ಒಂದೇ ಕುಟುಂಬದ ಮೂವರು ಸೇರಿ ಐವರು ದುರ್ಮರಣ

2e4c3d62-4b31-44c8-93ac-d59e1d0a3627
Published on

ಬಾಗಲಕೋಟೆ: ಬೀಗ ಹಾಕಿದ ಮನೆಗಳು, ಮನೆಗಳ ಮುಂದೆ ಕಣ್ಣೀರು ಹಾಕುತ್ತ ವಿಽಗೆ ಹಿಡಿಶಾಪ ಹಾಕುತ್ತಿದ್ದ ಬಂಧುಗಳು, ನೆರೆಹೊರೆಯವರು. ಬೇಸಿಗೆ ಬಿರುಬಿಸಿಲಿಗೆ ಕಾದು ಕಣ್ಣಿದಂತಿರುವ ಆ ತಗಡಿನ ಶೆಡ್ಡುಗಳ ಎದುರು ಗುಂಪು ಗುಂಪಾಗಿ ಸೇರಿದ್ದ ಜನರು. ಕುಟುಂಬದ ಜನರಿಲ್ಲದೇ ಖಾಲಿ ಆಗಿರುವ ಮನೆಯಲ್ಲಿ ಮಾರಾಟ ಮಾಡಲು ತಯಾರಿಸಿ ಬುಟ್ಟಿ ತುಂಬಿದ್ದ ರೊಟ್ಟಿ.

ಇದು, ಶನಿವಾರ ಬೆಳಗಿನ ಜಾವ ಜೇವರ್ಗಿ ತಾಲೂಕಿನ ನಿಲೋಗಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಖಾಸಗಿ ಮಿನಿ ಬಸ್ ಡಿಕ್ಕಿ ಹೊಡೆದು ಸಾವನ್ನಪ್ಪಿರುವ ಐದು ಜನರ ವಾಸಿಸುತ್ತಿದ್ದ ಬಾಗಲಕೋಟೆ ನಗರದ ತೆಂಗಿನಮಠ ಓಣಿಯಲ್ಲಿ ಕಂಡು ಬಂದ ದೃಶ್ಯ.

ರಮ್ಜಾನ್ ಹಬ್ಬ ಮುಗಿಸಿ, ಕಲಬುರ್ಗಿಯ ಬಂದೇ ನವಾಜ್ ದರ್ಗಾ ದರ್ಶನ ಪಡೆಯಬೇಕೆಂದು ಓಣಿಯಲ್ಲಿನ ೩೨ ಜನರು ಸೇರಿಕೊಂಡು ಖಾಸಗಿ ವಾಹನ ಮಾಡಿಕೊಂಡು ಶುಕ್ರವಾರ ರಾತ್ರಿ ೧೧ ಗಂಟೆ ಬಳಿಕ ನಗರದಿಂದ ಹೊರಟಿದ್ದರು. ದರ್ಗಾಕ್ಕೆ ಹೊರಟಿದ್ದವರಿಗೆ ಬೀಳ್ಕೊಟ್ಟು ಮನೆಗೆ ಬಂದು ನಿದ್ರೆಗೆ ಜಾರಿದ್ದ ಸಂಬAಽಕರು ಹಾಗೂ ಓಣಿಯ ಜನರು ಬೆಳಗ್ಗೆ ಕಣ್ಣು ಬಿಡುವಷ್ಟರಲ್ಲಿ ರಾತ್ರಿ ಹೋದವರ ಪೈಕಿ ಐವರು ಇನ್ನಿಲ್ಲ ಎನ್ನುವ ಸುದ್ದಿ ದಿಗಿಲು ಬಡಿಸಿತ್ತು. ಹಾಗೆಯೇ ೧೧ ಜನರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಇದ್ದಾರೆ ಎನ್ನುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸಿದೆ.

ಸಾವನ್ನಪ್ಪಿರುವ ಐವರ ಪೈಕಿ ಮೈಬೂಬಿ ಕಾಕನೂರ(೫೩) ಮೈಬೂಬ ಕಾಕನೂರ(೩೦), ವಾಜೀದ್ ಕಾಕನೂರ(೨) ಇವರು ಒಂದೇ ಕುಟುಂಬದವರು. ತಾಯಿ, ಮಗ, ಮೊಮ್ಮಗ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಇವರ ಮನೆಯಲ್ಲಿ ಒಟ್ಟು ೬ ಜನರು ಇದ್ದು, ಎಲ್ಲರೂ ತೆರಳಿದ್ದರು. ಇದೀಗ ಮೂವರು ಸಾವನ್ನಪ್ಪಿದ್ದು, ಮೈಬೂಬ ಅವರ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ಉಳಿದುಕೊಂಡಿದ್ದಾರೆ. ಹಾಗೆಯೇ ಪ್ರಿಯಾಂಕಾ ಉತ್ತೂರ(೧೩) ಹಾಗೂ ಮಾಲನಭಿ ಗದ್ದನಕೇರಿ(೫೦) ಇತರಿಬ್ಬ ಮೃತ ದುರ್ದೈವಿಗಳು.

ಒಟ್ಟು ೩೨ ಜನರು ಒಟ್ಟಿಗೆ ತೆರಳಿದ್ದು, ಇವರಲ್ಲಿ ಐವರು ಸಾವನ್ನಪ್ಪಿದ್ದಾರೆ. ಅನಿಸಾ ಅತ್ತಾರ(೪೦), ಇರ್ಪಾನ್ ಹುನಗುಂದ(೨೬), ಅರ್ಮಾನ ಇಷಾದ(೯), ಅಸದ ಅಮೀನಸಾಬ(೧೧), ಅಂಬ್ರೀನ್ ಹುನಗುಂದ(೨೫), ಪ್ರಜ್ವಲ್ ಮಂಜುನಾಥ(೧೧), ಆಸ್ಮಾ ಮೈಬೂಬಸಾಬ(೨೫), ರೇಷ್ಮಾ ಇಸಾಕ್ ಕಾಕನೂರ(೨೮), ಮಹಿರಾ ಮೈಬೂಬ ಕಾಕನೂರ(೯), ಆಹಿಲ್ ಇಸಾಕ್ ಕಾಕನೂರ(೨), ಆದಿಲ್ ಇಸಾಕ ಕಾಕನೂರ(೪) ಗಾಯಗೊಂಡು ಮೆಟ್ರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ ಚಾಲಕ ಸೇರಿ ಇಬ್ಬರ ಪರಸ್ಥಿತಿ ಗಂಭೀರವಾಗಿದೆ.

ಬಾಗಲಕೋಟೆ ತೆಂಗಿನಮಠ ಓಣಿಯಲ್ಲಿ ಇರುವ ಎಲ್ಲರೂ ಬಹುತೇಕವಾಗಿ ಪುಟ್ಟ ಪುಟ್ಟ ತಗಡಿನ ಶೆಡ್‌ಗಳಲ್ಲಿ ವಾಸಿಸುತ್ತಿದ್ದಾರೆ. ನಿತ್ಯ ಕೂಲಿ ಕೆಲಸ ಮಾಡಿಕೊಂಡು ಅಂದಿನ ಕೂಲಿಯಲ್ಲಿ ಕುಟುಂಬ ನಡೆಸುವಂತವರು. ವರ್ಷ ಪೂರ್ತಿ ದುಡಿದು ದಣಿಯುವ ಇವರಿಗೆ ರಜ್ಮಾನ್ ಹಬ್ಬದ ಮುಗಿಸಿ ದರ್ಗಾಕ್ಕೆ ಹೋಗಿ ಬರುವ ಪ್ಲಾನ್ ಮಾಡಿಕೊಂಡು ಶುಕ್ರವಾರ ರಾತ್ರಿ ತೆರಳಿದ್ದರು. ಆದರೆ, ದರ್ಗಾ ತಲುಪುವ ಮುನ್ನವೇ ಮಧ್ಯದಲ್ಲಿ ಬಂದ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ.

ಮೃತ ಮೈಬೂಬಿ ಮನೆಯಲ್ಲಿ ರೊಟ್ಟಿ ಮಾಡಿ ಮಾರಾಟ ಮಾಡುತ್ತಿದ್ದರು. ನಿನ್ನೆಯೂ ಸಹ ಪುಟ್ಟಿಗಟ್ಟಲೇ ರೊಟ್ಟಿ ಮಾಡಿಟ್ಟು ರಾತ್ರಿ ಹೋಗಿದ್ದಾರೆ. ಅವರ ಪುತ್ರ ಮೈಬೂಬ ಕಾಕನೂರ ರಸ್ತೆ ಬದಿ ಎಗ್ಗರೈಸ್ ಅಂಗಡಿ ಇಟ್ಟಿದ್ದ. ಮಾಲನಭಿ ಗದ್ದನಕೇರಿ ಸಹ ಕೂಲಿ ಕೆಲಸ, ರೊಟ್ಟಿ ಮಾಡಿ ಮಾರುವ ಕೆಲಸ ಮಾಡುತ್ತಿದ್ದರು. ಪ್ರವಾಸಕ್ಕೆ ಹೋದ ಕುಟುಂಬಗಳೆಲ್ಲ ಹೀಗೆ ನಿತ್ಯ ಕೂಲಿ ಕೆಲಸ, ಬೇರೆಯವರ ಮನೆಯಲ್ಲಿ ಬಾಂಡೆ, ಬಟ್ಟೆ ತೊಳೆಯುವುದು, ಕಸ ಗೂಡಿಸುವ ಕೆಲಸ ಮಾಡುವವರೆ ಜಾಸ್ತಿ. ಇದೀಗ ಈ ಅಪಘಾತದಲ್ಲಿ ಮೃತ ಪಟ್ಟಿರುವ ಹಾಗೂ ಗಾಯಗೊಂಡು ಆಸ್ಪತ್ರೆ ಸೇರಿರುವ ಕುಟುಂಬಗಳ ಪರಿಸ್ಥಿತಿ ಅತ್ಯಂತ ಚಿಂತಾಜನಿಕವಾಗಿದೆ.

ನೂರಾರು ತಗಡಿನ ಶೆಡ್ಡುಗಳು ಇರುವ ಈ ಪ್ರದೇಶದಲ್ಲಿ ಇದೀಗ ಅಪಘಾತದ ಸುದ್ದಿ ದಿಕ್ಕು ತೋಚದಂತೆ ಮಾಡಿದೆ. ಅನೇಕರು ಮನೆಗಳಿಗೆ ಬೀಗ ಹಾಕಿಕೊಂಡು ಹೋಗಿದ್ದು, ಮನೆಯಲ್ಲಿ ಯಾರೂ ಇಲ್ಲ. ಹೀಗಾಗಿ ಆ ಪ್ರದೇಶದ ಜನರೆಲ್ಲ ಅವರ ಮನೆಗಳ ಮುಂದೆ ಕುಳಿತು ಕಣ್ಣೀರು ಹಾಕುತ್ತಿರುವ ದೃಶ್ಯ ಕರಳು ಹಿಂಡಿ ಬರುತ್ತಿದೆ.

ಬೀಳಗಿ ತಾಲೂಕಿನ ಅನಗವಾಡಿ ಗ್ರಾಮದ ವಾಹನವನ್ನು ಬಾಡಿಗೆ ಪಡೆದುಕೊಂಡು ದರ್ಗಾಕ್ಕೆ ಹೊರಟಿದ್ದರು. ಚಾಲಕ ಎರಡು ದಿನಗಳ ಹಿಂದಷ್ಟೆ ಶ್ರೀಶೈಲ ಜಾತ್ರೆಗೆ ಬಾಡಿಗೆ ಹೋಗಿ ಬಂದಿದ್ದ. ನಿನ್ನೆ ರಾತ್ರಿ ಮತ್ತೆ ಕಲಬುರ್ಗಿಗೆ ವಾಹನ ಬಾಡಿಗೆ ಹೋಗಿದ್ದ. ರಾತ್ರಿ ೧೧ ಗಂಟೆಗೆ ಬಾಗಲಕೋಟೆ ಬಿಟ್ಟಿದ್ದು, ಬೆಳಗಿನ ಜಾವ ೩ ರಿಂದ ೩.೩೦ರ ಸುಮಾರು ನಿಲೋಗಿ ಕ್ರಾಸ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net