ಔಷಧ ಅಂಗಡಿಗಳ ಪರಿಶೀಲನೆ

20 YLP 2
Published on

ಯಲ್ಲಾಪುರ: ಕರೊನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಶುಕ್ರವಾರ ಪಟ್ಟಣದ ಔಷಧ ಅಂಗಡಿಗಳಿಗೆ ತೆರಳಿ ಸಂಗ್ರಹ, ಮಾರಾಟದ ದರ ಇತರ ವಿಷಯಗಳ ಕುರಿತು ಮಾಲೀಕರಿಂದ ಮಾಹಿತಿ ಪಡೆದರು.

ಆಹಾರ ವಿಭಾಗದ ಶಿರಸ್ತೇದಾರ್ ಚಂದ್ರಶೇಖರ, ಶಿರಸಿಯ ಆರೋಗ್ಯ ನಿರೀಕ್ಷಕ ರಾಜೇಂದ್ರ ಶರ್ಮಾ ನೇತೃತ್ವದಲ್ಲಿ ಔಷಧ ಅಂಗಡಿಗಳಿಗೆ ಭೇಟಿ ನೀಡಿ, ಮಾಸ್ಕ್ ಹಾಗೂ ಸ್ಯಾನಿಟೈಸರ್ ವಸ್ತುಗಳ ಸಂಗ್ರಹದ ಮಾಹಿತಿ ಪಡೆದರು. ಅವುಗಳನ್ನು ಬೇಡಿಕೆಗನುಗುಣವಾಗಿ ಮಾತ್ರ ಸಂಗ್ರಹಿಸಬೇಕು. ಹೆಚ್ಚಿನ ದರದಲ್ಲಿ ಮಾರಾಟ ಮಾಡಬಾರದೆಂದು ಸೂಚನೆ ನೀಡಲಾಯಿತು.

ತಪಾಸಣೆ: ಉದ್ಯೋಗಕ್ಕಾಗಿ ಹೊರ ದೇಶಗಳಲ್ಲಿ ನೆಲೆಸಿದ್ದ ತಾಲೂಕಿನ ಮೂವರು ಶುಕ್ರವಾರ ಊರಿಗೆ ಮರಳಿದ್ದು, ಅವರನ್ನು ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ಮಾಡಿ ತಪಾಸಣೆ ನಡೆಸಿದ್ದಾರೆ. ಜರ್ಮನಿ ಹಾಗೂ ಓಮನ್​ನಿಂದ ಯಲ್ಲಾಪುರದ ಇಬ್ಬರು ಹಾಗೂ ಆಸ್ಟ್ರೇಲಿಯಾದಿಂದ ಮಂಚಿಕೇರಿಯ ಒಬ್ಬರು ಊರಿಗೆ ಬಂದಿದ್ದು, ಅವರ ತಪಾಸಣೆ ನಡೆಸಲಾಗಿದೆ. ಅವರು ಆರೋಗ್ಯವಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪ್ರವಾರ್ ತಿಳಿಸಿದ್ದಾರೆ. ತಾಲೂಕಿಗೆ ಹೊರ ಊರುಗಳಿಂದ ಬರುವವರನ್ನು ತಪಾಸಣೆ ನಡೆಸಲು ಅನುಕೂಲವಾಗುವಂತೆ ಯಲ್ಲಾಪುರ-ಶಿರಸಿ ರಸ್ತೆಯ ತುಡಗುಣಿ ಬಳಿ ಸ್ಕ್ರೀನಿಂಗ್ ಕೇಂದ್ರ ಆರಂಭಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net