

ಬಾಗಲಕೋಟೆ: ಐತಿಹಾಸಿಕ ಐಹೊಳೆಯನ್ನು ಸಮಗ್ರ ಅಭಿವೃದ್ದಿ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಹೇಳಿದರು.
ನವನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಗಲಕೋಟೆಯ ಶಾಸಕ ಎಚ್.ವೈ.ಮೇಟಿ ಅವರ ನೇತೃತ್ವದಲ್ಲಿ ಬೆಂಗಳೂರಿಗೆ ತೆರಳಿ ಪ್ರವಾಸೋದ್ಯಮ ಇಲಾಖೆಯ ಸಚಿವ ಎಚ್.ಕೆ.ಪಾಟೀಲ ಅವರನ್ನು ಭೇಟಿಯಾಗಿ ಐಹೊಳೆ ವಿಷಯವಾಗಿ ಚರ್ಚಿಸಿ, ಮನವಿ ಸಲ್ಲಿಸಲಾಗುವುದು. ಬಹು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಐಹೊಳೆ ಗ್ರಾಮದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಐಹೊಳೆ ಕ್ಷೇತ್ರ ಐತಿಹಾಸಿಕ ಕೇಂದ್ರವಾಗಿದ್ದು, ದೇವಾಲಯಗಳಿಗೆ ಹೊಂದಿ ಕೊಂಡಿರುವ ಮನೆಗಳನ್ನು ಸ್ಥಳಾಂತರಿಸಬೇಕು. ಅಂದಾಜು ೧೨೬ ಮನೆಗಳ ಇದ್ದು, ಅವುಗಳನ್ನು ಸ್ಥಳಾಂತರಿಸಿ ಬೇರೆಡೆಗೆ ನಿವೇಶನ ನೀಡಿ ಪರಿಹಾರ ನೀಡಬೇಕು. ಆರ್ಕಾಲಾಜಿಕಲ್ ಸರ್ವೆ ಆಫ್ ಇಂಡಿಯಾದವರು ಸರ್ವೆ ಮಾಡಿದ್ದು, ಮನೆಗಳ ಸ್ಥಳಾಂತರಕ್ಕೆ ೨೫ ಎಕರೆ ಜಮೀನು ಬೇಕಾಗುತ್ತದೆ. ಜಮೀನು ನೀಡಲು ಯುವರಾಜ ದೇಸಾಯಿ ಅವರು ಸದ್ಯದ ಮಾರುಕಟ್ಟೆ ಬೆಲೆ ಕೊಡಲು ಸಿದ್ದರಿದ್ದಾರೆ ಎಂದರು.
ದೇವಾಲಯಗಳನ್ನು ಹೊಂದಿಕೊಂಡಿರುವ ಮನೆ ಗಳಲ್ಲಿ ಕೆಲವರು ಪಡಸಾಲೆ, ದನದ ಕೊಟ್ಟಿಗೆ, ಅಡುಗೆ ಮನೆ ಮಾಡಿಕೊಂಡಿದ್ದು, ಇಲಾಖೆ ಯಿಂದ ೪೩ ಎಕರೆ ಜಮೀನನ್ನು ರಾಮಲಿಂಗನ ಗುಡಿನ ಹತ್ತಿರ ಕಂದಾಯ ಇಲಾಖೆಯಿಂದ ಹಸ್ತಾಂತರಿಸಬೇಕು. ಈ ಜಾಗೆಯಲ್ಲಿ ವಾಹನ ನಿಲುಗಡೆ ಸ್ಥಳ, ಸಮುದಾಯ ಭವನ, ಯಾತ್ರೆ ನಿವಾಸದಂತಹ ಮಾಡಲು ಅನುಕೂಲವಾಗುತ್ತದೆ. ೨೦೧೩ ರಲ್ಲಿ ಪ್ರವಾ ಸೋದ್ಯಮ ಸಚಿವರಾಗಿದ್ದ ಆರ್.ವಿ.ದೇಶಪಾಂಡೆ ಅವರು ದೇವಾಲಯ ಗಳಿಂದ ಮುಖ್ಯ ರಸ್ತೆ ವರೆಗೆ ಸಂಪರ್ಕ ರಸ್ತೆಯಾಗಿ ಅಂದಾಜು ೫೦ ಲಕ್ಷ ರೂ.ಮಂಜೂರು ಮಾಡಿದ್ದರು. ಅದರಲ್ಲಿ ೨೦ ಲಕ್ಷ ರೂ. ನಿರ್ಮಿತ ಕೇಂದ್ರ ಬಿಡುಗಡೆ ಮಾಡಲಾಗಿದೆ. ಆದರೆ ಇಲ್ಲಿವರೆಗೂ ಕೆಲಸವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಶಾಸಕ ಶಾಮನೂರ ಶಿವಶಂಕ್ರಪ್ಪನವರ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ನಂಜಯ್ಯನಮಠ ಅವರು, ನಮ್ಮ ಪಕ್ಷವು ಜಾತ್ಯಾತೀತ ಪಕ್ಷ ವಾಗಿದ್ದು ಎಲ್ಲ ಜಾತಿಯವರನ್ನು ಒಳಗೊಂಡಿರುವ ಪಕ್ಷವಾಗಿದೆ. ಸರ್ಕಾರವೂ ಸಹಿತ ಅದೇ ರೀತಿಯಾಗಿ ನಡೆದುಕೊಳ್ಳುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಾಗರಾಜ್ ಹದ್ಲಿ, ಎಸ್.ಎನ್.ರಾಂಪುರ, ಅಹ್ಮದ ಅಯುಬ್ ಖಾನ್, ರಾಜು ಸಂಗಮ ಇದ್ದರು.