

ಹನೂರು: ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದರ ಜತೆಗೆ ಏಡ್ಸ್ ಬಗ್ಗೆ ಅಗತ್ಯ ಮುಂಜಾಗ್ರತೆ ವಹಿಸಬೇಕು ಎಂದು ಸ್ನೇಹ ಜ್ಯೋತಿ ಮಹಿಳಾ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪಾಟೀಲ್ ತಿಳಿಸಿದರು.
ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿ ಸೋಮವಾರ ಚಾಮರಾಜನಗರ ಸ್ನೇಹ ಜ್ಯೋತಿ ಮಹಿಳಾ ಸಂಘ, ರಾಜ್ಯ ಏಡ್ಸ್ ಪ್ರಿವೆನ್‌ಸನ್ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ನಿಯಂತ್ರಣ ಹಾಗೂ ಪ್ರತಿಬಂಧಕ ಘಟಕ ಸಹಯೋಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಹಿಂದೆ ದೇಶದಲ್ಲಿ ಏಡ್ಸ್ ಸೋಂಕಿತರ ಪ್ರಮಾಣ ಹೆಚ್ಚಾಗಿತ್ತು. ಸರ್ಕಾರ ಅನುಷ್ಠಾನಗೊಳಿಸಿದ ಕಾರ್ಯಕ್ರಮಗಳಿಂದ ಸೋಂಕಿತರ ಪ್ರಮಾಣ ಕಡಿಮೆಯಾಗಿದೆ. ಆದರೂ ಪ್ರಮಾಣ ಇನ್ನು ತಗ್ಗಬೇಕಿದ್ದು, ಜಿಲ್ಲೆಯನ್ನು ಏಡ್ಸ್ ಮುಕ್ತವಾಗಿಸಬೇಕಿದೆ ಎಂದರು.
ಸಮಾಜದಲ್ಲಿ ಏಡ್ಸ್ ಸೋಂಕಿಗೆ ತುತ್ತಾದವರನ್ನು ಅವಮಾನಿಸದೆ ಗೌರವದಿಂದ ಕಾಣಬೇಕಿದೆ. ಈ ದಿಸೆಯಲ್ಲಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕು. ಇನ್ನು ವಿಶ್ವ ಏಡ್ಸ್ ದಿನಾಚರಣೆಯ ಈ ವರ್ಷದ ಘೋಷವಾಕ್ಯ ಸರಿಯಾದ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯೋಣ, ನನ್ನ ಆರೋಗ್ಯ ನನ್ನ ಹಕ್ಕು ಎಂಬುದಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕು. ಇದರಿಂದ ಉತ್ತಮ ಜೀವನ ರೂಪಿಸಿಕೊಳ್ಳಲು ಸಾಧ್ಯ ಎಂದು ತಿಳಿಸಿದರು.
ಮಂಡ್ಯದ ನಿತ್ಯ ಸ್ನೇಹಿ ಕಲಾ ತಂಡದಿಂದ ಬೀದಿ ನಾಟಕ ಪ್ರದರ್ಶಿಸಲಾಯಿತು. ಆಪ್ತ ಸಮಾಲೋಚಕ ಅಭಿಲಾಷ್, ಎಸ್‌ಜೆಎಂಎಸ್‌ನ ಸುಮಿತ್ರಾ, ನಾಗರತ್ನಾ, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.