

ಯು.ಎಸ್. ಪಾಟೀಲ ದಾಂಡೇಲಿ: ಇಲ್ಲಿನ ಐಪಿಎಂ ಕಾರ್ಖಾನೆಯ ಜಾಗವು ಅರಣ್ಯ ಇಲಾಖೆಯಿಂದ ಗುತ್ತಿಗೆ ಪಡೆದುಕೊಂಡದ್ದು. ಕಾರ್ಖಾನೆ ಮುಚ್ಚಿದ್ದರೂ, ಲೀಸ್ ಅವಧಿ ಮುಗಿದಿದ್ದರೂ ಕಾರ್ಖಾನೆ ಜಾಗದ ಒಡೆತನ ತನ್ನದಾಗಿದೆ ಎಂದು ವಿಸಾಂಜಿ ಗ್ರುಪ್ಸ್ ವಾದ ಮುಂದಿಟ್ಟಿದೆ.
ಅಂದಿನ ಮುಂಬೈ ಸರ್ಕಾರ ಮೊದಲನೇ ಅವಧಿಗೆ 13-1-1943ರಲ್ಲಿ 40 ವರ್ಷ ಅಂದರೆ 13-1-1983ರವರೆಗೆ ಲೀಸ್ ಮೇಲೆ (25-4-1946ರ ಕರಾರು ಪತ್ರದ ಪ್ರಕಾರ) ನಗರದ ಐಪಿಎಂ ಕಾರ್ಖಾನೆಗೆ 76 ಎಕರೆ 20 ಗುಂಟೆ ಜಾಗ ನೀಡಿತ್ತು. ತದನಂತರ ಕರ್ನಾಟಕ ಸರ್ಕಾರದಿಂದ 27-10-1983ರ ಆದೇಶದ ಪ್ರಕಾರ ಎರಡನೇ ಅವಧಿಗೆ ಲೀಸ್ ಅವಧಿಯನ್ನು 30-6-1984ರವರೆಗೆ ವಿಸ್ತರಿಸಲಾಯಿತು.
1992-93ರಲ್ಲಿ ನಗರಸಭೆಯು ಕಾರ್ಖಾನೆಯ ಲೀಸ್ ಅವಧಿ ಮುಗಿದ ಕಾರಣ ನವೀಕರಣಕ್ಕೆ ಸೂಚಿಸಿತು. ಆದರೆ, ಆಡಳಿತ ಮಂಡಳಿಯು ಕಾರ್ಖಾನೆಯ ಲೀಸ್ ನವೀಕರಣದ ಗೋಜಿಗೆ ಹೋಗಲಿಲ್ಲ. ನಂತರ, 1995ರಲ್ಲಿ ಕಾರ್ಖಾನೆ ಬಂದ್ ಆಯಿತು. ಮುಂದೆ ಆರಂಭವಾಗಲೇ ಇಲ್ಲ.
‘ಕಾರ್ಖಾನೆಗೆ ಗುತ್ತಿಗೆ ನೀಡಲಾದ ಜಾಗವು ಡಿಫಾರೆಸ್ಟೇಷನ್ (ಅರಣ್ಯೇತರ) ಆಗಿದೆ. ಹೀಗಾಗಿ, ಈ ಜಾಗ ತನಗೆ ಸೇರಬೇಕು’ ಎಂದು ವಿಸಾಂಜಿ ಗ್ರುಪ್ಸ್ ವಾದ ಮಂಡಿಸುತ್ತಿದೆ. ‘ಆದರೆ, ಈ ಜಾಗದ ಮೂಲ ಮಾಲೀಕತ್ವ ಅರಣ್ಯ ಇಲಾಖೆಯದ್ದಾಗಿದೆ. ಲೀಸ್ ಮುಗಿದ ಕಾರಣ ಮತ್ತು ಉತ್ಪಾದನೆ ನಿಲ್ಲಿಸಿದ ಕಾರಣ ಈಗ ಇದು ಕಾರ್ಖಾನೆಯ ಜಾಗವಲ್ಲ. ಈ ಜಾಗ ತನಗೆ ಮತ್ತೆ ಸೇರಬೇಕು’ ಎಂದು ಅರಣ್ಯ ಇಲಾಖೆ ಪ್ರತಿವಾದ ಮುಂದಿಡುತ್ತಿದೆ. ಈ ನಡುವೆ ನಗರಸಭೆ ಕೂಡ ಈ ಜಾಗ ತನಗೇ ದೊರೆಯಬೇಕು ಎಂಬ ಬೇಡಿಕೆ ಇಟ್ಟಿದೆ.
ಹೈಕೋರ್ಟ್ ಆದೇಶ: ಧಾರವಾಡದ ಹೈಕೋರ್ಟ್ನಲ್ಲಿ 2019ರ ಜನವರಿ 16ರಂದು ಈ ಜಾಗದ ಕುರಿತು ಅರಣ್ಯ ಇಲಾಖೆಯ ವಿನೋಲಿ ವಿಭಾಗದವರು ದಾವೆಯೊಂದನ್ನು ಹೂಡಿದರು. ಈ ಹಿನ್ನೆಲೆಯಲ್ಲಿ ಕಾರ್ಖಾನೆಯ 76 ಎಕರೆ 20 ಗುಂಟೆ ಜಾಗ ಮೂಲ ಮಾಲೀಕತ್ವ ಹೊಂದಿದವರಿಗೆ ಒಪ್ಪಿಸಬೇಕು ಎಂದು ಕೋರ್ಟ್ ಆದೇಶ ನೀಡಿದೆ.
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ವಿಸಾಂಜಿ ಗ್ರುಪ್ಸ್ನವರು ದಾಂಡೇಲಿಯ ಸಹಾಯಕ ಅರಣ್ಯ ಇಲಾಖೆ ಅಧಿಕಾರಿಗಳ ಕಚೇರಿಗೆ ಈ ಜಾಗ ತಮಗೆ ಸೇರಬೇಕೆಂದು ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿಯ ಮುಂದಿನ ತೀರ್ವನಕ್ಕಾಗಿ ಕಡತವನ್ನು ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಲಾಗಿದೆ. ಈ ಕಚೇರಿಯಿಂದ ಅಂತಿಮವಾಗಿ ಮೇಲ್ಮನವಿಯ ವಿಚಾರಣೆಯಾಗಿ ಇನ್ನೂ ಕೆಲವೇ ದಿನಗಳಲ್ಲಿ ನಿರ್ಣಯ ಹೊರಬೀಳಲಿದೆ ಎಂದು ಅರಣ್ಯ ಅಧಿಕಾರಿಗಳು ಹೇಳುತ್ತಾರೆ. ಈ ಜಾಗ ಅರಣ್ಯ ಇಲಾಖೆಗೆ ಸೇರಬೇಕೆಂಬ ಅಂತಿಮ ಆದೇಶ ಹೊರಬೀಳುವ ವಿಶ್ವಾಸವನ್ನೂ ಅವರು ವ್ಯಕ್ತಪಡಿಸುತ್ತಾರೆ.
ನಗರಸಭೆಗೂ ಆಸಕ್ತಿ: ದಾಂಡೇಲಿಯ ನಗರಸಭೆಯವರು ಕೂಡ ಐಪಿಎಂ ಜಾಗವನ್ನು ತಮಗೇ ಹಸ್ತಾಂತರಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಈ ಜಾಗವನ್ನು ಕೆ.ಜಿ.ಪಿ. ಮಾಡಿ, ಆರ್.ಟಿ.ಸಿ.ಯ ಖಾತೆಯಲ್ಲಿ ದುರಸ್ತಿಪಡಿಸಿ, ನಗರಸಭೆಗೆ ಹಸ್ತಾಂತರ ಮಾಡಬೇಕೆಂದು ಪ್ರಸ್ತಾವನೆಯನ್ನು 2019ರ ಜುಲೈ 15ರಂದು ಜೊಯಿಡಾ ತಹಸೀಲ್ದಾರರಿಗೆ ಮತ್ತು ಕಾರವಾರದ ಸಹಾಯಕ ಆಯುಕ್ತರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಜಾಗವು ಅರಣ್ಯ ಇಲಾಖೆ ತೆಕ್ಕೆಗೆ ಬಂದರೆ ಮಾತ್ರ, ಈ ಜಾಗವನ್ನು ತನಗೆ ನೀಡಬೇಕೆಂದು ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಪ್ರಕಾರ ಪ್ರಸ್ತಾಪ ಸಲ್ಲಿಸಲು ನಗರಸಭೆ ಅವಕಾಶ ಸಿಗಲಿದೆ.
ನಗರಸಭೆಗೂ ಆಸಕ್ತಿ: ದಾಂಡೇಲಿಯ ನಗರಸಭೆಯವರು ಕೂಡ ಐಪಿಎಂ ಜಾಗವನ್ನು ತಮಗೇ ಹಸ್ತಾಂತರಿಸಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ. ಈ ಜಾಗವನ್ನು ಕೆ.ಜಿ.ಪಿ. ಮಾಡಿ, ಆರ್.ಟಿ.ಸಿ.ಯ ಖಾತೆಯಲ್ಲಿ ದುರಸ್ತಿಪಡಿಸಿ, ನಗರಸಭೆಗೆ ಹಸ್ತಾಂತರ ಮಾಡಬೇಕೆಂದು ಪ್ರಸ್ತಾವನೆಯನ್ನು 2019ರ ಜುಲೈ 15ರಂದು ಜೊಯಿಡಾ ತಹಸೀಲ್ದಾರರಿಗೆ ಮತ್ತು ಕಾರವಾರದ ಸಹಾಯಕ ಆಯುಕ್ತರಿಗೆ ಕಳುಹಿಸಿಕೊಟ್ಟಿದ್ದಾರೆ. ಈ ಜಾಗವು ಅರಣ್ಯ ಇಲಾಖೆ ತೆಕ್ಕೆಗೆ ಬಂದರೆ ಮಾತ್ರ, ಈ ಜಾಗವನ್ನು ತನಗೆ ನೀಡಬೇಕೆಂದು ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಪ್ರಕಾರ ಪ್ರಸ್ತಾಪ ಸಲ್ಲಿಸಲು ನಗರಸಭೆ ಅವಕಾಶ ಸಿಗಲಿದೆ.
ಐಪಿಎಂ ಜಾಗ ನಗರಸಭೆಗೆ ಹಸ್ತಾಂತರಗೊಂಡರೆ ಈ ಪ್ರದೇಶವು ನಗರಸಭೆಯ ವ್ಯಾಪ್ತಿಗೆ ಬರುತ್ತದೆ. ಆಗ, ಕಾನೂನಾತ್ಮಕವಾಗಿ ನಗರಸಭೆಯ ಅನುದಾನದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದಾಗಿದೆ. | ಡಾ. ಸೈಯದ್ ಜಾಹೇದಲಿ ಪೌರಾಯುಕ್ತರು, ನಗರಸಭೆ,ದಾಂಡೇಲಿ
ಐಪಿಎಂ ಜಾಗದ ಕುರಿತು ಅರಣ್ಯ ಇಲಾಖೆಯವರು ಕೇಳಿದ ಮಾಹಿತಿಯನ್ನು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ನೀಡಲಾಗಿದೆ. ಅಂತಿಮ ನಿರ್ಧಾರ ಅವರಿಂದ ಹೊರಬೀಳಬೇಕಾಗಿದೆ. | ಸಂಜಯ ಕೆ. ತಹಸೀಲ್ದಾರ್, ಜೊಯಿಡಾ
ಐಪಿಎಂ ಕಾರ್ಖಾನೆ ಚಾಲನೆಯಲ್ಲಿ ಇರುವಾಗಲೇ ಅರಣ್ಯ ಇಲಾಖೆಯಿಂದ ಡಿಫಾರೆಸ್ಟ್ ಆಗಿರುವ ಕಾರಣ ಈ ಜಾಗೆಯು ಐಪಿಎಂ ಕಾರ್ಖಾನೆಯ ಆಡಳಿತ ಮಂಡಳಿಗೆ ಸೇರಬೇಕು. ಈ ಕುರಿತು ನಮ್ಮ ಬೇಡಿಕೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಂಡಿಸಿದ್ದೇವೆ. | ಶಫಿ ಕಾಂಟ್ರಾಂಕ್ಟರ್ ಪ್ರಧಾನ ವ್ಯವಸ್ಥಾಪಕರು, ಐಪಿಎಂ, ದಾಂಡೇಲಿ