ಸರಗೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐದು ವರ್ಷ ಅಧಿಕಾರ ಪೂರೈಸುತ್ತಾರೆ. ಇದರಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಶಾಸಕ ಅನಿಲ್ ಚಿಕ್ಕಮಾದು ಅಭಿಪ್ರಾಯಪಟ್ಟರು.
ತಾಲೂಕಿನ ಕಳಸೂರು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶನೈಶ್ಚರಸ್ವಾಮಿ ದೇವಸ್ಥಾನವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು. ಕ್ಷೇತ್ರದ ಹಲವು ರಸ್ತೆಗಳು ಹದಗೆಟ್ಟಿದ್ದು, ರಸ್ತೆ, ಶಾಲಾ-ಕಾಲೇಜು ಅಭಿವೃದ್ಧಿಗೆ ಮಾಜಿ ಶಾಸಕ ದಿ.ಚಿಕ್ಕಮಾದು, ಮಾಜಿ ಸಂಸದ ಆರ್.ಧ್ರುವನಾರಾಯಣ ಅವರು ತಾಲೂಕಿನ ಬಗ್ಗೆ ಹೆಚ್ಚು ಗಮನಕೊಟ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು.
ಕಳಸೂರು ಗ್ರಾಮಕ್ಕೆ ಹೆಚ್ಚಿನ ಅನುದಾನ ನೀಡಲಾಗಿದ್ದು, ರಸ್ತೆ ಅಭಿವೃದ್ಧಿ ಮಾಡಲಾಗಿದೆ. ಮಾರಮ್ಮನ ದೇವಸ್ಥಾನ ನಿರ್ಮಾಣಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆಗೂ ತಲುಪುವ ಕೆಲಸವನ್ನು ನಮ್ಮ ಸರ್ಕಾರ ಮಾಡಿಕೊಂಡು ಬರುತ್ತಿದೆ ಎಂದರು.
ಕುರುಬ ಸಂಘದ ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ ಮಾತನಾಡಿ, ಮಾರಮ್ಮನ ದೇವಸ್ಥಾನಕ್ಕೆ ಹೆಚ್ಚಿನ ಅನುದಾನ ನೀಡಿ ದೇವಸ್ಥಾನದ ಕಾಮಗಾರಿ ಪೂರ್ಣಗೊಳಿಸುವಂತೆ ಮನವಿ ಮಾಡಿದರಲ್ಲದೆ, ತೆಲುಗು ಶೆಟ್ಟರ ಭವನಕ್ಕೂ ಅನುದಾನ ನೀಡುವಂತೆ ಕೋರಿದರು.
ಎಚ್.ಡಿ.ಕೋಟೆ ಪುರಸಭೆ ಸದಸ್ಯ ಎಚ್.ಸಿ.ನರಸಿಂಹಮೂರ್ತಿ, ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ, ಕುರುಬ ಸಂಘದ ಜಿಲ್ಲಾಧ್ಯಕ್ಷ ಶಿವಪ್ಪ ಕೋಟೆ, ಕೋಟೆ ತಾಲೂಕು ಅಧ್ಯಕ್ಷ ಎಂ.ಬಿ.ಆನಂದ ಮೊಳೆಯೂರು, ಕೆ.ಬೀರೇಗೌಡ, ವೇಣು, ಪಂಚಾಯಿತಿ ಅಧ್ಯಕ್ಷ ಶೈಲೇಂದ್ರಕುಮಾರ್, ಶೇಷಾದ್ರಿ, ಶಿವಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಳಸೂರು ಬಸವರಾಜು, ಶಿವರಾಜು, ಕೆ.ಎಂ.ನಾಗರಾಜು, ಸೂರಿ, ಮಹದೇವಣ್ಣ, ಬೀರೇಗೌಡ, ಕಾಳಸ್ವಾಮಿ, ಸದಸ್ಯ ಮಂಜುನಾಥ, ಎಸ್ಸಿ ಎಸ್ಟಿ ಸಮಿತಿ ಸದಸ್ಯ ವೇಣುಗೋಪಾಲ್ ಪಂಚಾಯಿತಿ ಕಾರ್ಯದರ್ಶಿ ದೇವರಾಜು, ಕರಿಯಪ್ಪ, ಮಂಜು ಬೇಗೂರು, ವಿಜಯ್, ಇನ್ನೂ ಮುಖಂಡರು ಮತ್ತಿತರರು ಹಾಜರಿದ್ದರು.