ಐಡಿಬಿಐ ಬ್ಯಾಂಕ್ ಹಗರಣದಲ್ಲಿ ಮತ್ತೆ ನಾಲ್ವರ ಬಂಧನ

d741e454-4d03-44ab-a067-5259d8cafa5e
ಐಡಿಬಿಐ ಬ್ಯಾಂಕ್
Published on

ಬಾಗಲಕೋಟೆ: ಜಿಲ್ಲಾ ಪ್ರವಾಸೋದ್ಯಮ ಸಮಿತಿಯ ಐಡಿಬಿಐ ಬ್ಯಾಂಕ್‌ನಲ್ಲಿ ಇದ್ದ ೩ ಖಾತೆಗಳಿಂದ ೨.೪೭ ಕೋಟಿ ರೂ.ಗಳ ವರ್ಗಾವಣೆ ಮಾಡಿ ಹಣ ದೋಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೆ ನಾಲ್ವರನ್ನು ಬಂಧಿಸಲಾಗಿದೆ.

ಈ ಮೊದಲು ಬಂಧಿತನಾಗಿದ್ದ ಬ್ಯಾಂಕಿನ ಸೇಲ್ಸ್ ಎಕ್ಸಿಕ್ಯೂಟಿವ್ ಸೂರಜ್ ಸಗರ ಅವರ ಸಂಬಂಽಗಳಾದ ಮಲ್ಲಪ್ಪ ಸಗರ, ರವಿ ಸಗರ ಹಾಗೂ ಇಳಕಲ್ಲ ನಗರದ ಅರ್ಷದ ಮೊಮ್ಮದ ದೋಟಿಹಾಳ ಹಾಗೂ ಅವರ ಪತ್ನಿ ಮೀನಾ ದೋಟಿಹಾಳ ಅವರನ್ನು ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ನಾಲ್ವರು ಆರೋಪಿಗಳ ಖಾತೆಗೆ ಐಡಿಬಿಐ ಬ್ಯಾಂಕಿನಿಂದ ಪ್ರವಾಸೋದ್ಯಮ ಇಲಾಖೆಯ ಹಣವನ್ನು ವರ್ಗಾವಣೆ ಮಾಡಲಾಗಿತ್ತು.

ಐಡಿಬಿಐ ಬ್ಯಾಂಕ್ ನಲ್ಲಿ ನಡೆದಿರುವ ಈ ಹಗರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಬಂಧಿತರ ಸಂಖ್ಯೆ ೧೯ಕ್ಕೆ ಏರಿಕೆ ಆಗಿದೆ. ಇದರಲ್ಲಿ ೫ ಜನ ಬ್ಯಾಂಕಿನ ಸಿಬ್ಬಂದಿ ಇದ್ದರೆ, ಉಳಿದ ೧೪ ಜನರು ತಮ್ಮ ಖಾತೆಗಳಿಗೆ ಹಣವನ್ನು ಹಾಕಿಸಿಕೊಂಡವರು ಇದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕನಿಷ್ಠ ನಾಲ್ವರು ಬ್ಯಾಂಕ್ ಸಿಬ್ಬಂದಿ ಹಾಗೂ ಏಳೆಂಟು ಜನ ಹಣ ವರ್ಗಾವಣೆ ಮಾಡಿಸಿಕೊಂಡವರು ಇದ್ದಾರೆ ಎನ್ನಲಾಗಿದ್ದು, ಅವರ ಹುಡಕಾಟವನ್ನು ಪೊಲೀಸರು ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನೂ ನಾಲ್ಕು ಇಲಾಖೆಗಳ ಪ್ರಕರಣಗಳು ಇವೆ :
ಪ್ರವಾಸೋದ್ಯಮ ಇಲಾಖೆ ಜೊತೆಗೆ ಇನ್ನು ನಾಲ್ಕು ಇಲಾಖೆಗಳ ಹಣವನ್ನು ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ. ಜವಳಿ ಮತ್ತು ಕೈಮಗ್ಗ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಅಂದಾಜು ೪ ಕೋಟಿ ರೂ.ಗಳನ್ನು ಸಹ ವರ್ಗಾವಣೆ ಮಾಡಿಕೊಂಡಿದ್ದು, ಈ ಬಗ್ಗೆಯೂ ದೂರುಗಳು ದಾಖಲಾಗಿವೆ. ಸದ್ಯ ಪ್ರವಾಸೋದ್ಯಮ ಇಲಾಖೆ ಹಣಕ್ಕೆ ಪಂಗನಾಮ ಹಾಕಿರುವುದಕ್ಕೆ ಸಂಬಂಧಿಸಿದಂತೆ ಆರೋಪಿತರ ಬಂಧನ ನಡೆದಿದೆ. ಉಳಿದ ನಾಲ್ಕು ಇಲಾಖೆಗಳ ಹಣ ವಂಚಿಸಿರುವ ಪ್ರಕರಣದಲ್ಲಿ ಇನ್ನೆಷ್ಟು ಜನರು ಸಿಲುಕಿದ್ದಾರೆ ಎನ್ನುವುದು ಬೆಳಕಿಗೆ ಬರಬೇಕಿದೆ. ಐಟಿಬಿಐ ಬ್ಯಾಂಕಿನ ಸಿಬ್ಬಂದಿಯೇ ಶಾಮೀಲಾಗಿರುವ ಹಗರಣ ಇದಾಗಿದೆ. ಬಾಗಲಕೋಟೆ ಸಿಇಎನ್ ಠಾಣೆಯ ಪೊಲೀಸ್ ತಂಡ ಈ ತನಿಖೆ ಕೈಗೊಂಡಿದ್ದು, ಹಲವರು ತಲೆ ಮರೆಸಿಕೊಂಡಿದ್ದಾರೆ. ಅವರಿಗಾಗಿ ಶೋಧಕಾರ್ಯವನ್ನು ಚುರುಕುಗೊಳಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net