

ಬಾಗಲಕೋಟೆ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಸ್ವಾಮೀಜಿ ಹಾಗೂ ಟ್ರಸ್ಟಿಗಳ ನಡುವೆ ಉಂಟಾಗಿರುವ ಗೊಂದಲ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಅದು ದಿನೇ ದಿನೇ ತಾರಕಕ್ಕೆ ಹೋಗಿ, ಆರೋಪ, ಪ್ರತ್ಯಾರೋಪಗಳು ಪ್ರತಿಧ್ವನಿಸುತ್ತಿವೆ.
ಇದೀಗ ಸ್ವಾಮೀಜಿ ನಿಲುವಿನ ಬಗ್ಗೆ ಟ್ರಸ್ಟಿಗಳು ಏ. ೨೨ ರಂದು ಹುಬ್ಬಳ್ಳಿಯಲ್ಲಿ ಮಹತ್ವದ ಸಭೆ ಕರೆದಿರುವ ಬೆನ್ನಲ್ಲೆ ಅದಕ್ಕೂ ಎರಡು ದಿನ ಮೊದಲೇ ಕೂಡಲಸಂಗಮದ ಶ್ರೀಪೀಠದಲ್ಲಿ ಸಮಾಜದ ರಾಜ್ಯಮಟ್ಟದ ಭಕ್ತರ ಸಭೆಯಲ್ಲಿ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಕರೆದಿದ್ದಾರೆ. ಆ ಮೂಲಕ ಟ್ರಸ್ಟಿಗಳಿಗೆ ಶೆಡ್ಡು ಹೊಡೆದರಾ ಸ್ವಾಮೀಜಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈ ಬಗ್ಗೆ ಸೋಮವಾರ ಬಾಗಲಕೋಟೆಯಲ್ಲಿ ಸಮಾಜದ ಮುಖಂಡರ ಜೊತೆ ಸುದ್ದಿಗೋಷ್ಠಿ ನಡೆಸಿದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ಏ. ೨೦ ರಂದು ಮಧ್ಯಾಹ್ನ ೩ ಗಂಟೆಗೆ ಕೂಡಲಸಂಗಮ ಪಂಚಾಮಸಾಲಿ ಪೀಠದಲ್ಲೆ ರಾಜ್ಯಮಟ್ಟದ ಸಮಾಜದ ಭಕ್ತರ ಸಭೆ ಕರೆದಿದ್ದೇನೆ. ಸಭೆಗೆ ಪಕ್ಷಾತೀತವಾಗಿ ಹಾಲಿ, ಮಾಜಿ ಶಾಸಕರು, ಸಚಿವರು, ಸಂಸದರು, ಇತರೆ ಕ್ಷೇತ್ರಗಳ ಜನಪ್ರತಿನಿಽಗಳು ಒಳಗೊಂಡು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಆವ್ಹಾನಿಸುತ್ತಿದ್ದೇನೆ. ಅಂದು ಎಲ್ಲರೂ ಬರಬೇಕು. ಈ ಉಂಟಾಗಿರುವ ಗೊಂದಲ ಹಾಗೂ ೨ಎ ಮೀಸಲಾತಿ ಹೋರಾಟದ ಮುಂದಿನ ರೂಪರೇಷಗಳ ಬಗ್ಗೆ ಚರ್ಚಿಸಿ ಭಕ್ತರ ಸಲಹೆಯಂತೆ ನಿರ್ಧಾರ ಕೈಗೊಳ್ಳುತ್ತೇವೆ. ಇಲ್ಲಿ ಯಾರಿಗೂ ಪ್ರತ್ಯೇಕವಾಗಿ ಕರೆಯದೇ ಮಾಧ್ಯಮಗಳ ಮೂಲಕವೇ ಆಹ್ವಾನ ನೀಡುತ್ತೇವೆ ಎಂದು ತಮ್ಮ ವಿರುದ್ಧ ಟೀಕೆ ಟಿಪ್ಪಣಿ ಮಾಡುತ್ತಿರುವ ಟ್ರಸ್ಟಿಗಳಿಗೆ ಪ್ರತ್ಯೇಕ ಆವ್ಹಾನ ಕೊಡುವುದಿಲ್ಲ ಎಂದು ಪರೋಕ್ಷವಾಗಿ ಹೇಳಿದ ಶ್ರೀಗಳು, ಅಂದಿನ ಸಭೆಯಲ್ಲಿ ತಮ್ಮ ವಿರುದ್ಧದ ಎಲ್ಲ ಟೀಕೆ, ಟಿಪ್ಪಣಿಗಳಿಗೆ ಉತ್ತರ ಕೊಡುವುದಾಗಿ ತಿಳಿಸಿದರು.
ನಾನು ಈ ವರೆಗೂ ಯಾವುದೇ ಒಬ್ಬ ವ್ಯಕ್ತಿಯ ಪರವಾಗಿ ಹೋರಾಟ ಮಾಡಿಲ್ಲ. ಸಮಾಜದ ಪರವಾಗಿ ಹೋರಾಟ ಮಾಡಿದ್ದೇನೆ. ನಮ್ಮ ಸಮಾಜಕ್ಕೆ ಹಾಗೂ ೨ಎ ಮೀಸಲಾತಿ ಹೋರಾಟಕ್ಕೆ ಯಾರೆಲ್ಲ ಶ್ರಮಿಸಿದ್ದಾರೋ ಅಂತವರಿಗೆ ಅನ್ಯಾಯವಾದಾಗ ಅವರ ಪರ ಧ್ವನಿ ಎತ್ತಿದ್ದೇನೆ ಎಂದು ಯತ್ನಾಳ್ ಪರವಾಗಿ ನಿಂತಿರುವ ತಮ್ಮ ನಿಲುವು ಸಮರ್ಥಿಸಿಕೊಂಡರು.
ನಮ್ಮದು ದೊಡ್ಡ ಸಮಾಜ, ಹೀಗಾಗಿ ಕೆಲ ಗೊಂದಲಗಳು ಉಂಟಾಗುವುದು ಸಹಜ. ನಮ್ಮಲ್ಲಿ ಕೆಲವರು ಅಜ್ಞಾನ, ಆಸೆ-ಆಮಿಶಗಳಿಗೆ ಒಳಪಟ್ಟು ತಮ್ಮ ವಿರುದ್ಧ ಟೀಕೆ, ಟಿಪ್ಪಣಿ ಮಾಡುತ್ತಿದ್ದಾರೆ. ನಮ್ಮ ಶ್ರೀ ಪೀಠ ಇರುವುದು ಯಾರನ್ನೋ ಶಾಸಕರನ್ನು, ಮಂತ್ರಿ ಮಾಡಲು ಕಟ್ಟಿಲ್ಲ. ಸಮಾಜದ ಕಣ್ಣೀರು ಒರೆಸಲು ಕಟ್ಟಿದ್ದು. ಆ ಕೆಲಸವನ್ನು ನಾನು ಪ್ರಮಾಣಿಕವಾಗಿ ಮಾಡುತ್ತಾ ಬಂದಿದ್ದೇನೆ.
ನಮ್ಮ ಸಮಾಜದವರು ಸಾವಿರಾರು ಮಠಗಳಿಗೆ ನಡೆದುಕೊಂಡಿದ್ದಾರೆ. ಆ ಎಲ್ಲ ಮಠಗಳು, ಮಠಾಽÃಶರು ವಜ್ರ ವೈಡೂರ್ಯ, ಬೆಳ್ಳಿ ಬಂಗಾರ ಒಳಗೊಂಡು ಧಾರ್ಮಿಕವಾಗಿ ಪರಂಪರೆ ಬೆಳೆಸಿದ್ದಾರೆ. ಅವೆಲ್ಲವೂ ಬೇಡ ಎಂದು ನಾನು ಪಂಚಮಸಾಲಿ ಪೀಠ ಮಾಡಿದ್ದು. ಭೌತಿಕತೆಗೆ ನಾನು ಮಹತ್ವ ಕೊಟ್ಟಿಲ್ಲ. ಬಸವಣ್ಣನ ತತ್ವ ಸಿದ್ದಾಂತದ ಮೇಲೆ ಶ್ರೀಪೀಠ ಸಾಗಿದೆ. ಪೀಠ ಎಂದರೆ ನಾಲ್ಕು ಇಟ್ಟಿಗಳನ್ನು ಸಿಮಿಂಟ್‌ನಿAದ ಕಟ್ಟಿದ್ದಲ್ಲ. ಮನಸ್ಸು ಕಟ್ಟುವ ಕೆಲಸ ಮಾಡಿದ್ದೇನೆ. ಎಂದೂ ಸಹ ಹಣ ಗಳಿಸುವ ಪ್ರಯತ್ನ ಮಾಡಿಲ್ಲ. ಜನರನ್ನು ಗಳಿಸುವ ಪ್ರಯತ್ನ ಮಾಡಿದ್ದೇನೆ. ಮಠ ಕಟ್ಟದೇ ಸಮಾಜ ಕಟ್ಟಿದ್ದೇನೆ. ನನ್ನ ಸಮಾಜವೇ ನನಗೆ ಶ್ರೀ ಪೀಠ, ಭಕ್ತರ ಹೃದಯವೇ ನನಗೆ ಸಿಂಹಾಸನ. ಅವರಿಗಾಗಿ ದಿನದ ೨೪ ಗಂಟೆ ಕೆಲಸ ಮಾಡುತ್ತ ಬಂದಿದ್ದೇನೆ ಎಂದರು.
ಅಣ್ಣ ಬಸವಣ್ಣನ ವಿದ್ಯಾಕ್ಷೇತ್ರ ಆರಂಭವಾಗಿದ್ದು ಕೂಡಲಸಂಗಮದಲ್ಲಿ ಅವರ ಲಿಂಗೈಕ್ಯರಾಗಿದ್ದು ಸಹ ಅದೇ ಕೂಡಲಸಂಗಮದಲ್ಲಿ. ಹಾಗೆಯೇ ನಾನು ಪಂಚಮಸಾಲಿ ಪೀಠ ಆರಂಭಿಸಿದ್ದ ಕೂಡಲಸಂಗಮದ ಬಯಲಿನಲ್ಲಿ, ಅಗತ್ಯತೆ ಬಿದ್ದರೆ ನನ್ನ ಅಂತ್ಯವೂ ಸಹ ಅದೇ ಕೂಡಲಸಂಗಮದಲ್ಲಿ ಆಗಲಿ ಎಂದು ಪೀಠದಿಂದ ತೆಗೆಯುವ ಪ್ರಯತ್ನ ನಡೆದಿವೆಯಾ ಎನ್ನುವ ಪ್ರಶ್ನೆಗೆ ಶ್ರೀಗಳು ಮಾರ್ಮಿಕವಾಗಿ ಉತ್ತರಿಸಿದರು.
ಬಸವ ತತ್ವ, ಸಿದ್ದಾಂತದ ಮೇಲೆ ಆರಂಭವಾದ ಪಂಚಮಸಾಲಿ ಪೀಠದ ಶ್ರೀಗಳು ಇತ್ತೀಚಿಗೆ ಬಸವ ತತ್ವ ಕೈಬಿಟ್ಟು ತಾವೇ ವಿರೋಽಸಿಕೊಂಡು ಬಂದಿದ್ದ ತತ್ವ ಸಿದ್ದಾಂತದ ಜೊತೆಗೆ ರಾಜೀ ಆಗುತ್ತಿದ್ದಾರೆ ಎನ್ನುವ ಆರೋಪಗಳಿಗೂ ಪ್ರತಿಕ್ರಿಯಿಸಿದ ಶ್ರೀಗಳು, ನಾನು ಸೈದ್ದಾಂತಿಕವಾಗಿ ರಾಜೀ ಆಗಿಲ್ಲ. ಆದರೆ, ಮೀಸಲಾತಿ ಹೋರಾಟದ ಆರಂಭಕ್ಕೂ ಮುನ್ನ ನಮ್ಮ ಸಮಾಜ ಬೇರೆಯೇ ಇತ್ತು. ಮೀಸಲಾತಿ ಹೋರಾಟ ಆರಂಭವಾದ ಬಳಿಕ ನಮಗೆ ಕೋಟ್ಯಂತರ ಭಕ್ತರು ಬೆಂಬಲಿಸಿದರು. ಅದರಲ್ಲಿ ಸಾವಿರಾರು ಧಾಮಿರ್ಕ ಆಚರಣೆ ಹಾಗೂ ಪರಂಪರೆ ಹೊಂದಿದವರು ಇದ್ದಾರೆ. ಅವರ ಭಾವನೆಗಳಿಗೆ ಸ್ಪಂದಿಸುವ ಉದ್ಧೇಶದಿಂದ ಅವುಗಳನ್ನು ಗೌರವಿಸುತ್ತಿದ್ದೇನೆ. ಧಾರ್ಮಿಕ ಆಚರಣೆ ಬೇರೆ, ಸೈದ್ಧಾಂತಿಕ ಭಿನ್ನಾಭಿಪ್ರಾಯ ಬೇರೆ. ಕಾಲಕ್ಕ ತಕ್ಕಂತೆ, ಅಗತ್ಯಕ್ಕೆ ತಕ್ಕಂತೆ, ಭಕ್ತರ ಭಾವನೆ ಗೌರವಿಸಬೇಕಾಗುತ್ತದೆ. ಆ ಕೆಲಸವನ್ನು ನಾನು ಇತ್ತೀಚಿನ ದಿನಗಳಲ್ಲಿ ಮಾಡಿದ್ದೇನೆ ಎಂದು ಕುಂಭಮೇಳ ಹಾಗೂ ಅಯೋದ್ಯ ರಾಮಮಂದಿರ ಲೋಕಾರ್ಪಣೆಗೆ ತೆರಳಿದ್ದನ್ನು ಸಮರ್ಥಿಸಿಕೊಂಡರು.
ಬಸವ ಜಯಮೃತ್ಯುಂಜಯ ಸ್ವಾಮೀಜಿ ಅವರು ಮುಂದೆ ಲೋಕಸಭೆ ಚುನಾವಣೆಗೆ ಸ್ಪಽðಸಲು ತಯಾರಿ ನಡೆಸಿದ್ದಾರೆಂದು ಟೀಕಿಸಿದ್ದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶ್ರೀಗಳು, ಗುರುಗಳು ಭಕ್ತರನ್ನು ಜನಪ್ರತಿನಿಽಗಳನ್ನಾಗಿ ಮಾಡುತ್ತಾರೆ ಹೊರತು, ಗುರುಗಳೇ ಜನಪ್ರತಿನಿಽ ಆಗಲ್ಲ. ಕರ್ನಾಟಕದಲ್ಲಿ ಯಾವ ಗುರುಗಳು ಇದನ್ನು ಮಾಡಿಲ್ಲ, ಮಾಡುವುದಿಲ್ಲ. ಅವರು ಯಾವ ತಪ್ಪು ಅರ್ಥ ಮಾಡಿಕೊಂಡು ಹೇಳಿದ್ದಾರೋ ಗೊತ್ತಿಲ್ಲ. ಏ. ೨೦ರ ಸಭೆಯಲ್ಲಿ ಇವೆಲ್ಲಕ್ಕೂ ಉತ್ತರ ಕೊಡುವೆ ಎಂದು ಕಾಶಪ್ಪನವರಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಶ್ರೀಗಳು ಹೆಚ್ಚಾಗಿ ರಾಜಕಾರಣಿಗಳ ಜೊತೆಗೆ ಆಪ್ತತೆ ಹೊಂದಿರುವುದೇ ಇವತ್ತು ತಮ್ಮ ಮೇಲೆ ಬರುತ್ತಿರುವ ಟೀಕೆ, ಟಿಪ್ಪಣಿ, ಸಮಾಜದಲ್ಲಿ ಉಂಟಾಗುತ್ತಿರುವ ಗೊಂದಲಗಳಿಗೆ ಕಾರಣ ಎನ್ನುವ ಪ್ರಶ್ನೆಗೆ, ನಮಗೆ ಯುವಕರು, ತಾಯಿಂದಿರುವ, ರೈತರ ಶ್ರಮ ಬೇಕು. ಹಾಗೆಯೇ ಮಠಗಳಿಗೆ ರಾಜಕಾರಣಿಗಳ ಬೆಂಬಲವೂ ಬೇಕಾಗುತ್ತದೆ ಎಂದರು.