

ಹನೂರು: ಓದಿನ ಜತೆಗೆ ಆರೋಗ್ಯದ ಕಡೆಯೂ ಗಮನಹರಿಸುವ ಜತೆಗೆ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದುವಂತೆ ಬೆಂಗಳೂರು ಅಮೃತ ಬಿಂದು ಫೌಂಡೇಷನ್ ಮುಖ್ಯಸ್ಥ ಪ್ರಶಾಂತ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಾಲೂಕಿನ ಮಲೆ ಮಹದೇಶ್ವರಬೆಟ್ಟದ ತಪ್ಪಲಿನ ಗೊರಸಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಉಚಿತವಾಗಿ ಪಾದರಕ್ಷೆ ವಿತರಿಸಿ ಮಾತನಾಡಿದರು.
ಪವಾಡ ಪುರುಷ ಶ್ರೀಮಹದೇಶ್ವರರು ಸಂಚರಿಸಿದ ಮ.ಬೆಟ್ಟ ಭಾಗವು ಬೆಟ್ಟ ಗುಡ್ಡಗಳಿಂದ ಕೂಡಿದ್ದು, ಇದರ ತಪ್ಪಲಿನಲ್ಲಿ ಹಲವು ಗ್ರಾಮಗಳಿವೆ. ಇಲ್ಲಿನ ಬಹುತೇಕರು ಬಡ ಕುಟುಂಬಕ್ಕೆ ಸೇರಿದ್ದು, ಕೂಲಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಕಷ್ಟದ ನಡುವೆ ಜೀವನ ನಡೆಸುತ್ತಿದ್ದಾರೆ. ಆದರೂ ಭವಿಷ್ಯದ ಹಿತದೃಷ್ಟಿಯಿಂದ ಮಕ್ಕಳನ್ನು ಶಾಲೆಗೆ ಸೇರಿಸಿ ಶಿಕ್ಷಣವನ್ನು ಕೊಡಿಸುತ್ತಿರುವುದು ನಿಜಕ್ಕೂ ಮೆಚ್ಚುಗೆ ಸಂಗತಿ. ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಆರೋಗ್ಯವೂ ಮುಖ್ಯ. ಇದು ಮಕ್ಕಳು ಶೈಕ್ಷಣಿಕವಾಗಿ ಮುಂದುವರಿಯಲು ಹಾಗೂ ಸಾಧನೆಗೈಯ್ಯಲು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಈ ಭಾಗದ ಗ್ರಾಮಗಳಿಗೆ ಹಿಂದೆ ಆಗಮಿಸಿದ್ದ ವೇಳೆ ಬಹುತೇಕ ಮಕ್ಕಳು ಕಾಲಿಗೆ ಪಾದರಕ್ಷೆ ಧರಿಸದೇ ಇರುವುದು ಕಂಡುಬಂತು. ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂಬುದು ತಿಳಿಯಿತು.
ಈ ಬಗ್ಗೆ ವಿಚಾರಿಸಲಾಗಿ ಇದಕ್ಕೆ ಬಡತನ ಕಾರಣವೆಂಬುದು ತಿಳಿಯಿತು. ಇದನ್ನು ಮನಗಂಡು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಪಾದರಕ್ಷೆ ನೀಡುವುದು ಸೂಕ್ತ ಎಂದು ನಿರ್ಧರಿಸಲಾಯಿತು. ಈ ದೆಸೆಯಲ್ಲಿ ಅರಣ್ಯ ಪ್ರದೇಶದಿಂದ ಕೂಡಿರುವ ಮ.ಬೆಟ್ಟದ ತಪ್ಪಲಿನ ಗೊರಸಾಣೆ ಸೇರಿದಂತೆ ತೊಳಸಿಕೆರೆ, ಕೀರನಹೊಲ, ತೇಕಣೆ, ಪಡಸಲನತ್ತ, ಇಂಡಿಗನತ್ತ, ತೋಕೆರೆ, ಕೊಂಬುಡಿಕ್ಕಿ, ಪುದೂರು, ಆನೆಹೊಲ ಹಾಗೂ ಈ ಭಾಗದ ಸರ್ಕಾರಿ ಶಾಲೆಗಳ 478 ಮಕ್ಕಳಿಗೆ ಫೌಂಡೇಷನ್ ವತಿಯಿಂದ ಗುಣಮಟ್ಟದ ಪಾದರಕ್ಷೆಗಳನ್ನು ವಿತರಿಸಲಾಗುತ್ತಿದೆ. ಆದ್ದರಿಂದ ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆಯುವುದರ ಮೂಲಕ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಪಾಲಕರು ಮಕ್ಕಳ ಶಿಕ್ಷಣದ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ಭವಿಷ್ಯದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಪ್ರಶಾಂತ್ ಪತ್ನಿ ಕೌಸಲ್ಯಾ, ಮುಖ್ಯ ಶಿಕ್ಷಕ ಪ್ರಕಾಶ್, ಶಿಕ್ಷಕರಾದ ರಂಗಸ್ವಾಮಿ, ಮಹೇಶ್, ಶಂಕರ್, ಜ್ಯೋತಿ, ಮುಖಂಡರಾದ ಗಿರಿಯ, ಮಾಧವನ್ ಮತ್ತಿತರರು ಹಾಜರಿದ್ದರು.