ಒಪ್ಪಂದದಂತೆ ರಾಜೀನಾಮೆ ಪಡೆಯಿರಿ

26 mar tnp 01
Published on

ತಿ.ನರಸೀಪುರ: ಆಂತರಿಕ ಒಪ್ಪಂದದಂತೆ ತಿ.ನರಸೀಪುರ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದಿರುವುದರಿಂದ ಅಧ್ಯಕ್ಷೆ ಬಿ.ವಸಂತ ಶ್ರೀಕಂಠ ಹಾಗೂ ಉಪಾಧ್ಯಕ್ಷೆ ಎಂ.ರಾಜೇಶ್ವರಿ ರಾಘವೇಂದ್ರ ಅವರಿಂದ ರಾಜೀನಾಮೆ ಪಡೆದು ಒಪ್ಪಂದದಂತೆ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡುವಂತೆ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ಅಧ್ಯಕ್ಷ, ಉಪಾಧ್ಯಕ್ಷರ ರಾಜೀನಾಮೆ ಪಡೆಯುವ ಸಂಬಂಧ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ಯತೀಂದ್ರ ಸಿದ್ದರಾಮಯ್ಯ, ಕೂಡಲೇ ಇಬ್ಬರಿಂದ ರಾಜೀನಾಮೆ ಪಡೆಯುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಸೂಚಿಸಿದರು. ಅಲ್ಲದೆ ಪೂರ್ಣ ಜವಾಬ್ದಾರಿ ವಹಿಸುವಂತೆಯೂ ಸೂಚನೆ ನೀಡಿದರು.

ಅಧ್ಯಕ್ಷೆ ಬಿ.ವಸಂತಾ ಶ್ರೀಕಂಠ, ಸದಸ್ಯ ಮಂಜು ಬಾದಾಮಿ, ಮಾದೇಶ್ ಸೇರಿದಂತೆ ಕೆಲವರು ಗ್ರಾಮದಲ್ಲಿ ಹಬ್ಬ ಇದ್ದ ಕಾರಣ ಭಾಗವಹಿಸಿರಲಿಲ್ಲ. ಉಳಿದಂತೆ ಬಹುತೇಕ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಯತೀಂದ್ರ ಸಿದ್ದರಾಮಯ್ಯ ಅವರ ನಿಲುವಿಗೆ ಬದ್ಧರಿರುವುದಾಗಿ ತಿಳಿಸಿದರು.

ಅಲ್ಲದೆ ಏಪ್ರಿಲ್ 3ರೊಳಗೆ ರಾಜೀನಾಮೆ ಸಲ್ಲಿಸಿ, ಮತ್ತೊಬ್ಬರಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂದ ಅವರು, ಚುನಾವಣೆ ವೇಳೆ ಪಕ್ಷಕ್ಕೆ ಬೆಂಬಲ ಸೂಚಿಸಿರುವ ಸಿ.ಪ್ರಕಾಶ್ ಅವರನ್ನು ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ಜವಾಬ್ದಾರಿಯನ್ನು ಜಿಲ್ಲಾಧ್ಯಕ್ಷ ವಿಜಯಕುಮಾರ್ ಅವರಿಗೆ ನೀಡಲಾಯಿತು.

ತಾಪಂ ಮಾಜಿ ಉಪಾಧ್ಯಕ್ಷ ಬಿ.ಮರಯ್ಯ, ಪುರಸಭಾ ಸದಸ್ಯರಾದ ಮದನ್ ರಾಜ್, ಎನ್.ಸೋಮಣ್ಣ, ಟಿ.ಎಂ.ನಂಜುಂಡಸ್ವಾಮಿ, ಸೈಯದ್ ಅಹಮದ್, ಸಿದ್ದು, ಕರಿಯಪ್ಪ, ಸಿ.ಪ್ರಕಾಶ್, ಮಂಜುನಾಥ, ಮುಖಂಡರಾದ ರಜತ್‌ಗೌಡ, ಹೇಮಂತ್ ಕುಮಾರ್, ವರುಣ ಬ್ಲಾಕ್ ಅಧ್ಯಕ್ಷ ಕೆ.ಮುದ್ದೇಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷ ಹುಣಸೂರು ಬಸವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net