

ಕಾರವಾರ: ಚತುಷ್ಪಥ ಈ ಗ್ರಾಮಸ್ಥರಿಗೆ ಸಂಕಷ್ಟ ತಂದಿಟ್ಟಿದೆ. ಒಂದೇ ವಾರದ ಅಂತರದಲ್ಲಿ ಹೆದ್ದಾರಿಯಲ್ಲಿ ಎಂಟು ಅಪಘಾತಗಳು ಸಂಭವಿಸಿವೆ.!
ಅಂಕೋಲಾ ತಾಲೂಕಿನ ಅವರ್ಸಾದಲ್ಲಿ ಚತುಷ್ಪಥ ಸಂಚಾರಕ್ಕೆ ಮುಕ್ತವಾದ ನಂತರ ಅಪಘಾತಗಳ ಸಂಖ್ಯೆ ದ್ವಿಗುಣವಾಗಿದೆ.
ಹೆಚ್ಚಿನ ಮನೆ, ಅಂಗಡಿಗಳಿಗೆ ಹಾನಿಯಾಗಬಾರದು ಎಂಬ ಕಾರಣಕ್ಕೆ ಹಿಂದೆ ಕೆಲ ಪಟ್ಟಭದ್ರ ಹಿತಾಸಕ್ತಿಗಳ ಒತ್ತಾಯಕ್ಕೆ ಮಣಿದು ಹೆದ್ದಾರಿಯ ಅಗಲವನ್ನು 45 ಮೀ.ನಿಂದ 30 ಮೀ.ಗೆ ಇಳಿಸಲಾಯಿತು. ಮುಖ್ಯ ರಸ್ತೆ ಬಿಟ್ಟರೆ ಬೇರೆ ಸರ್ವೀಸ್ ರಸ್ತೆ ಇಲ್ಲ. ಹೆದ್ದಾರಿಯ ನಡುವೆ ಎರಡೂವರೆ ಅಡಿಯ ತಡೆಗೋಡೆ ನಿರ್ವಿುಸಲಾಗಿದೆ. ನಡು, ನಡುವೆ ಜನ ದಾಟಲು ಸಣ್ಣ ದಾರಿ ಬಿಡಲಾಗಿದೆ. ಅಲ್ಲಿ ಪಾದಾಚಾರಿಗಳು ನುಸುಳಿ ಬರುತ್ತಿದ್ದರೆ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆಯುವ ಪ್ರಸಂಗಗಳು ಹೆಚ್ಚು.
ಸುಮಾರು 4 ಸಾವಿರ ಜನಸಂಖ್ಯೆ ಇರುವ ಅವರ್ಸಾ ಕೇವಲ ಒಂದು ಗ್ರಾಪಂ ಕೇಂದ್ರವಲ್ಲ. ಸುತ್ತಲಿನ ನಾಲ್ಕಾರು ಗ್ರಾಮಗಳಿಗೆ ಕೇಂದ್ರ ಸ್ಥಾನವಾಗಿದೆ. ಎಲ್ಲ ಬಸ್ಗಳಿಗೂ ಇಲ್ಲಿ ನಿಲುಗಡೆ ಇರುವುದರಿಂದ ಸಮೀಪದ ಗ್ರಾಮಸ್ಥರೂ ಇಲ್ಲಿ ಬಂದು ಇಳಿಯುತ್ತಾರೆ. ಬಸ್ ಹತ್ತಲು ಬರುತ್ತಾರೆ. ಅಲ್ಲದೆ, ರಾಷ್ಟ್ರೀಕೃತ ಬ್ಯಾಂಕ್ಗಳು, ಅಂಚೆ ಕಚೇರಿ, ಆಸ್ಪತ್ರೆ, ದೂರವಾಣಿ ವಿನಿಮಯ ಕೇಂದ್ರ, ಗ್ರಾಮ ಚಾವಡಿ ಇಲ್ಲಿರುವುದರಿಂದ ವ್ಯವಹಾರಕ್ಕಾಗಿ ಆಗಮಿಸುವ ಜನರೂ ಸಾಕಷ್ಟಿದ್ದಾರೆ. ಪಿಯು ಕಾಲೇಜ್, ಹೈಸ್ಕೂಲ್ಗಳಿಗೆ ನೂರಾರು ಮಕ್ಕಳು ದಿನವೂ ಬಂದು ಹೋಗುತ್ತಾರೆ. ವಾರಕ್ಕೊಮ್ಮೆ ಸಂತೆ ನಡೆಯುವಾಗ ಸಾವಿರಾರು ಜನ ಸೇರುತ್ತಾರೆ. ಮೀನು ಮಾರುಕಟ್ಟೆಯಲ್ಲಿ ಪ್ರತಿ ದಿನ ನೂರಾರು ಜನ ವಹಿವಾಟು ನಡೆಸುತ್ತಾರೆ. ಒಟ್ಟಾರೆ ಸಾಕಷ್ಟು ಜನಸಂಚಾರ ಇರುವ ಸ್ಥಳ ಇದು. ಚತುಷ್ಪಥವಾದ ನಂತರ ವಾಹನಗಳು ಅತಿ ವೇಗದಲ್ಲಿ ಚಲಿಸುತ್ತವೆ. ಗ್ರಾಮಸ್ಥರು ಒಂದೆಡೆಯಿಂದ ಇನ್ನೊಂದೆಡೆಗೆ ಬರಲು ಹರಸಾಹಸ ಪಡಬೇಕಾಗಿದೆ.
ತಡೆಯಿಲ್ಲದ ರಸ್ತೆಯಲ್ಲಿ ವಾಹನಗಳು ಅತಿ ವೇಗದಲ್ಲಿ ಬರುತ್ತವೆ. ಪಾದಚಾರಿಗಳ ಓಡಾಟ ಹೆಚ್ಚಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಿದೆ. ಮಾರುಕಟ್ಟೆ ಮತ್ತು ಶಾಲಾ ಪ್ರದೇಶಗಳಲ್ಲಿ ರಸ್ತೆ ಹಂಪ್ ನಿರ್ವಿುಸಿಕೊಡಬೇಕು. ಮೇಲ್ಸೇತುವೆ ಅಥವಾ ಅಂಡರ್ ಪಾಸ್ ನಿರ್ವಣದ ವ್ಯವಸ್ಥೆ ಮಾಡಬೇಕು. | ಮಾರುತಿ ನಾಯ್ಕ ಅವರ್ಸಾ ಗ್ರಾಪಂ ಸದಸ್ಯ
ಅವರ್ಸಾದಲ್ಲಿ ಸೂಕ್ತ ಸುರಕ್ಷಾ ಕ್ರಮಗಳನ್ನು ಕೈಗೊಳ್ಳುವ ಕುರಿತು ಎನ್ಎಚ್ಎಐ ಮತ್ತು ಐಆರ್ಬಿ ಅಧಿಕಾರಿಗಳ ಜತೆ ರ್ಚಚಿಸಲಾಗುವುದು. | ಡಾ.ಹರೀಶ ಕುಮಾರ ಕೆ. , ಜಿಲ್ಲಾಧಿಕಾರಿ ಉತ್ತರ ಕನ್ನಡ