ಒಳ ಮೀಸಲಾತಿ ಪರ ಸರ್ಕಾರ

IMG-20250322-WA0069
Published on

ತಿ.ನರಸೀಪುರ: ರಾಜ್ಯ ಸರ್ಕಾರ, ಮುಖ್ಯಮಂತ್ರಿ, ಸಮಾಜ ಕಲ್ಯಾಣ ಸಚಿವ ಮೂವರು ಪರಿಶಿಷ್ಟ ಜಾತಿಯ ಒಳ ಮೀಸಲಾತಿ ಪರ ಇದ್ದೇವೆ. ಕೆನೆಪದರ ದತ್ತಾಂಶಕ್ಕೆ ಮುಂದಿನ ಹದಿನೈದು ದಿನದೊಳಗೆ ನ್ಯಾ.ನಾಗಮೋಹನ್ ದಾಸ್ ವರದಿ ಕೈ ಸೇರಿದ ಕೂಡಲೇ ಒಳ ಮೀಸಲು ಜಾರಿಗೊಳಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಭರವಸೆ ನೀಡಿದರು.

ತಾಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ ಶನಿವಾರ ಮಾದರಿ ವಿದ್ಯುತ್ ಗ್ರಾಮ ಯೋಜನೆ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡುತ್ತಿದ್ದ ವೇಳೆ ವರುಣ ವಿಧಾನಸಭಾ ಕ್ಷೇತ್ರದ ಹುಣಸೂರು ಗ್ರಾಮದ ಸಮುದಾಯ ಯುವಕನೊಬ್ಬ ಸಚಿವರ ಎದುರು ಒಳ ಮೀಸಲಾತಿ ಜಾರಿಯ ಬಗ್ಗೆ ನಿಮ್ಮ ನಿಲುವನ್ನು ಪ್ರಕಟಿಸಬೇಕೆಂದು ಪಟ್ಟು ಹಿಡಿದ. ಈ ಹಿನ್ನೆಲೆಯಲ್ಲಿ ಪ್ರತ್ರಿಕ್ರಿಯಿಸಿದ ಸಚಿವರು ದತ್ತಾಂಶಕ್ಕೆ ಆಯೋಗ ಅಂಕಿ ಸಂಖ್ಯೆ ಕೊಟ್ಟಾಗ ಸಂವಿಧಾನದ ನಿಯಮದಡಿ ಒಳ ಮೀಸಲು ನಾವೇ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಸಮಾಜ ಕಲ್ಯಾಣ ಸಚಿವರಾಗಿದ್ದ ನಾರಾಯಣಸ್ವಾಮಿ ಪರಿಶಿಷ್ಟರ ಒಳ ಮೀಸಲು ಸಂವಿಧಾನ ವಿರೋಧಿ, ಮಾಡಲು ಸಾಧ್ಯವಿಲ್ಲ ಎಂದ್ದಿದ್ದರು. ಮತ್ತೊಬ್ಬ ಸಚಿವರಾಗಿದ್ದ ಗೋವಿಂದ ಕಾರಜೋಳ ಒಳ ಮೀಸಲಾತಿ ನಿರಾಕರಿಸಿದ್ದರು. ಒಳ ಮೀಸಲಾತಿ ವಿಚಾರದಲ್ಲಿ ನನ್ನನ್ನೇ ಅನುಮಾನಿಸಿದರೆ, ಬೇರೆ ಯಾರೂ ಮಾಡಲ್ಲ. ಜನರ ಅನುಕೂಲಕ್ಕೆ ಒಳ ಮೀಸಲು ಇರೋದು, ರಾಜಕಾರಣ ಮಾಡಕ್ಕಲ್ಲ. ದತ್ತಾಂಶಕ್ಕೆ ಜಾತಿ ಜನಗಣತಿ ಅಂಕಿ ಸಂಖ್ಯೆ ಜೋಡಣೆ ಮಾಡದೆ ಜಾರಿ ಮಾಡಿದರೆ, ಜಾರಿಗೆ ಬರಲ್ಲ. ಸದ್ಯದಲ್ಲೇ ಒಳ ಮೀಸಲಾತಿ ಜಾರಿಗೊಳಿಸಿ ನಮ್ಮ ಮೇಲಿನ ಕೆಲವರ ಅಪಪ್ರಚಾರ ಹಾಗೂ ಹಾರಾಟವನ್ನು ಕೊನೆಗಾಣಿಸುತ್ತೇವೆ ಎಂದು ಹೇಳಿದರು.

ಒಳ ಮೀಸಲಾತಿ ಜಾರಿ ಸಂಬಂಧ ಸುಪ್ರೀಂಕೋರ್ಟ್ ಆಯಾಯ ರಾಜ್ಯ ಸರ್ಕಾರಗಳು ನಿರ್ಧಾರ ತೆಗೆದುಕೊಳ್ಳಬಹುದೆಂದು ಆದೇಶ ನೀಡಿದ ಬಳಿಕ ಹರಿಯಾಣದಲ್ಲಿ ಸರ್ಕಾರ ಸಂಪೂರ್ಣ ಜಾರಿ ಮಾಡುವ ನಿರ್ಧಾರ ತೆಗೆದುಕೊಂಡಿದೆ. ಆದರೂ ಇನ್ನು ಜಾರಿ ಮಾಡಿಲ್ಲ. ನೆರೆಯ ತೆಲಂಗಾಣದಲ್ಲಿರುವ ಕಾಂಗ್ರೆಸ್ ಸರ್ಕಾರ ಹಾಗೂ ಆಂಧ್ರಪ್ರದೇಶದಲ್ಲಿ ಒಳಮೀಸಲಿಗೆ ಅಲ್ಲಿನ ಸರ್ಕಾರಗಳು ಮುಂದಾಗಿವೆ. ಪರಿಶಿಷ್ಟರ ಜಾತಿ ಪಟ್ಟಿಯಲ್ಲಿನ ಜಾತಿಯನ್ನು ತೆಗೆಯುವುದು ಅಥವಾ ಮತ್ತೊಂದು ಜಾತಿಯನ್ನು ಸೇರ್ಪಡೆಗೊಳಿಸುವ ಅಧಿಕಾರ ಸಂಸತ್ತಿಗೆ ಇದೆ. ಮಾದಿಗ ಅಥವಾ ಹೊಲಯ ಎಂಬ ಪದವನ್ನು ಬಳಸುವುದೇ ಅಸ್ಪೃಶ್ಯತೆ ಆಚರಿಸಿದಂತೆ ಎಂಬುದನ್ನು ಸಮುದಾಯಗಳು ಅರಿಯಬೇಕು. ಈ ಹಿಂದೆಯೇ ಒಳ ಮೀಸಲಾತಿ ಜಾರಿಗೆ ತರಲು ಮಾಯಾವತಿ ಸೇರಿದಂತೆ, ಬಾಬೂಜಿ ಪುತ್ರಿ ಮೀರಾ ಕುಮಾರ್ ಹಾಗೂ ರಾಮವಿಲಾಸ್ ಪಾಸ್ವಾನ್ ನಿರಾಕರಿಸಿದ್ದರು ಎಂದು ಹೇಳಿದರು.

ರಾಜ್ಯದಲ್ಲಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಒಳ ಮೀಸಲು ಸಂಬಂಧ ನ್ಯಾ.ಸದಾಶಿವ ಆಯೋಗ ರಚಿಸಲಾಯಿತು. ಅಲ್ಲಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಸಮಿಶ್ರ ಸರ್ಕಾರದ ಅವಧಿಯಲ್ಲಿಯೂ ಹೋರಾಟಗಳು ನಡೆಯುತ್ತಲೇ ಬಂದಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವ ಬದಲು ಮುಚ್ಚಿಟ್ಟು, ಪರಿಶಿಷ್ಟ ಜಾತಿಯ ಮೀಸಲನ್ನು ಹಂಚಿಕೆ ಮಾಡಲಾಯಿತು. 2023ರ ಚುನಾವಣೆ ಪೂರ್ವದಲ್ಲಿ ಒಳ ಮೀಸಲಾತಿ ಜಾರಿ ಮಾಡುವ ಭರವಸೆ ನೀಡಲಾಗಿತ್ತು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಸಹಮತ ವ್ಯಕ್ತಪಡಿಸಿ ಜಾರಿಗೆ ಸೂಚನೆ ನೀಡಿರುವುದರಿಂದ ಸಿಎಂ ಸೇರಿದಂತೆ ಸಂಪುಟದಲ್ಲಿರುವ ಪರಿಶಿಷ್ಟ ಜಾತಿಯ ಸಚಿವರು ಹಾಗೂ ಶಾಸಕರೆಲ್ಲ ಕ್ರಮಬದ್ಧವಾಗಿ ಸಂವಿಧಾನದಲ್ಲಿ ಜಾರಿಗೆ ತರಲು ಮುಂದಾಗಿದ್ದೇವೆ ಎಂದು ತಿಳಿಸಿದರು.

ಸೋಸಲೆ ಗ್ರಾಪಂ ಅಧ್ಯಕ್ಷೆ ಶೈಲಜಾ ಮಹೇಶ್, ಮೈಮುಲ್ ಅಧ್ಯಕ್ಷ ಆರ್.ಚಲುವರಾಜು, ಮಾರಾಟ ಸಹಕಾರ ಮಹಾಮಂಡಲ ನಿರ್ದೇಶಕ ವೈ.ಎನ್.ಶಂಕರೇಗೌಡ, ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ವಜ್ರೇಗೌಡ, ನಿರ್ದೇಶಕ ಎಂ.ಮಲ್ಲಿಕಾರ್ಜುನ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಬಸವರಾಜು, ಬಿ.ಚನ್ನಕೇಶವ, ಜಿಪಂ ಮಾಜಿ ಸದಸ್ಯೆ ಸುಧಾ ಮಹದೇವಯ್ಯ, ಹೊನ್ನನಾಯಕ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಂ.ಪರಶಿವಮೂರ್ತಿ, ತಾಪಂ ಮಾಜಿ ಸದಸ್ಯ ಕೆಬ್ಬೆ ಶಿವಸ್ವಾಮಿ, ರಂಗಪ್ಪ, ಕುಕ್ಕೂರು ಗಣೇಶ್, ಜ್ಞಾನೇಂದ್ರ, ಸಚಿವರ ಕರ್ತವ್ಯಾಧಿಕಾರಿ ಎನ್.ರವಿಕುಮಾರ್, ಎಚ್.ಎಂ. ಜನಾರ್ಧನ್, ಆಪ್ತ ಸಹಾಯಕ ಬಿ.ಬಸವರಾಜು, ಮುಖಂಡರಾದ ನಟರಾಜ್, ಸಿದ್ದರಾಜು, ಶಿವರಾಮ, ಸೋಮಣ್ಣ, ಕೆ.ಎಂ.ಮಧುಕುಮಾರ್, ಮಹದೇವಸ್ವಾಮಿ, ಎ.ಎನ್.ಸ್ವಾಮಿ, ರಮೇಶ, ಸೆಸ್ಕ್ ಎಸ್‌ಇ ಸುನೀಲ್ ಕುಮಾರ, ಇಇ ಆನಂದ್, ಇಇ ಜನಾರ್ಧನ್, ಇಒ ಪಿ.ಎಸ್.ಅನಂತರಾಜು, ಬಿಇಒ ಶಿವಮೂರ್ತಿ, ಎಇಇ ಸತೀಶ್ ಚಂದ್ರ, ವೀರೇಶ್, ಶಿವರಾಜು, ಲೋಹಿತ್, ರಿತೀಶ್, ಮಂಜುನಾಥ್, ತೋಟಾಗರಿಕೆ ಎಡಿ ಶಾಂತ, ಎಇ ದೇವರಾಜು, ಬಿಸಿಎಂ ಇಲಾಖೆ ರಾಜಣ್ಣ, ಪಶುವೈದ್ಯ ಇಲಾಖೆ ಎಡಿ ಲಿಂಗರಾಜು, ಸಿಡಿಪಿಇಒ ರಾಜಣ್ಣ, ಉಪತಹಸೀಲ್ದಾರ್ ರಾಜ್‌ಕಾಂತ, ಮೀನುಗಾರಿಕೆ ಇಲಾಖೆ ಎಡಿ ಶ್ವೇತಾ, ಕೃಷಿ ಇಲಾಖೆ ಎಡಿ ಸುಹಾಸಿನಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net