ಏಕಕಾಲಕ್ಕೆ 100 ಸಹೋದರಿ ಸಂಜೀವಿನಿ ಕ್ಯಾಂಟೀನ್‍ಗೆ ಚಾಲನೆ

bkt-26-3
Published on

ಬಾಗಲಕೋಟೆ:  ಬಾಗಲಕೋಟೆ ಜಿಲ್ಲಾ ಪಂಚಾಯತ ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಏಕ ಕಾಲದಲ್ಲಿ ಒಟ್ಟು 100 ಸಹೋದರಿ ಸಂಜೀವಿನಿ ಕ್ಯಾಂಟೀನ್‍ಗಳಿಗೆ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ರವಿವಾರ ಚಾಲನೆ ನೀಡಿದರು.

ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಸಹೋದರಿ ಸಂಜೀವಿನಿ ಕ್ಯಾಂಟೀನ್‍ಗೆ ಚಾಲನೆ ನೀಡಿ ಮಾತನಾಡಿದ ಅವರು ಏಕ ಕಾಲದಲ್ಲಿ ಜಿಲ್ಲೆಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ 100 ಸಂಜೀವಿನಿ ಕ್ಯಾಂಟಿನ್ ಪ್ರಾರಂಭಿಸಿರುವುದು ರಾಜ್ಯದಲ್ಲಿಯೇ ಪ್ರಥಮ ಎಂದರು. ಮಹಿಳೆಯರಿಗೆ ಸ್ವಾವಲಂಭಿ ಜೀವನ ನಡೆಸಲು ಕ್ಯಾಂಟಿನ್ ಸಹಕಾರಿಯಾಗಲಿದ್ದು, ಇತರೆ ಮಹಿಳಾ ಸಂಘದವರು ಸ್ವ-ಉದ್ಯೋಗ ಕೈಗೊಳ್ಳಲು ಮುಂದೆ ಬರಬೇಕೆಂದು ತಿಳಿಸಿದರು.

ಎನ್.ಆರ್.ಎಲ್.ಎಂ ಯೋಜನೆಯಡಿ ಮಹಿಳಾ ಸ್ವ-ಸಹಾಯ ಸಂಘಗಳೇ ನಿರ್ವಹಿಸುತ್ತಿರುವ ಉತ್ತಮ ಗುಣಮಟ್ಟದ ಆಹಾರ ಹಾಗೂ ಕೈಗೆಟಕುವ ದರದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಮುಧೋಳ ಹಾಗೂ ಜಮಖಂಡಿ ತಾಲೂಕಿನಲ್ಲಿ 22.40 ಲಕ್ಷ ರೂ.ಗಳಲ್ಲಿ 2 ಅಕ್ಕ ಕೆಫೆ ತೆರೆಯುತ್ತಿರುವುದು ಸಹ ಹೆಮ್ಮೆಯ ವಿಷಯವಾಗಿದೆ ಎಂದರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ ಮಾತನಾಡಿ ಎನ್.ಆರ್.ಎಲ್.ಎಂ ಯೋಜನೆಯಡಿ ಸಮುದಾಯ ಬಂಡವಾಳ ನಿಧಿ ಮೂಲಕ ಸಹೋದರಿ ಸಂಜೀವಿನ ಕ್ಯಾಂಟಿನ್ ಪ್ರಾರಂಭಿಸಲು ಪ್ರೋತ್ಸಾಹಿಸಲಾಗುತ್ತಿದೆ. ಜಿಲ್ಲೆಯ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕ್ಯಾಂಟಿನ್ ತೆರೆಯಲಾಗಿದೆ. ಬಾದಾಮಿ ತಾಲೂಕಿನಲ್ಲಿ 12, ಬಾಗಲಕೋಟೆ ತಾಲೂಕಿನಲ್ಲಿ 15, ಬೀಳಗಿ ತಾಲೂಕಿನಲ್ಲಿ 12, ಗುಳೇದಗಡ್ಡ ತಾಲೂಕಿನಲ್ಲಿ 8, ಹುನಗುಂದ ತಾಲೂಕಿನಲ್ಲಿ 12, ಇಲಕಲ್ಲ ತಾಲೂಕಿನಲ್ಲಿ 10, ಜಮಖಂಡಿ ತಾಲೂಕಿನಲ್ಲಿ 14, ಮುಧೋಳ ತಾಲೂಕಿನಲ್ಲಿ 14 ಹಾಗೂ ರಬಕವಿ-ಬನಹಟ್ಟಿ ತಾಲೂಕಿನಲ್ಲಿ 7 ಕ್ಯಾಂಟಿನ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ಆಹಾರೋತ್ಪನ್ನ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಪ್ರತಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ರೂ. 40 ಸಾವಿರ ರೂ.ಗಳಂತೆ ಇಲ್ಲಿಯವರೆಗೆ 450 ಫಲಾನುಭವಿಗಳಿಗೆ ರೂ. 180.00 ಲಕ್ಷಗಳ ಬೀಜಧನ (ಪಿ.ಎಂ.ಎಫ್.ಎಂ.ಇ) ಆಹಾರೋತ್ಪನ್ನ ಚಟುವಟಿಕೆಗಳಿಗಾಗಿ ಸಾಲ ನೀಡಲಾಗಿದೆ. ಅಲ್ಲದೇ ಜಿಲ್ಲೆಯ 800 ಗ್ರಾಮೀಣ ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿಯನ್ನು ನೀಡಿ ಸ್ವ-ಉದ್ಯೋಗ ಚಟುವಟಿಕೆಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವಾಯ್.ಮೇಟಿ, ವಿಧಾನ ಪರಿಷತ್ ಸದಸ್ಯರಾದ ಪಿ.ಎಚ್.ಪೂಜಾರ, ಹನಮಂತ ನಿರಾಣಿ, ನಗರಸಭೆ ಅಧ್ಯಕ್ಷೆ ಸವಿತಾ ಲೆಂಕನ್ನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ರುಥ್ರೇನ್ ಪಿ, ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ಸಹಾಯಕ ಯೋಜನಾಧಿಕಾರಿ ಭೀಮಪ್ಪ ತಳವಾರ ಸೇರಿದಂತೆ ಇತರರು ಉಪಸ್ಥಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net