

ಹುಲಸೂರು: ಯುವ ಶಕ್ತಿ ಒಂದಾಗಿ, ಗ್ರಾಮಸ್ಥರೆಲ್ಲರೂ ಒಗ್ಗೂಡಿದರೆ ಇತಿಹಾಸವನ್ನು ಸೃಷ್ಟಿಸಬಹುದು ಎಂಬುದಕ್ಕೆ ಬೇಲೂರು ಗ್ರಾಮಸ್ಥರ ಭವಾನಿ ಜಾತ್ರಾ ಉತ್ಸವವೇ ಮಾದರಿಯಾಗಿದೆ. ಒಂದು ಗ್ರಾಮದಲ್ಲಿ ಅಂಬಾರಿ ಮೆರವಣಿಗೆ ನಡೆಯುತ್ತಿರುವುದು ಇಲ್ಲಿನ ಒಗ್ಗಟ್ಟು, ಭಕ್ತಿ, ಶ್ರದ್ಧೆಗೆ ಸಾಕ್ಷಿ ಎಂದು ಶಾಸಕ ಶರಣು ಸಲಗರ ಹೇಳಿದರು.
ಬೇಲೂರದಲ್ಲಿ ಜೈ ಭವಾನಿ ಜಾತ್ರೆ ನಿಮಿತ್ತ ಗುರುವಾರ ಸಂಜೆ ಏರ್ಪಡಿಸಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮಸ್ಥರ ಶಕ್ತಿ, ಶ್ರಮ ನೋಡಿದರೆ ಬರೀ ಅಂಬಾರಿಯಲ್ಲ, ಹುಲಿಯ ಮೇಲೆ ಮೆರವಣಿಗೆ ಮಾಡುವಷ್ಟು ಶಕ್ತಿ ಕಾಣುತ್ತಿದೆ. ನಮ್ಮ ಭಾಗದಲ್ಲಿ ದೊಡ್ಡ ಜಾತ್ರೆ ಇದಾಗಿದ್ದು, ಇತಿಹಾಸ ಸೃಷ್ಟಿಸಿದೆ ಎಂದರು.
ತಾಯಂದಿರು ಮಕ್ಕಳಲ್ಲಿ ದೇಶ ಭಕ್ತಿ, ಸಂಸ್ಕೃತಿ ಬಿತ್ತಬೇಕು. ರಾಷ್ಟç ಮಟ್ಟದ ಮಹಾತ್ಮರ, ಹೋರಾಟಗಾರರ ಚರಿತ್ರೆ ಹೇಳಬೇಕು ಎಂದರು.
ಉತ್ಸವ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ ಪ್ರಾಸ್ತಾವಿಕ ಮಾತನಾಡಿ, ಗ್ರಾಮದಲ್ಲಿ ನಾವೆಲ್ಲರೂ ಒಂದಾಗಿರಬೇಕು. ನಮ್ಮ ಗ್ರಾಮದ ಸಂಸ್ಕೃತಿ ಇನ್ನೊಬ್ಬರಿಗೆ ಪ್ರೇರಣೆ ಆಗಲಿ ಎಂಬ ಉದ್ದೇಶದಿಂದ ಭವ್ಯ ಕಾರ್ಯಕ್ರಮ ಮಾಡುತ್ತಿದ್ದೇವೆ. ಅಂಬಾರಿ ಮೆರವಣಿಗೆಯಲ್ಲಿ ಭಾಗವಹಿಸಿ, ಇತಿಹಾಸ ಸೃಷ್ಟಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಧನರಾಜ ತಾಡಂಪಳ್ಳಿ ಮಾತನಾಡಿ, ಬೇಲೂರು ಗ್ರಾಮದ ಅಭಿವೃದ್ಧಿಗೆ ರಾಜ್ಯ ಸರ್ಕಾರದಿಂದ ಯೋಜನೆಗಳನ್ನು ತರಲು ಸಿದ್ಧ. ಜನರು ಅತ್ಯುತ್ತಮ ಕಾರ್ಯಕ್ಕೆ ಸದಾ ಸಾಥ್ ನೀಡಲಾಗುವುದು ಎಂದರು.
ಶ್ರೀ ಶಿವಕುಮಾರ ಸ್ವಾಮೀಜಿ, ಶ್ರೀ ದಾನೇಶ್ವರಿ ತಾಯಿ, ಕಲಬುರಗಿ ಮಹಾನಗರ ಪಾಲಿಕೆ ಅಧಿಕಾರಿ ಸಾವಿತ್ರಿ ಸಲಗರ, ಗ್ರಾಪಂ ಅಧ್ಯಕ್ಷೆ ಕರುಣಾಬಾಯಿ ಪರಪ್ಪ , ಪಿಎಸ್‌ಐ ನಾಗೇಂದ್ರ, ಶಶಿಕಾಂತ ದುರ್ಗೆ, ಅರ್ಜುನ ಕನಕ, ಶೇಷಪ್ಪ, ಬಸವರಾಜ ಮುರುಡೆ, ರಾಜೇಂದ್ರ ಚೌದ್ರಿ, ರಾಮಲಿಂಗ ಸಾಗಾವೆ, ಸಂಜು ಮೂಲಗೆ, ಸಂತೋಷ ಶೆಡೋಳೆ ಇತರರಿದ್ದರು. ಬಸವರಾಜ ಗುಂಗೆ ಸ್ವಾಗತಿಸಿ, ನಿರೂಪಣೆ ಮಾಡಿದರು. ಮಹೇಶ ಹಾಲಿಂಗೆ ವಂದಿಸಿದರು.