ಔಟರ್ ರಿಂಗ್ ರೋಡ್ ಕೆಲಸ ಬೇಗ ಶುರು ಮಾಡಲು ಆಗ್ರಹ

KKCCI
Published on

ಕಲಬುರಗಿ: ನಗರದಲ್ಲಿ ಎರಡನೇ ರಿಂಗ್ ರಸ್ತೆ ನಿರ್ಮಾಣ, ನನೆಗುದಿಗೆ ಬಿದ್ದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ (ಕೆಕೆಸಿಸಿಐ) ಆಗ್ರಹಿಸಿದೆ.
ಈ ಕುರಿತು ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಖಾತೆ ಸಚಿವ ನಿತೀನ್ ಗಡ್ಕರಿ ಅವರನ್ನು ಸಂಸದ ಡಾ.ಉಮೇಶ ಜಾಧವ್ ನೇತೃತ್ವದಲ್ಲಿ ಬುಧವಾರ ಭೇಟಿ ಮಾಡಿ, ಹೈದರಾಬಾದ್-ಪುಣೆ ರಾಷ್ಟಿಯ ಹೆದ್ದಾರಿಯಲ್ಲಿ ಸೊಲ್ಲಾಪುರನಿಂದ ಉಮರ್ಗಾವರೆಗೆ ನನೆಗುದಿಗೆ ಬಿದ್ದಿರುವ ಸುಮಾರು ೮೦ ಕಿ.ಮೀ. ರಸ್ತೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಅಕ್ಕಲಕೋಟ-ಗಾಣಗಾಪುರ ರಾಷ್ಟಿಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಮನವಿ ಮಾಡಿದರು.
ಮನವಿ ಸ್ವೀಕರಿಸಿದ ಸಚಿವ ಗಡ್ಕರಿ, ಆದ್ಯತೆ ಮೇರೆಗೆ ಎಲ್ಲ ಬೇಡಿಕೆಗಳನ್ನು ಈಡೇರಿಸಲಾಗುವುದು. ನನೆಗುದಿಗೆ ಬಿದ್ದಿರುವ ಕಾಮಗಾರಿ ಬಗ್ಗೆ ಗಮನಹರಿಸಿ ಪೂರ್ಣಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಸಂಸ್ಥೆ ಅಧ್ಯಕ್ಷ ಶಶಿಕಾಂತ ಪಾಟೀಲ್, ಕಾರ್ಯದರ್ಶಿ ಮಂಜುನಾಥ ಜೇವರ್ಗಿ, ಖಜಾಂಚಿ ಸಿಎ ಉತ್ತಮ ಬಜಾಜ್, ಉದ್ಯಮಿಗಳಾದ ಶರಣು ಪಪ್ಪಾ, ಮಹಾದೇವ ಖೇಣಿ, ಶಿವರಾಜ ಇಂಗಿನಶೆಟ್ಟಿ, ಅಭಿಜಿತ್ ಪಡಶೆಟ್ಟಿ, ನರೇನ್ ಪಾಟೀಲ್, ಸಂಪತ್‌ಕುಮಾರ್ ಪಾಟೀಲ್, ರವಿಚಂದ್ರ ಪಾಟೀಲ್, ಸಂತೋಷ ಲಂಗರ್, ಸುನೀಲ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net