

ಸವಣೂರ: ನಾನ್ ಗೆಜೆಟೆಡ್ ಹುದ್ದೆಗಳಿಗೆ ಏಕರೂಪ ನೇಮಕಾತಿ ನೀತಿ ಜಾರಿಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ಜಯ ಕರ್ನಾಟಕ ಸಂಘಟನೆ ವತಿಯಿಂದ ತಹಸೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನ್ನವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಕಡ್ಡಾಯವಾಗಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯಬೇಕಾದಲ್ಲಿ ಪ್ರಾದೇಶಿಕ ಭಾಷೆಯನ್ನು ಐಚ್ಛಿಕವಾಗಿ ಓದಿರುವ ಕನ್ನಡಿಗರಿಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳು ಉತ್ತೀರ್ಣರಾಗುವುದು ಕಷ್ಟವಾಗಲಿದೆ.
ಕೇಂದ್ರ ಸರ್ಕಾರದ ಹೊಸ ನೀತಿಯಿಂದ ಹೊರ ರಾಜ್ಯದ ಅಧಿಕಾರಿಗಳು ರಾಜ್ಯದಲ್ಲಿ ನೇಮಕಗೊಂಡಲ್ಲಿ ಅಧಿಕಾರಿಗಳಿಗೆ ಕನ್ನಡ ಭಾಷೆ, ಸಂಸ್ಕೃತಿ, ಸಂಪ್ರದಾಯ, ಸಮುದಾಯಗಳ ಹಿನ್ನೆಲೆ, ಪ್ರಾದೇಶಿಕತೆ ಅರಿವಿನ ಕೊರತೆ ಉಂಟಾಗಲಿದೆ.
ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ರಾಜ್ಯದ ಗ್ರಾಮೀಣ ಭಾಗದ ವಿದ್ಯಾವಂತ ಯುವ ಜನ ನಿರುದ್ಯೋಗದಿಂದ ಗುಳೆ ಹೋಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ನೇಮಕಾತಿ ನೀತಿ ನಿರುದ್ಯೋಗಿಗಳಿಗೆ ಸಾವಿನ ಶಾಪವಾಗಲಿದೆ.
ಹೊಸ ನೀತಿಯಿಂದ ಉಂಟಾಗುವ ಪ್ರಮಾದವನ್ನು ಕೇಂದ್ರ ಸರ್ಕಾರಕ್ಕೆ ವಿವರಿಸಿ ಕನ್ನಡ, ಕನ್ನಡಿಗರ ಧ್ವನಿಯಾಗಿ ಈ ನೀತಿಯನ್ನು ಕೈಬಿಡಲು ಒತ್ತಾಯಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಸಂಘಟನೆ ಕಾರ್ಯದರ್ಶಿ ರಮೇಶ ಆನವಟ್ಟಿ, ಜಿಲ್ಲಾಧ್ಯಕ್ಷ ಸುಭಾಸ ಬೆಂಗಳೂರ, ತಾಲೂಕು ಅಧ್ಯಕ್ಷ ಅಬ್ದುಲ್ವುುನಾಫ್ ಗೌಡಗೇರಿ, ಪದಾಧಿಕಾರಿಗಳಾದ ಫಕೀರೇಶ ಹರಿಜನ, ಜಗದೀಶ ಹಾಲಗಿ, ಅಮೀನಸಾಬ್ ಹವಾಲ್ದಾರ್ ಹಾಗೂ ಇತರರು ಇದ್ದರು.