ಒಳ ಪಂಗಡ ಮರೆತು ಒಂದಾಗಿ

bkt-28-4
ಬಾಗಲಕೋಟೆಯ ಸತ್ಯಭೋದರಾಯರ ಮಠದಲ್ಲಿ ಹಮ್ಮಿಕೊಂಡಿದ್ದ ಚಿಂತನಗೋಷ್ಠಿಯಲ್ಲಿ ಚಿಂತಕ ರೋಹಿತ ಚಕ್ರತೀರ್ಥ ಮಾತನಾಡಿದರು.
Published on

ಬಾಗಲಕೋಟೆ: ಬ್ರಾಹ್ಮಣರಲ್ಲಿರುವ ಒಳಪಂಗಡಗಳನ್ನು ಮರೆತು ಎಲ್ಲರೂ ಒಗ್ಗಟ್ಟಾಗಬೇಕಿದೆ. ಅಂದಾಗ ಮಾತ್ರ ಸಮಾಜದ ಪರವಾಗಿ ಎತ್ತಿರುವ ಧ್ವನಿಗೆ ಬೆಲೆ ಸಿಗಲು ಸಾಧ್ಯ ಎಂದು ಚಿಂತಕ ರೋಹಿತ ಚಕ್ರತೀರ್ಥ ಹೇಳಿದರು.

ಇಲ್ಲಿನ ಸತ್ಯಭೋದರಾಯರ ಮಠದಲ್ಲಿ ಯುವಾತ್ಮಾ ವತಿಯಿಂದ ಹಮ್ಮಿಕೊಂಡಿದ್ದ ನಾಳೆಗಾಗಿ ಇಂದಿನ ವಿದ್ಯಾರ್ಥಿ ಎಂಬ ಚಿಂತನಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಾಹ್ಮಣ ಸಮಾಜ ಶಕ್ತಿಯಾಗಬೇಕಾದರೆ ಸಮಾಜದ ಯುವಕರಲ್ಲಿ ದೈಹಿಕ, ಭಾವನಾತ್ಮಕ, ಸಾಂಸ್ಕೃತಿಕ, ಸಾಮಾಜಿಕ, ಬೌದ್ಧಿಕ ಹಾಗೂ ಆರ್ಥಿಕವಾಗಿ ಶಕ್ತಿ ತುಂಬಬೇಕಿದೆ ಎಂದರು.

ಸಮಾಜದಲ್ಲಿನ ಅನಿಷ್ಠ, ಅಸಮಾನತೆ, ಅಸ್ಪÈಶ್ಯತೆ ಹಾಗೂ ಕೆಡಕುಗಳಿಗೆ ಬ್ರಾಹ್ಮಣರು ಮೂಲ ಕಾರಣರಲ್ಲ. ಇವುಗಳಿಗೆ ಬ್ರಾಹ್ಮಣರೇ ಕಾರಣರೂ ಎಂದು ಬಿಂಬಿಸಲಾಗುತ್ತಿದೆ. ಕಾರಣ, ಸಮಾಜದವರು ಇವುಗಳ ಬಗ್ಗೆ ತಲೆ ಕಡೆಸಿಕೊಳ್ಳದೇ ಭಾವನಾತ್ಮಕವಾಗಿ ಗಟ್ಟಿಯಾಗಬೇಕಿದೆ. ನಾವು ಕೇವಲ ಘೋಷಣೆ ಹಾಗೂ ಹೇಳಿಕೆ ನೀಡುವುದರಲ್ಲಿ ತೊಡಗಿಕೊಂಡಿದ್ದೇವೆ. ಅದನ್ನು ಬಿಟ್ಟು, ನಮ್ಮ ಸಾಮರ್ಥ್ಯ ಅರಿತು ಸಂಘಟಿರಾಗಬೇಕಿದೆ ಎಂದರು.

ದೇಶದ ಎಲ್ಲ ಕಾವ್ಯಗಳು, ಶಾಸ್ತ್ರ ಹಾಗೂ ಗ್ರಂಥಗಳ ಮೂಲ ಉದ್ದೇಶ ಆನಂದ ಅಥವಾ ಮೋಕ್ಷವಾಗಿದೆ. ಆದರೆ, ಜೀವನದ ಆನಂದವನ್ನು ಹಾಳು ಮಾಡುವುದೇ ಪಾಶ್ಚಾತ್ಯ ಸಂಸ್ಕೃತಿ. ಕಾರಣ, ಯುವಕರಲ್ಲಿ ನಮ್ಮ ದೇಶದ ಆಚಾರ -ವಿಚಾರಗಳನ್ನು ತಿಳಿಹೇಳುವ ಅವಶ್ಯಕತೆ ಇದೆ. ಜಾತಿಗಳ ನಡುವೆ ಎತ್ತಿಕಟ್ಟುವುದನ್ನು ಪ್ರಾರಂಭಿಸಿದವರು ಬ್ರಿಟಿಷರು ಎಂದು ಹೇಳಿದರು.

ಸರ್ಕಾರದ ಹುದ್ದೆಗಳನ್ನು ಪಡೆಯಬೇಕಾದರೆ ಬ್ರಾಹ್ಮಣರು ಸಾಮಾನ್ಯ ಕೆಟಗೇರಿಯಲ್ಲಿ ಬರುತ್ತಾರೆ. ಅದೇ ಬೇರೆ ವಿಷಯದಲ್ಲಿ ಕೇವಲ ಶೇ.೨ರಷ್ಟಿರುವ ಬ್ರಾಹ್ಮಣರನ್ನು ಕಡೆಗೆಣಸಲಾಗುತ್ತಿದೆ. ಈ ಮನಸ್ಥಿತಿ ೭೫ ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ನಿಜವಾಗಿ ತುಳಿತಕ್ಕೊಳಗಾದ ಸಮಾಜ ನಮ್ಮದು. ಇಂತಹ ಕಾರಣಗಳಿಂದಾಗಿ ಬ್ರಾಹ್ಮಣರು ಸಾಮಾಜಿಕವಾಗಿ ಬಲಿಷ್ಠರಾಗಬೇಕಿದೆ ಎಂದರು.

ಚಿಂನಗೋಷ್ಠಿಕ್ಕಿಂತ ಪೂರ್ವದಲ್ಲಿ ವಿದ್ಯಾಗಿರಿಯ ಇಂಜಿನಿಯರಿಂಗ್ ಕಾಲೇಜ್ ವೃತ್ತದಿಂದ ಕೋಟೆಯ ಸತ್ಯಭೋದರಾಯರ ಮಠದವರೆಗೆ ವಾಕ್‌ಥಾನ್ ನಡೆಯಿತು. ಯುವಾತ್ಮಾ ಸಂಸ್ಥಾಪಕ ಪಂ. ವಿದ್ಯಾಥೀಶಾಚಾರ್ಯ ಗುತ್ತಲ ಮಾತನಾಡಿದರು. ಪಂ. ಭೀಮಸೇನಾಚಾರ್ಯ ನಾಗಸಂಪಿಗೆ, ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ, ಅನಂತ ಮಳಗಿ, ಗೋಪಾಲ ದೇಸಾಯಿ, ವಿನಾಯಕ ದೇಸಾಯಿ, ಕೆ.ಎಸ್.ದೇಶಪಾಂಡೆ, ಅನಂತ ಉಮರ್ಜಿ, ಪಾಂಡುರಂಗ ಹೊಸೂರ, ನರಸಿಂಹ ಆಲೂರ, ಡಾ. ನಾರಾಯಣ ಮುತಾಲಿಕ, ಡಾ. ಸಮೀರ ಕುಲಕರ್ಣಿ, ಅನಿರುದ್ಧ ಮಳಗಿ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net