ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಸಿದ್ಧತೆ

23SIRSI1
Published on

ಕಾರವಾರ/ಶಿರಸಿ: ಜೂನ್ ಕೊನೆಯ ವಾರದಲ್ಲಿ ಆರಂಭವಾಗಲಿರುವ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಉತ್ತರ ಕನ್ನಡದ ಎರಡೂ ಶೈಕ್ಷಣಿಕ ಜಿಲ್ಲೆಗಳಲ್ಲಿ ಈಗಿನಿಂದಲೇ ಸಿದ್ಧತೆ ನಡೆದಿದೆ. ವಿದ್ಯಾರ್ಥಿಗಳನ್ನು ಕೋವಿಡ್- 19ನಿಂದ ರಕ್ಷಿಸಲು ಬೇಕಾದ ಎಲ್ಲ ವ್ಯವಸ್ಥೆ ಮಾಡಲಾಗುತ್ತಿದೆ.

ಕಾರವಾರ ಶೈಕ್ಷಣಿಕ ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು 38 ಪರೀಕ್ಷಾ ಕೇಂದ್ರಗಳಿದ್ದು, 9,580 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯ 6 ತಾಲೂಕುಗಳಿಂದ ಒಟ್ಟು 10,300 ವಿದ್ಯಾರ್ಥಿಗಳಿದ್ದು, 34 ಕೇಂದ್ರಗಳನ್ನು ಸಿದ್ಧ ಮಾಡಲಾಗುತ್ತಿದೆ.

ವಿಶೇಷ ಕೊಠಡಿ: ಪರಸ್ಪರ ಅಂತರ ಕಾಯ್ದುಕೊಂಡು ಒಂದು ಡೆಸ್ಕ್​ಗೆ ಒಬ್ಬ ವಿದ್ಯಾರ್ಥಿಯನ್ನು ಮಾತ್ರ ಕೂಡ್ರಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಒಂದು ಕೊಠಡಿಯಲ್ಲಿ 24 ವಿದ್ಯಾರ್ಥಿಗಳನ್ನು ಕೂಡ್ರಿಸಲು ಈ ಹಿಂದೆ ನಿರ್ಣಯಿಸಲಾಗಿತ್ತು. ಈಗ ಪರಸ್ಪರ ಅಂತರದ ದೃಷ್ಟಿಯಿಂದ 18 ರಿಂದ 20 ವಿದ್ಯಾರ್ಥಿಗಳನ್ನು ಮಾತ್ರ ಕೂರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಪರೀಕ್ಷೆಗೆ ಬರುವ ಎಲ್ಲ ವಿದ್ಯಾರ್ಥಿಗಳನ್ನು ಥರ್ಮಲ್ ಸ್ಕ್ಯಾನರ್ ಮೂಲಕ ತಪಾಸಣೆ ನಡೆಸಲಾಗುವುದು. ಜ್ವರ ಅಥವಾ ಯಾವುದೇ ಕರೊನಾ ಲಕ್ಷಣವಿದ್ದಲ್ಲಿ ಅವರಿಗೆ ಪ್ರತ್ಯೇಕವಾಗಿ ಪರೀಕ್ಷೆ ಬರೆಯುವಂತೆ ವ್ಯವಸ್ಥೆ ಮಾಡುವ ಸಲುವಾಗಿ ಪ್ರತಿ ಕೇಂದ್ರದಲ್ಲೂ ಒಂದು ಕೊಠಡಿಯನ್ನು ಮೀಸಲಿಡಲಾಗುವುದು. ಪ್ರತಿ ಕೇಂದ್ರಕ್ಕೆ ಒಬ್ಬ ಆರೋಗ್ಯ ಸಿಬ್ಬಂದಿ ನೇಮಿಸುವ ಬಗ್ಗೆ ಆರೋಗ್ಯ ಇಲಾಖೆಗೆ ಮನವಿ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿನೀರು, ಕೈ ತೊಳೆಯುವ ವ್ಯವಸ್ಥೆಯನ್ನು ಎಲ್ಲ ಕೇಂದ್ರಗಳಲ್ಲೂ ಕಲ್ಪಿಸಲಾಗುವುದು ಎಂದು ಕಾರವಾರ ಡಿಡಿಪಿಐ ಹರೀಶ ಗಾಂವಕರ್ ತಿಳಿಸಿದ್ದಾರೆ.

ದಾನಿಗಳಿಂದ ಮಾಸ್ಕ್: ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಸ್ಯಾನಿಟೈಸರ್ ಕಡ್ಡಾಯವಾಗಿ ಇಡಬೇಕಾಗಿದೆ. ಈಗಾಗಲೇ ಕರ್ನಾಟಕ ಎಸ್​ಎಸ್​ಎಲ್​ಸಿ ಪರೀಕ್ಷಾ ಮಂಡಳಿಯಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಸ್ಯಾನಿಟೈಸರ್ ಸರಬರಾಜು ಮಾಡಲು ತೀರ್ವನಿಸಿದೆ. ಮಾಸ್ಕ್​ಗಳನ್ನು ದಾನಿಗಳಿಂದ ಸಂಗ್ರಹಿಸುವಂತೆ ಇಲಾಖೆ ಸೂಚಿಸಿದೆ. ಎರಡೂ ಶೈಕ್ಷಣಿಕ ಜಿಲ್ಲೆ ಸೇರಿ ಸುಮಾರು 40 ಸಾವಿರಕ್ಕೂ ಅಧಿಕ ಮಾಸ್ಕ್ ಬೇಕು ಎಂದು ಅಂದಾಜಿಲಸಾಗಿದೆ. ಸ್ಕೌಟ್ ಮತ್ತು ಗೈಡ್ಸ್,ಹಳಿಯಾಳದ ದೇಶಪಾಂಡೆ ಟ್ರಸ್ಟ್ ಈಗಾಗಲೇ ಮಾಸ್ಕ್ ವಿತರಿಸುವ ಭರವಸೆ ನೀಡಿದೆ. ಸ್ಥಳೀಯವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಇನ್ನಷ್ಟು ಮಾಸ್ಕ್ ಸಂಗ್ರಹಿಸುವ ಜವಾಬ್ದಾರಿ ನೀಡಲಾಗಿದೆ.

ಪ್ರತಿ ವಿದ್ಯಾರ್ಥಿಗೆ ಫೋನ್: ಹಸಾಸ್ಟೆಲ್ ಹಾಗೂ ವಸತಿ ಶಾಲೆಗಳನ್ನು ಕ್ವಾರಂಟೈನ್ ಕೇಂದ್ರಗಳನ್ನಾಗಿ ಮಾಡಲಾಗಿದೆ. ಅಲ್ಲಿನ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಹಾಗೂ ತಮ್ಮ ಊರುಗಳಿಗೆ ತೆರಳಿದ ವಿದ್ಯಾರ್ಥಿಗಳಿಗೆ ಸಮೀಪದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಎಲ್ಲ ಶಾಲೆಯ ಮುಖ್ಯಾಧ್ಯಾಪಕರಿಗೆ ಸೂಚನೆ ನೀಡಿದ್ದು, ಪ್ರತಿ ವಿದ್ಯಾರ್ಥಿಗೂ ಕರೆ ಮಾಡಿ ಅಗತ್ಯವಿದ್ದಲ್ಲಿ ಆನ್​ಲೈನ್ ಮೂಲಕ ಪರೀಕ್ಷಾ ಕೇಂದ್ರವನ್ನು ಬದಲಾವಣೆ ಮಾಡಿಸಿಕೊಡುವಂತೆ ತಿಳಿಸಾಗಿದೆ. ಪರೀಕ್ಷಾ ಕೇಂದ್ರ ಬದಲಾವಣೆಯ ನಂತರ ಜಿಲ್ಲೆಯಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ವಿಶೇಷ ತರಗತಿ: ಕರೊನಾ ಭಯದಿಂದ ಎಲ್ಲ ಮಕ್ಕಳು ಮನೆಯಲ್ಲೇ ಉಳಿದುಕೊಂಡಿದ್ದು, ಪರೀಕ್ಷೆ 10 ದಿನ ಇರುವಾಗ ಜಿಲ್ಲೆಯ ಎಲ್ಲ ತಾಲೂಕಿನ ವಿದ್ಯಾರ್ಥಿಗಳಿಗೆ ಬೋಧಿಸಲು ಶಿಕ್ಷಕರು ಯೋಜನೆ ಹಾಕಿಕೊಂಡಿದ್ದಾರೆ. ಜತೆಗೆ ಪರೀಕ್ಷೆಗೆ ಯಾವ ರೀತಿ ತಯಾರಾಗಬೇಕು ಎಂದು ವೇಳಾಪಟ್ಟಿ ಹಾಕಿಕೊಂಡು ಅದರಂತೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲಾಗುತ್ತದೆ.

ಕರೊನಾ ನಡುವೆಯೇ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಇದರ ಜತೆಗೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ವಿಳಂಬವಾದ ಹಿನ್ನೆಲೆಯಲ್ಲಿ ಉಂಟಾಗಿರುವ ಗೊಂದಲ ನಿವಾರಿಸುವ ಕಾರ್ಯವನ್ನೂ ಶಿಕ್ಷಕರ ಮೂಲಕ ಮಾಡಲು ಸೂಚಿಸಲಾಗಿದೆ. | ದಿವಾಕರ ಶೆಟ್ಟಿ, ಶಿರಸಿ ಡಿಡಿಪಿಐ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ತೊಂದರೆಯಾಗದಂತೆ ವಾಹನ ವ್ಯವಸ್ಥೆ ಮಾಡಬೇಕೋ ಎಂಬುದನ್ನು ಆಗಿನ ಪರಿಸ್ಥಿತಿ ನೋಡಿ ನಿರ್ಣಯಿಸಲಾಗುವುದು. ಸಾಮಾನ್ಯ ಸಾರಿಗೆ ಸೇವೆ ಪ್ರಾರಂಭವಾಗದೇ ಇದ್ದಲ್ಲಿ ವಿಶೇಷ ಬಸ್ ಬಿಡುವಂತೆ ಎನ್​ಡಬ್ಲ್ಯುಕೆಆರ್​ಟಿಸಿಗೆ ಕೇಳಿಕೊಳ್ಳಲಾಗುವುದು. | ಹರೀಶ ಗಾಂವಕರ್ ಕಾರವಾರ ಡಿಡಿಪಿಐ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net