಕರೆಗೆ ವಾರ್ಷಿಕ 50 ಸಾವಿರ ರೂ. ನೀಡಲಾಗುತ್ತಿದ್ದು ಎರಡು ವರ್ಷಗಳಿಗೊಮ್ಮೆ ಶೇ.5 ಹೆಚ್ಚಳ ಮಾಡುವುದಾಗಿ ಗುತ್ತಿಗೆದಾರರು ರೈತರೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದಾರೆ. ರೈತರಿಗೆ ಉತ್ತಮ ಬೆಲೆ ಸಿಗುತ್ತಿದ್ದು, ಈ ಬಗ್ಗೆ ಆತಂಕಪಡುವ ಅವಶ್ಯಕತೆ ಇಲ್ಲ ಎಂದರು.
ಮುಂಬರುವ ದಿನಗಳಲ್ಲಿ ತಾಲೂಕಿನ ಹಲವೆಡೆ ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಗಳಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣಕ್ಕೆ ಚಿಂತನೆ ನಡೆಸಲಾಗಿದೆ. ರೈತರು ಸ್ವಯಂ ಪ್ರೇರಿತರಾಗಿ ಪ್ಲಾಂಟ್‌ಗಳಿಗೆ ಭೂಮಿ ನೀಡಲು ಮುಂದಾದರೆ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಸಬಹುದಾಗಿದೆ ಎಂದು ಹೇಳಿದರು.
ಸೆಸ್ಕ್ ಚನ್ನರಾಯಪಟ್ಟಣ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ರತ್ನಾ, ನುಗ್ಗೇಹಳ್ಳಿ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಜ್ರ ಕುಮಾರ್, ಎಚ್‌ಡಿ ವಿಭಾಗ ಕಚೇರಿಯ ಸಹಾಯಕ ಇಂಜಿನಿಯರ್ ಹರೀಶ್, ನುಗ್ಗೇಹಳ್ಳಿ ಕಚೇರಿ ಸಹಾಯಕ ಇಂಜಿನಿಯರ್ ಮಾದೇವ್, ಗೌಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಫೂರ್ತಿ ವಿಜಯಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕಗ್ಗೆರೆ ನಾಗೇಂದ್ರ ಬಾಬು, ಹುಲಿಕೆರೆ ಸಂಪತ್ ಕುಮಾರ್, ಬೆಳಗಿಹಳ್ಳಿ ಪುಟ್ಟಸ್ವಾಮಿ, ಉಳ್ಳಾವಳ್ಳಿ ರಮೇಶ್, ರಾಮಲಿಂಗಂ ಕನ್‌ಸ್ಟ್ರಕ್ಷನ್ ಲಿಮಿಟೆಡ್‌ನ ಪ್ರಾದೇಶಿಕ ವ್ಯವಸ್ಥಾಪಕ ಶೇಖರ್, ವಲಯ ವ್ಯವಸ್ಥಾಪಕ ರಾಕೇಶ್, ರೈತ ಸಂಘದ ಮುಖಂಡರು ಭಾಗವಹಿಸಿದ್ದರು.