ಐವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Published on

ಶ್ರೀರಂಗಪಟ್ಟಣ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಅಪರಾಧಿಗಳಿಗೆ ಪಟ್ಟಣದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಕಠಿಣ ಜೀವಾವಧಿ ಶಿಕ್ಷೆಯೊಂದಿಗೆ ದಂಡ ವಿಧಿಸಿ ಆದೇಶ ನೀಡಿದೆ.

ತಾಲೂಕಿನ ಜಕ್ಕನಹಳ್ಳಿ ಗ್ರಾಮದ ಉದ್ಯಮಿ ಜೆ.ಎಂ.ಮಂಜುನಾಥ (ಎ1), ಗೆ 50 ಸಾವಿರ ರೂ.ದಂಡ ಹಾಗೂ ಕಠಿಣ ಜೀವಾವಧಿ ಶಿಕ್ಷೆ, ಗಣಂಗೂರಿನ ವಿನಯ್ (ಎ 2), ಮಂಡ್ಯ ತಾಲೂಕಿನ ತೂಬಿನಕೆರೆಯ ಶ್ರೀನಿವಾಸ (ಎ.3), ಗಣಂಗೂರಿನ ಚಂದ್ರಶೇಖರ (ಎ.4)ಹಾಗೂನಾಗಮಂಗಲ ತಾಲೂಕಿನ ಹೂವಿನಹಳ್ಳಿ ಅಭಿಷೇಕ್ (ಎ.5)ಗೆ ತಲಾ 10 ಸಾವಿರ ರೂ. ದಂಡ ಪಾವತಿ ಜತೆಗೆ ಕಠಿಣ ಜೀವಾವಧಿ ಶಿಕ್ಷೆಗೆ ವಿಧಿಸಿ ತೀರ್ಪು ಪ್ರಕಟಿಸಿದೆ.

ಘಟನೆ: ತಾಲೂಕಿನ ಗಣಂಗೂರು ಹೊರವಲಯದ ಶ್ರೀ ಯೋಗನರಸಿಂಹ ಸ್ವಾಮಿ ಕ್ರಷರ್ ವ್ಯವಹಾರ ನೋಡಿಕೊಳ್ಳ್ಳುತ್ತಿದ್ದ ಪೂರ್ಣಚಂದ್ರ 2ನೇ ಅಪರಾಧಿ ವಿನಯ್ ಜತೆಗೆ ವಿಚಾರವೊಂದರಲ್ಲಿ ಹಲ್ಲೆ ನಡೆಸಿದ್ದ. ಇದರಿಂದ ವಿನಯ್ ಆತನ ವಿರುದ್ಧ ದ್ವೇಷ ಹೊಂದಿದ್ದ. 1ನೇ ಅಪರಾಧಿ ಮಂಜುನಾಥ್ ಸಹ ಹಿಂದೆ ತನ್ನ ಮೇಲೆ ನಡೆದ ಕೊಲೆ ಪ್ರಯತ್ನದ ವಿಚಾರದಲ್ಲಿ ಪೂರ್ಣಚಂದ್ರನೇ ಕಾರಣ ಎಂದು ಆತನ ವಿರುದ್ಧ ದ್ವೇಷ ಹೊಂದಿದ್ದ. ಈ ಕಾರಣಕ್ಕೆ ಮಂಜುನಾಥ್ ಮತ್ತು ವಿನಯ್ ಆತನ ಸಂಗಡಿರಿಗೆ ಪೂರ್ಣಚಂದ್ರನನ್ನು ಕೊಲೆ ಮಾಡುವಂತೆ 5 ಲಕ್ಷ ರೂ.ಸುಪಾರಿ ನೀಡಿ 1ಲಕ್ಷ ರೂ. ಮುಂಗಡ ಹಣ ನೀಡಿದ್ದ.

ಅದರಂತೆ 2020ರ ಅ.2ರಂದು ರಾತ್ರಿ ಕ್ರಷರ್ ಘಟಕದ ರೂಂನಲ್ಲಿ ಊಟ ಮಾಡುತ್ತಿದ್ದ ಪೂರ್ಣಚಂದ್ರನ್ನು ಹಂತಕರು ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಹತ್ಯೆ ಮಾಡಿದ್ದರು. ಬಳಿಕ ಸಮೀಪದ ಸಿದ್ದಾಪುರ ಅರಣ್ಯ ಪ್ರದೇಶದಲ್ಲಿ ಕೊಲೆಗೆ ಬಳಸಿದ್ದ ಮಾರಕಾಸ್ತ್ರಗಳನ್ನು ಎಸೆದು ಪರಾರಿಯಾಗಿದ್ದರು. ಘಟನೆ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಸರ್ಕಲ್ ಇನ್‌ಸ್ಪೆಕ್ಟರ್ ಡಿ.ಯೋಗೇಶ್ ಹಾಗೂ ಪಿಎಸ್‌ಐ ಗಿರೀಶ್ ಎಲ್ಲರನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನಂತರದಲ್ಲಿ ತನಿಖೆ ಕೈಗೆತ್ತಿಕೊಂಡ ಇನ್‌ಸ್ಪೆಕ್ಟರ್ ಬಿ.ಜಿ.ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷೃಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರಾದ ಗೋಪಾಲಕೃಷ್ಣ ರೈ ವಿಚಾರಣೆ ನಡೆಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕಿ ಎಂ.ಕೆ.ಪ್ರಫುಲ್ಲಾ ವಾದ ಮಂಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net