ಏಳುಮಂದೆಮ್ಮ ವಿಗ್ರಹಗಳು ಪತ್ತೆ

15 HRS 02
Published on

ಹಿರೀಸಾವೆ: ಹೋಬಳಿಯ ಡಿ.ತುಮಕೂರು ಗ್ರಾಮದಲ್ಲಿ ಪಾಳು ಬಿದ್ದಿದ್ದ ಸ್ಥಳವನ್ನು ಅಗೆಯುವಾಗ ಪುರಾತನ ಕಾಲದ ಏಳುಮಂದೆಮ್ಮ ದೇವಿಯರ ವಿಗ್ರಹಗಳು ಪತ್ತೆಯಾಗಿವೆ.


ಸುಮಾರು 350 ವರ್ಷಗಳ ಹಿಂದೆಯೇ ಐತಿಹಾಸಿಕ ದೇವಾಲಯವೊಂದು ಮಣ್ಣಲ್ಲಿ ಹೂತು ಹೋಗಿದೆ ಎನ್ನಲಾಗುತ್ತಿದ್ದ ಸ್ಥಳದಲ್ಲಿ ಏಳು ದೇವತೆಗಳಿರುವ ಶಿಲಾ ವಿಗ್ರಹಗಳು ದೊರೆತಿವೆ. ಮಧ್ಯದಲ್ಲಿ ಒಬ್ಬ ದೇವತೆ ಇರುವ ಒಂದು ಶಿಲಾವಿಗ್ರಹ ಇದ್ದು ಅಕ್ಕಪಕ್ಕದಲ್ಲಿಯೇ ಎಡ ಹಾಗೂ ಬಲಭಾಗದಲ್ಲಿ ತಲಾ ಮೂವರಂತೆ ದೇವತೆಯರಿರುವ ಇನ್ನೆರಡು ವಿಗ್ರಹಗಳಿದ್ದು ಒಟ್ಟು ಏಳು ಮಂದಿ ದೇವತೆಯರಿದ್ದಾರೆ.


ಈ ಗ್ರಾಮದವರಿಗೆ ಏಳುಮಂದೆಮ್ಮ ಎಂಬ ದೇವಿಯರ ಹೆಸರು ಹಾಗೂ ಪಾಳು ಬಿದ್ದಿರುವ ಸ್ಥಳ ಮಾತ್ರ ತಿಳಿದಿತ್ತು. ಆದರೆ ದೇಗುಲ ಯಾವ ಶೈಲಿಯಲ್ಲಿ ಇತ್ತು ಹಾಗೂ ದೇವಿಯರ ವಿಗ್ರಹ ಹೇಗಿತ್ತು ಎಂಬುದರ ಬಗ್ಗೆ ತಿಳಿದಿಲ್ಲ ಎನ್ನಲಾಗಿದೆ. ದೇವತೆಯರ ಶಕ್ತಿ, ಮಹಿಮೆ, ಪ್ರಭಾವ ಹಾಗೂ ಹಬ್ಬ ಹರಿದಿನಗಳ ಆಚರಣೆ ನಡೆಯುತ್ತಿದ್ದ ಬಗ್ಗೆ ತಿಳಿದಿಲ್ಲ. ಆದರೆ ಏಳುಮಂದೆಮ್ಮ ದೇವತೆಯ ಒಕ್ಕಲಾದ ಅಬುಕನಹಳ್ಳಿ ಮನೆಯವರು ಎಂಬ ಕುಟುಂಬಕ್ಕೆ ಸೇರಿದ ಉಮೇಶ್ ಎಂಬವರು ಈ ದೇವತೆಯರನ್ನು ಇಂದಿಗೂ ಮನೆಯಲ್ಲಿ ಪೂಜಿಸುತ್ತಿದ್ದಾರೆ.


ಮನೆಯಲ್ಲಿಯೇ ಉದ್ಭವ: ಗ್ರಾಮದಲ್ಲಿ ಪಾಳು ಬಿದ್ದಿರುವ ಸ್ಥಳ ಏಳುಮಂದೆಮ್ಮ ದೇವತೆಯರ ಮೂಲಸ್ಥಾನ. ಆದರೆ ಅಬುಕನಹಳ್ಳಿ ಮನೆಯವರ ಪೈಕಿಗೆ ಸೇರಿದ ಅರ್ಚಕ ಉಮೇಶ್ ಅವರ ಮನೆಯ ಗೋಡೆಯಲ್ಲಿ ಹುತ್ತ ಉದ್ಭವವಾಗಿದ್ದು, ಸುಮಾರು 20 ವರ್ಷಗಳು ಕಳೆದಿವೆ. ಅಂದಿನಿಂದಲೂ ಇಲ್ಲಿ ಪೂಜಾ ಕೈಂಕರ್ಯಗಳು ದಿನನಿತ್ಯ ನಡೆಯುತ್ತಿದ್ದು ಭಕ್ತರು ಪಾಲ್ಗೊಳ್ಳುತ್ತಿದ್ದರು. ಭಕ್ತರು ಮನದಲ್ಲಿ ತಮ್ಮ ಕಷ್ಟಗಳನ್ನು ಕುರಿತು ದೇವಿಯಲ್ಲಿ ಪ್ರಾರ್ಥಿಸಿದರೆ ಹೂವಿನ ಪ್ರಸಾದವಾಗುವುದು ಅಚ್ಚರಿಯ ಸಂಗತಿ. ಕಷ್ಟ ಪರಿಹಾರವಾದ ಬಳಿಕ ಹರಕೆ ಒಪ್ಪಿಸಿರುವ ಬಗ್ಗೆ ಭಕ್ತರೇ ಹೇಳುತ್ತಾರೆ.


ದೇವಿ ಸಂಚಾರ: ಅಮಾವಾಸ್ಯೆ, ಹುಣ್ಣಿಮೆ ಹಾಗೂ ಪ್ರತಿ ಶುಕ್ರವಾರದಂದು ನಡುರಾತ್ರಿಯಲ್ಲಿ ಪಾಳು ಬಿದ್ದಿರುವ ದೇವಾಲಯದಿಂದ ಗ್ರಾಮ ಮತ್ತು ಹಳೇ ಗ್ರಾಮವಿದ್ದ ಸ್ಥಳದಲ್ಲಿ ಗೆಜ್ಜೆ ಶಬ್ದದೊಂದಿಗೆ ಯಾರೋ ನಡೆದಾಡಿದಂತೆ ಅನುಭವವಾಗುವ ಹಿನ್ನೆಲೆಯಲ್ಲಿ ದೇವಿ ಸಂಚರಿಸುತ್ತಾಳೆ ಎಂಬ ದೃಢವಾದ ನಂಬಿಕೆ ಇದೆ.


ಕುರುಹು: ಈಗಿನ ಡಿ.ತುಮಕೂರು ಹೊಸ ಗ್ರಾಮವಾಗಿದ್ದು ಇದಕ್ಕೂ ಮೊದಲು ಗ್ರಾಮದ ಕೆರೆಯಿಂದಾಚೆ ಹೊಸಹಳ್ಳಿಬೋರೆ ಎಂಬ ಹಳೆಯ ಊರಿದ್ದ ಬಗ್ಗೆ ದಾಖಲೆಗಳಿವೆ. ಅಲ್ಲಿಯೂ ಮತ್ತೊಂದು ದೇವಾಲಯವು ಮಣ್ಣಲ್ಲಿ ಹೂತು ಹೋಗಿದೆ. ಇಲ್ಲಿ ದೇವಾಲಯದ ದಿಣ್ಣೆ, ದೀಪದ ಕಲ್ಲು, ಗರುಡಗಂಬ ಇನ್ನೂ ಹಲವು ಕುರುಹುಗಳಿವೆ. ಆ ಕಾಲದಲ್ಲಿ ಏಳುಮಂದೆಯಮ್ಮ ದೇವಿ ಈ ಊರ ಗ್ರಾಮದೇವತೆ ಇರಬಹುದು ಎಂಬುದು ಇತಿಹಾಸಕಾರರ ಅಭಿಪ್ರಾಯ.


ದೇಗುಲದ ಜೀರ್ಣೋದ್ಧಾರ: ಇಲ್ಲಿ ಏಳುಮಂದೆಮ್ಮ ದೇವತೆಯರ ವಿಗ್ರಹ ಸಿಗುತಿದ್ದಂತೆಯೇ ಇತ್ತೀಚೆಗೆ ಮತಿಘಟ್ಟದ ಪಂಡಿತ್ ವಸಂತಚಾರ್ ಶಾಸ್ತ್ರಿ ಅವರ ಮುಂದಾಳತ್ವದಲ್ಲಿ ಗ್ರಾಮಸ್ಥರೆಲ್ಲ ಸೇರಿ ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿ ಪೂಜಾ ಕೈಂಕರ್ಯಗಳನ್ನು ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net