

ಬಾಗಲಕೋಟೆ: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಬಾಗಲಕೋಟೆ ಐಡಿಬಿಐ ಬ್ಯಾಂಕ್‌ನಲ್ಲಿ ನಡೆದಿದ್ದ ಹಣಕಾಸು ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಸಿಇಎನ್ ಪೊಲೀಸರು ಎರಡು ಇಲಾಖೆಗಳ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಲ್ಲದೇ ಬ್ಯಾಂಕ್ ನಿಂದ ಅಂದಾಜು ೪.೮೦ ಕೋಟಿ ರೂ. ಗಳನ್ನು ರಿಕವರಿ ಮಾಡಿದ್ದಾರೆ.
ಜಿಲ್ಲೆಯ ಪ್ರವಾಸೋದ್ಯಮ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ, ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಜವಳಿ ಮತ್ತು ಕೈಮಗ್ಗ ಇಲಾಖೆಗೆ ಸಂಬಂಧಿಸಿದಂತೆ ಐಡಿಬಿಐ ಬ್ಯಾಂಕ್ ಖಾತೆಗಳಿಂದ ಅಂದಾಜು ೬.೦೮ ಕೋಟಿ ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಹಣವನ್ನು ಲಪಟಾಯಿಸಲಾಗಿತ್ತು.
ಈ ಬಗ್ಗೆ ಮೊದಲು ಪ್ರವಾಸೋದ್ಯಮ ಇಲಾಖೆಯಿಂದ ಸಿಇಎನ್ ಠಾಣೆಗೆ ಪ್ರಕರಣ ದಾಖಲಾಗಿ, ತನಿಖೆ ಕೈಗೊಂಡ ಬಳಿಕ ಬರೀ ಅದೊಂದೆ ಇಲಾಖೆ ಮಾತ್ರವಲ್ಲದೇ ವಿವಿಧ ಇಲಾಖೆಗಳ ಹಣವನ್ನು ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿ ಹಣ ದೋಚಿರುವುದು ಬೆಳಕಿಗೆ ಬಂದಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರೆಗೂ ಬರೀ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಹಾಗೂ ಹಣ ವರ್ಗಾವಣೆ ಮಾಡಿಕೊಂಡಿದ್ದ ಖಾತೆದಾರರನ್ನು ಬಂಧಿಸಲಾಗಿತ್ತು. ಇದೀಗ ಬ್ಯಾಂಕ್ ಸಿಬ್ಬಂದಿ ಜೊತೆಗೆ ಹಣ ಯಾಮಾರಿಸಿರುವ ಘಟನೆಗೆ ಸಂಬಂಧಿಸಿದಂತೆ ಪ್ರವಾಸೋದ್ಯಮ ಹಾಗೂ ಹಿಂದುಳಿದ ವರ್ಗಗಳ ಇಲಾಖೆಯ ಇಬ್ಬರು ನೌಕರರನ್ನು ಪೊಲೀಸರು ಬಂಽಸಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ ಪ್ರಥಮ ದರ್ಜೆ ಸಹಾಯಕ ಸದ್ಯ ವಿಜಯಪುರ ಪ್ರವಾಸೋದ್ಯಮ ಇಲಾಖೆಯಲ್ಲಿ ಇರುವ ಶಿವಕುಮಾರ ಭಜಂತ್ರಿ ಹಾಗೂ ಬಾಗಲಕೋಟೆ ಬಿಸಿಎಂ ಇಲಾಖೆಯ ಎಸ್‌ಡಿಎ ಆಗಿರುವ ಉದಯಕುಮಾರ ಗುಣಯ್ಯನವರ ಅವರನ್ನು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಶಿವಕುಮಾರ ಅವರು ಜಿಲ್ಲಾಧಿಕಾರಿಗಳ ಪರವಾನಿಗೆ ಇಲ್ಲದೇ ೫೦ ಲಕ್ಷ ರೂ.ಗಳು ಹಾಗೂ ೫ ಲಕ್ಷ ರೂ.ಗಳ ಎರಡು ಚೆಕ್ ನೀಡಿರುವ ಆರೋಪ ಹೊಂದಿದ್ದಾರೆ. ಇನ್ನು ಉದಯಕುಮಾರ ಅವರ ಖಾತೆಗೆ ಬ್ಯಾಂಕ್ ನಿಂದ ೨೦ ಲಕ್ಷ ರೂ. ಹಣ ಜಮಾ ಆಗಿದ್ದು, ಈ ಪೈಕಿ ಪೊಲೀಸರು ೧೬.೧೦ ಲಕ್ಷ ರೂ.ಗಳನ್ನು ಈಗ ಜಪ್ತಿ ಮಾಡಿಕೊಂಡಿದ್ದಾರೆ.