ಒತ್ತಡ ನಿವಾರಣೆಗೆ ಕ್ರೀಡೆ ಸಹಕಾರಿ

IMG-20230827-WA0143
ಪತ್ರಿಕಾ ದಿನಾಚರಣೆ ಪ್ರಯುಕ್ತ ಆಲೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಗೆ ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಚಾಲನೆ ನೀಡಿದರು.
Published on

ಆಲೂರು: ಅಧಿಕಾರಿಗಳು ಹಾಗೂ ಮಾಧ್ಯಮದವರು ಸದಾ ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು.

ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಪತ್ರಿಕಾ ದಿನಾಚರಣೆ ಪ್ರಯುಕ್ತ ತಾಲೂಕು ಕ್ರೀಡಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸೌಹಾರ್ದಯುತ ಕ್ರಿಕೆಟ್ ಪಂದ್ಯಾವಳಿಯಲ್ಲಿ ಮಾತನಾಡಿ, ಆರೋಗ್ಯಕರ ದೇಹ ಮಾತ್ರ ಉತ್ತಮ ಮನಸ್ಸನ್ನು ರೂಪಿಸಲು ಸಾಧ್ಯ. ಮನಸ್ಸು ಚೆನ್ನಾಗಿರಬೇಕು ಎಂದರೆ ದೇಹ ಕೂಡ ಚೆನ್ನಾಗಿರಬೇಕು. ಈ ಹಿನ್ನೆಲೆಯಲ್ಲಿ ಕ್ರೀಡೆ ಅಗತ್ಯವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣೇಗೌಡ ಮಾತನಾಡಿ, ಆಟದಲ್ಲಿ ಸಣ್ಣ, ಪುಟ್ಟ ವಿಚಾರಗಳಿಗೆ ಭಿನ್ನಾಭಿಪ್ರಾಯಗಳು ಬರಬಹುದು. ಆದರೆ ಅದನ್ನು ದೊಡ್ಡದು ಮಾಡಬಾರದು. ಎಲ್ಲರೂ ತೀರ್ಪುಗಾರರ ತೀರ್ಪನ್ನು ಒಪ್ಪಿಕೊಳ್ಳಬೇಕು. ಖುಷಿಯಿಂದ ಆಟವಾಡಿ ಎಲ್ಲರೂ ಗೆದ್ದಿದ್ದೇವೆ ಎಂಬ ಆಶಯವನ್ನಿಟ್ಟುಕೊಂಡು ಹೋಗಬೇಕು ಎಂದು ಸಲಹೆ ನೀಡಿದರು.

ಪತ್ರಕರ್ತರ ಸಂಘ, ರೈತ ಸಂಘ, ಕಂದಾಯ, ಪಂಚಾಯಿತ್ ರಾಜ್, ಶಿಕ್ಷಣ, ಸೆಸ್ಕಾಂ ತಂಡಗಳ ನಡುವೆ ಪಂದ್ಯಾವಳಿ ನಡೆಯಿತು. ಎಪಿಎಂಸಿ ಮಾಜಿ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಾಪಂ ಮಾಜಿ ಸದಸ್ಯರಾದ ನಟರಾಜ್ ನಾಕಲಗೂಡು, ಸಿ.ವಿ.ಲಿಂಗರಾಜು, ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಪಿ.ಎಲ್.ಲಿಂಗರಾಜು, ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ್, ಕಾಂಗ್ರೆಸ್ ಮುಖಂಡ ಶಾಂತಕೃಷ್ಣ, ಕಸಾಪ ಅಧ್ಯಕ್ಷ ಗೋಪಾಲಕೃಷ್ಣ, ರೈತ ಸಂಘದ ಕಾರ್ಯದರ್ಶಿ ಜಯಣ್ಣ ಹೈದೂರು, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪೃಥ್ವಿ ಜಯರಾಮ್, ಉಪಾಧ್ಯಕ್ಷ ಪ್ರದೀಪ್‌ಕುಮಾರ್, ಖಜಾಂಚಿ ನವೀನ್, ಕಾರ್ಯದರ್ಶಿ ಆದಿಲ್, ಸತೀಶ್ ಚಿಕ್ಕಕಣಗಾಲು, ರುದ್ರಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net