ಒಳಮೀಸಲಾತಿ ಜಾರಿಗೆ ಮೀನಮೇಷ

Published on

ಹುಣಸೂರು: ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಗೊಳಿಸಲು ಮೀನಮೇಷ ಎಣಿಸುವ ಮೂಲಕ ಸಾಮಾಜಿಕ ನ್ಯಾಯ ನೀತಿಯನ್ನು ಸಮಾಧಿ ಮಾಡುತ್ತಿದೆ ಎಂದು ಮಾದಿಗ ಒಳಮೀಸಲಾತಿ ಹೋರಾಟ ಸಮಿತಿಯ ತಾಲೂಕು ಮುಖಂಡ ಹಾಗೂ ವಕೀಲ ಎಂ.ಶಿವಕುಮಾರ್ ಟೀಕಿಸಿದರು.

ಕಳೆದ ಆಗಸ್ಟ್ ತಿಂಗಳಿನಲ್ಲಿ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಗಳು ಒಳಮೀಸಲಾತಿ ಕಲ್ಪಿಸಬಹುದೆಂದು ಆದೇಶ ನೀಡಿದೆ. ರಾಜ್ಯದಲ್ಲಿ 2008ರಲ್ಲಿ ರಚನೆಯಾದ ನ್ಯಾಯಮೂರ್ತಿ ಸದಾಶಿವ ಆಯೋಗ 2012ರಲ್ಲಿ ನೀಡಿರುವ ವರದಿಯನ್ವಯ ರಾಜ್ಯದಲ್ಲಿ ಮಾದಿಗ ಸಮುದಾಯಕ್ಕೆ ಶೇ.6 ಒಳಮೀಸಲಾತಿ ನೀಡಲು ಶಿಫಾರಸು ಮಾಡಿದೆ. ಹೀಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳಮೀಸಲಾತಿ ಜಾರಿಗೆ ನಾಗಮೋಹನ್ ದಾಸ್ ನೇತೃತ್ವದ ಸಮಿತಿ ರಚಿಸುವ ಮೂಲಕ ಡೋಂಗಿತನ ಮೆರೆದಿದ್ದಾರೆ. ಇದು ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯದ ಪರವಾದ ಸರ್ಕಾರವಲ್ಲ. ಸಾಮಾಜಿಕ ನ್ಯಾಯವನ್ನು ಸಮಾಧಿ ಮಾಡಲು ಹೊರಟಿರುವ ಸರ್ಕಾರವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಈ ಹಿಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಒಳಮೀಸಲಾತಿ ಜಾರಿಗಾಗಿ ಮಾಧುಸ್ವಾಮಿ ನೇತೃತ್ವದ ಸಮಿತಿ ರಚಿಸಿ ಒಳಮೀಸಲಾತಿ ಜಾರಿಗೆ ಕ್ರಮವಹಿಸಿತ್ತು. ನಂತರ ಬಂದ ಕಾಂಗ್ರೆಸ್ ಸರ್ಕಾರ ಕಾಲಹರಣ ತಂತ್ರ ಅನುಸರಿಸುತ್ತಿದೆ. ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಒಳಮೀಸಲಾತಿ ಜಾರಿ ಕುರಿತು ಭರವಸೆ ನೀಡಿದೆ. ಇದೀಗ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ಒಳಮೀಸಲಾತಿ ಜಾರಿಗೆ ನಿರ್ಲಕ್ಷೃ ವಹಿಸಿರುವುದು ಖಂಡನೀಯ. ಅಲ್ಲದೆ ಒಳಮೀಸಲಾತಿ ಜಾರಿಗೊಳಿಸುವವರೆಗೂ ಯಾವುದೇ ಹುದ್ದೆ ನೇಮಕಾತಿ ಮಾಡುವುದಿಲ್ಲವೆಂದು ಮುಖ್ಯಮಂತ್ರಿ ಭರವಸೆ ನೀಡಿದ್ದರು. ಇದೀಗ ವಾರದ ಹಿಂದೆ ರಾಜ್ಯ ಸರ್ಕಾರದ 900 ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ಆದೇಶ ನೀಡುವ ಮೂಲಕ ಮಾತು ತಪ್ಪಿದೆ ಎಂದರು.

ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ;

ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಮಾದಿಗ ಸಮಾಜದ ಹಿರಿಯ ಮುಖಂಡ ಭಾಸ್ಕರ್ ಪ್ರಸಾದ್ ನೇತೃತ್ವದಲ್ಲಿ ಹರಿಹರ ತಾಲೂಕಿನಿಂದ ಬೆಂಗಳೂರು ಕಡೆಗೆ ಪಾದಯಾತ್ರೆ ಕೈಗೊಳ್ಳಲಾಗಿದೆ. ಮಾ.21ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಮಾರೋಪಗೊಳ್ಳಲಿದೆ. ಅಂದು ಹುಣಸೂರಿನಿಂದ ಬೆಂಗಳೂರಿಗೆ ನೂರಾರು ಮಂದಿ ಮಾದಿಗ ಸಮಾಜದವರು ತೆರಳಲಿದ್ದೇವೆ. ನಗರದ ಮುನೇಶ್ವರ ಕಾವಲ್ ಮೈದಾನದಿಂದ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಮಾಹಿತಿ ನೀಡಿದರು.

ನಗರಸಭಾ ಸದಸ್ಯ ಎಚ್.ಪಿ.ಸತೀಶ್‌ಕುಮಾರ್, ಕಾಂತರಾಜು, ಜೆ.ಮಹದೇವ್, ಪ್ರಭಾ ರಾಯನಹಳ್ಳಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net