ಒಂದು ದೇಶ ಒಂದು ಚುನಾವಣೆ ದೇಶಕ್ಕೆ ಮಾರಕ

FotoJet (1)
Published on

ಸಿಪಿಎಂ ಮುಖಂಡ ಡಾ. ಅನಿಲ್ ಕುಮಾರ್ ಕಳವಳ | ಗೌರಿಬಿದನೂರಿನಲ್ಲಿ ವಿಚಾರಸಂಕಿರಣ

ಗೌರಿಬಿದನೂರು : ದೇಶದ ಪ್ರಧಾನಿ ನರೇಂದ್ರ ಮೋದಿ ಸರ್ವಾಧಿಕಾರಿಯಂತೆ ಆಡಳಿತ ನಡೆಸುತ್ತಿದ್ದಾರೆ. ಅವರು ಹೇಳಿದಂತೆ ಒಂದು ದೇಶ ಒಂದು ಚುನಾವಣೆ ಜಾರಿಯಾದರೆ ದೇಶಕ್ಕೆ ಮಾರಕವಾಗಲಿದೆ ಎಂದು ಸಿಪಿಎಂ ಮುಖಂಡ ಡಾ.ಅನಿಲ್ ಕುಮಾರ್ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಸಿಪಿಎಂ ಪಕ್ಷದಿಂದ ಮಂಗಳವಾರ ಆಯೋಜಿಸಿದ್ದ ‘ಒಂದು ದೇಶ-ಒಂದು ಚುನಾವಣೆ - ದೇಶಕ್ಕೆ ಮಾರಕವೋ, ಪೂರಕವೋ’ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ಮತ್ತು ಒಕ್ಕೂಟದ ವ್ಯವಸ್ಥೆಯನ್ನು ದುಸ್ತರಗೊಳಿಸುತ್ತಿದೆ. ಸಾಮಾನ್ಯ ಜನರ ಮೂಲಸಮಸ್ಯೆಗಳನ್ನು ಬಗೆಹರಿಸದೆ ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಒಂದು ದೇಶ-ಒಂದು ಚುನಾವಣೆ ನಡೆಸಲು ಸಿದ್ಧತೆ ನಡೆಸುತ್ತಿದೆ. ಇದು ಜಾರಿಯಾದರೆ ದೇಶಕ್ಕೆ ಮಾರಕವಾಗಲಿದೆ ಎಂದರು.

140 ಕೋಟಿ ಜನಸಂಖ್ಯೆಯ ದೇಶದಲ್ಲಿ ಬಡತನ, ನಿರುದ್ಯೋಗ, ಸಾಮಾಜಿಕ ಭದ್ರತೆ, ಶಿಕ್ಷಣ ಸಮಸ್ಯೆಗಳು ತಾಂಡವವಾಡುತ್ತಿವೆ. ಇದನ್ನು ಸರಿಪಡಿಸದೆ ದೇಶಕ್ಕೆ ಆರ್ಥಿಕ ಹೊರೆಯಾಗುವ ಹಾಗೂ ಪರಿಣಾಮಕಾರಿ ಜಾರಿಗೆ ಸಾಧ್ಯವಿಲ್ಲದ ಒಂದು ದೇಶ ಒಂದು ಚುನಾವಣೆ ನಡೆಸುತ್ತೇವೆ ಎನ್ನುವುದು ಹಾಸ್ಯಾಸ್ಪದವಾಗಿದೆ. ಲೋಕಸಭೆ, ವಿಧಾನಸಭೆ, ಮಹಾಪಾಲಿಕೆ, ಜಿಪಂ, ತಾಪಂ, ನಗರಸಭೆ ಗ್ರಾಪಂ ಚುನಾವಣೆ ಒಂದೇ ಬಾರಿ ನಡೆಸಲು ಈ ದೇಶದಲ್ಲಿ ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.

ಪಕ್ಷದ ರಾಜ್ಯ ಕಾರ್ಯದರ್ಶಿ ಡಾ. ಕೆ. ಪ್ರಕಾಶ್ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಜನರಿಗೆ ಮೂಲಸೌಕರ್ಯ ನೀಡುವಲ್ಲಿ ಆಳುವ ಸರ್ಕಾರಗಳು ಹಳಿ ತಪ್ಪಿವೆ. ನಿಷ್ಪ್ರಯೋಜಕ ಯೋಜನೆಗಳ ಮೂಲಕ ದೇಶವನ್ನು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿವೆ. ಜನರಲ್ಲಿ ಚುನಾವಣೆ ಬಗ್ಗೆ ಸರಿಯಾದ ಮಾಹಿತಿಯಿಲ್ಲ. ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ನಮ್ಮ ದೇಶಕ್ಕೆ ಮಾರಕ ಎಂದು ಅಭಿಪ್ರಾಯಪಟ್ಟರು.

ಪಕ್ಷದ ಜಿಲ್ಲಾ ಕಾರ್ಯದರ್ಶಿ ಸಿದ್ದಗಂಗಪ್ಪ ಮಾತನಾಡಿ, ಮೋದಿ ಪ್ರಧಾನಿ ಆದಾಗಿನಿಂದಲೂ ಧರ್ಮ, ಜಾತಿ ಹೆಸರಲ್ಲಿ ದೇಶದಲ್ಲಿ ಅರಾಜಾಕತೆ ತಾಂಡವವಾಡುತ್ತಿದೆ. ಹಿಂದು ರಾಷ್ಟ್ರ ಮಾಡಲು ಹೊರಟಿರುವುದು ಹಾಸ್ಯಾಸ್ಪವಾಗಿದೆ ಎಂದರು.

ಉಪನ್ಯಾಸಕ ಟಿ.ನಂಜುಂಡಪ್ಪ, ದಲಿತ ಮುಖಂಡ ಸಿ.ಜಿ.ಗಂಗಪ್ಪ, ಮುದುಗೆರೆ ನಾಗರಾಜಪ್ಪ, ಜಿ.ಪಂ.ಮಾಜಿ ಉಪಾಧ್ಯಕ್ಷೆ ಸಾವಿತ್ರಮ್ಮ, ಮುನಿವೆಂಕಟಪ್ಪ, ಆನೂಡಿ ನಾಗರಾಜ್, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net