ಏಳು ಶಿಕ್ಷಕರಿಗೆ ಕರೊನಾ ಪಾಸಿಟಿವ್

carona logo (2)
Published on

ಸಿದ್ದಾಪುರ: ತಾಲೂಕಿನ ಆರು ಪ್ರಾಥಮಿಕ ಶಿಕ್ಷಕರು ಹಾಗೂ ಒಂದು ಪ್ರೌಢಶಾಲೆ ಶಿಕ್ಷಕಿಗೆ ಕರೊನಾ ದೃಢಪಟ್ಟಿದ್ದು, ಪಾಲಕರು ಹಾಗೂ ಮಕ್ಕಳು ಆತಂಕಕ್ಕೀಡಾಗಿದ್ದಾರೆ.

ಜನವರಿ 1ರಿಂದ ಶಾಲೆಗಳು ಆರಂಭಗೊಂಡಿದ್ದು, ಮಕ್ಕಳು ಉತ್ಸಾಹದಿಂದ ಶಾಲೆಗೆ ಹೋಗಿ ಬರುತ್ತಿದ್ದರು. ಆದರೆ, ಈಗ ಶಿಕ್ಷಕರಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಬೇಕೋ ಅಥವಾ ಬೇಡವೋ ಎಂಬ ಆತಂಕದಲ್ಲಿದ್ದಾರೆ.

ತಾಲೂಕಿನ 6 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ಪಟ್ಟಣದ ಖಾಸಗಿ ಪ್ರೌಢಶಾಲೆಯ ಶಿಕ್ಷಕಿಯೊಬ್ಬರಿಗೆ ಶಾಲೆ ಆರಂಭಿಸುವ ಪೂರ್ವದಲ್ಲಿಯೇ ನಡೆಸಲಾದ ಕರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಕಂಡುಬಂದಿದೆ. ಸದ್ಯ ಆ ಶಿಕ್ಷಕರನ್ನು ಶಾಲಾ ಕರ್ತವ್ಯಕ್ಕೆ ನಿಯೋಜಿಸದೆ ಚಿಕಿತ್ಸೆ ಪಡೆದುಕೊಳ್ಳಲು ಶಿಕ್ಷಣ ಇಲಾಖೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಶಾಲಾ ಆರಂಭದ ಪೂರ್ವದಲ್ಲಿ ತಾಲೂಕಿನ ಎಲ್ಲ 762 ಶಿಕ್ಷಕರಿಗೆ ಕರೊನಾ ಪರೀಕ್ಷೆ ನಡೆಸಲಾಗಿದೆ. ಅದರ ಫಲಿತಾಂಶ ಬಂದಿರುವುದು ಶಾಲೆ ಆರಂಭಗೊಂಡ ಮೇಲೆ ಆದ್ದರಿಂದ ಶಿಕ್ಷಕರು ಕರ್ತವ್ಯದ ಮೇಲೆ ಶಾಲೆಗಳಿಗೆ ತೆರಳಿದ್ದರು. ಆ ನಂತರದಲ್ಲಿ ಪಾಸಿಟಿವ್ ಕುರಿತು ಮಾಹಿತಿ ಬಂದಿರುವುದರಿಂದ ಅಂತಹ ಶಿಕ್ಷಕರನ್ನು ಶಾಲೆಯಿಂದ ವಾಪಸ್ ಕರೆಸಿಕೊಂಡಿದ್ದಾರೆಂದು ತಿಳಿದುಬಂದಿದೆ. ಆದರೆ, ಈ ಕುರಿತಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಜ. 1ರ ಪೂರ್ವದಲ್ಲಿಯೇ ಪಾಸಿಟಿವ್ ಕಂಡುಬಂದಿರುವ ಶಿಕ್ಷಕರು ಶಾಲೆಗೆ ಹೋಗಿಲ್ಲ ಎನ್ನುತ್ತಿದ್ದಾರೆ.

ಚುನಾವಣಾ ಕಾರ್ಯದಲ್ಲಿ ಭಾಗಿ: ಡಿ. 27ರಂದು ಗ್ರಾಪಂ ಚುನಾವಣಾ ಕರ್ತವ್ಯದಲ್ಲಿ ಹಾಗೂ ಡಿ. 30ರಂದು ನಡೆದ ಮತ ಎಣಿಕೆಯಲ್ಲಿ ಶಿಕ್ಷಕರು ಪಾಲ್ಗೊಂಡಿರುವುದರಿಂದ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ತಾಲೂಕಿನ 7 ಶಿಕ್ಷಕರಲ್ಲಿ ಪಾಸಿಟಿವ್ ಕಂಡು ಬಂದಿರುವ ಕುರಿತು ಶಾಲಾ ಆರಂಭದ ಪೂರ್ವದಲ್ಲಿಯೇ ಮಾಹಿತಿ ದೊರೆತಿದ್ದರಿಂದ ಅಂತಹ ಶಿಕ್ಷಕರಿಗೆ ಶಾಲೆಗೆ ಹೋಗದಿರಲು ಸೂಚಿಸಲಾಗಿತ್ತು. ಆದ್ದರಿಂದ ಯಾರೂ ಆತಂಕಪಡುವ ಅಗತ್ಯ ಇಲ್ಲ. ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ ಮಕ್ಕಳೊಂದಿಗೆ ಪರಸ್ಪರ ಅಂತರ ಸೇರಿ ಕರೊನಾ ನಿಯಮಾವಳಿ ಪಾಲಿಸಲು ಸೂಚಿಸಲಾಗಿದೆ. | ಸದಾನಂದ ಎಸ್.ಸ್ವಾಮಿ ಬಿಇಒ ಸಿದ್ದಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net