ಎಸ್ಸೆಸ್ಸೆಲ್ಸಿಯಲ್ಲಿ ಹುಣಸೂರು ವಿದ್ಯಾರ್ಥಿಗಳ ಸಾಧನೆ

HUN-MAY-2-2(ROTARY SCHOOL STUDENT)
Published on

ಹುಣಸೂರು: ಎಸ್ಸೆಸ್ಸೆಲ್ಸಿ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದ್ದು, ನಗರದ ರೋಟರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಆರ್.ಕ್ಷಣ 622 ಅಂಕ ಗಳಿಸುವ ಮೂಲಕ ರಾಜ್ಯಮಟ್ಟದಲ್ಲಿ ನಾಲ್ಕನೇ ರ‌್ಯಾಂಕ್ ಮತ್ತು ತಾಲೂಕಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

ತಾಲೂಕಿನ ಬಿಳಿಕೆರೆಯ ವಿದ್ಯಾವಾರಿಧಿ ಪ್ರೌಢಶಾಲೆಯ ವಿದ್ಯಾರ್ಥಿನಿ ರಕ್ಷಿತಾ 617 ಅಂಕಗಳೊಂದಿಗೆ ತಾಲೂಕಿನ ದ್ವಿತೀಯ ಟಾಪರ್ ಆಗಿದ್ದರೆ, ಟ್ಯಾಲೆಂಟ್ ವಿದ್ಯಾಸಂಸ್ಥೆಯ ರಚನಾ 615 ಅಂಕಗಳೊಂದಿಗೆ ತಾಲೂಕಿನ ತೃತೀಯ ಟಾಪರ್ ಆಗುವ ಮೂಲಕ ತಾಲೂಕಿನಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ರೋಟರಿಯಲ್ಲಿ ಆನಂದದ ಕ್ಷಣ; ರೋಟರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಆರ್.ಕ್ಷಣ 622 ಅಂಕ ಗಳಿಸುವ ಮೂಲಕ ರೋಟರಿ ಸಂಸ್ಥೆಗೆ ರೋಮಾಂಚನ ಅನುಭವ ನೀಡಿದ್ದಾರೆ. ಫಲಿತಾಂಶ ಕಂಡು ಶಾಲೆಯ ಆಡಳಿತ ಮಂಡಳಿ ಸಂತಸಪಟ್ಟರು, ಕ್ಷಣ ಕನ್ನಡ ಭಾಷೆಯಲ್ಲಿ 125ಕ್ಕೆ 123 ಅಂಕಗಳಿಸಿದ್ದರೆ, ಆಂಗ್ಲಭಾಷೆಯಲ್ಲಿ 99, ಹಿಂದಿ 100ಕ್ಕೆ 100, ಗಣಿತ, ಸಮಾಜಶಾಸ್ತ್ರ ಮತ್ತು ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ವಿದ್ಯಾರ್ಥಿನಿ ರಮ್ಯಾ 574 ಅಂಕಗಳೊಂದಿಗೆ ಶಾಲೆಯ ದ್ವಿತೀಯ ಟಾಪರ್ ಆಗಿದ್ದಾರೆ. 7 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದರೆ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು 7 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಒಟ್ಟಾರೆ ಶಾಲೆ ಶೇ.72ರಷ್ಟು ಫಲಿತಾಂಶ ಪಡೆದಿದೆ. ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದೆ.

ವಿದ್ಯಾವಾರಿಧಿಯ ಸಾಧನೆ: ಬಿಳಿಕೆರೆಯ ವಿದ್ಯಾವಾರಿಧಿ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕು ಮಟ್ಟದಲ್ಲಿ ಗುರುತಿಸುವ ಸಾಧನೆಗೈದಿದ್ದು, ವಿದ್ಯಾರ್ಥಿನಿ ರಕ್ಷಿತಾ 617 ಅಂಕ ಗಳಿಸುವ ಮೂಲಕ ತಾಲೂಕಿನ ದ್ವಿತೀಯ ಟಾಪರ್ ಆಗಿದ್ದಾರೆ. ರಕ್ಷಿತಾ ಕನ್ನಡ ಭಾಷೆಯಲ್ಲಿ 123, ಆಂಗ್ಲಭಾಷೆಯಲ್ಲಿ 99, ಹಿಂದಿ 100, ಗಣಿತಶಾಸ್ತ್ರ, ವಿಜ್ಞಾನ ಮತ್ತು ಸಮಾಜಶಾಸ್ತ್ರದಲ್ಲಿ 99 ಅಂಕ ಗಳಿಸಿದ್ದಾರೆ. ವಿದ್ಯಾರ್ಥಿನಿ ಸಿಂಚನಾ 598 ಅಂಕಗಳೊಂದಿಗೆ ಶಾಲೆಯ ದ್ವಿತೀಯ ಟಾಪರ್ ಆಗಿದ್ದಾರೆ. 8 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 27 ಪ್ರಥಮ ಶ್ರೇಣಿ ಮತ್ತು 22 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಶೇ.85ರ ಫಲಿತಾಂಶ ಪಡೆದಿದೆ. ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ರಮೇಶ್ ಮತ್ತವರ ತಂಡ ವಿದ್ಯಾರ್ಥಿಗಳನ್ನು ಅಭಿನಂದಿಸಿದೆ.

ಟ್ಯಾಲೆಂಟ್‌ಗೆ ತೃತೀಯ ಸ್ಥಾನ: ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ರಚನಾ 625 ಅಂಕಗಳಿಗೆ 615 ಅಂಕ ಗಳಿಸುವ ಮೂಲಕ ತಾಲೂಕಿನ ತೃತೀಯ ಟಾಪರ್ ಆಗಿದ್ದಾರೆ. ಶಾಲೆಗೆ ಶೇ.96ರ ಫಲಿತಾಂಶ ಬಂದಿದ್ದು, 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರಥಮ ಶ್ರೇಣಿಯಲ್ಲಿ 30 ಮತ್ತು ದ್ವಿತೀಯ ಶ್ರೇಣಿಯಲ್ಲಿ 22 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆಂದು ಪ್ರಾಂಶುಪಾಲ ಮಂಜುನಾಥ್ ತಿಳಿಸಿದ್ದಾರೆ.

ಶಾಸ್ತ್ರಿ ವಿದ್ಯಾಸಂಸ್ಥೆಗೆ ಶೇ.90ರಷ್ಟು ಫಲಿತಾಂಶ: ನಗರದ ಶಾಸ್ತ್ರಿ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಎಂ.ಅಮೃತ 609 ಅಂಕಗಳೊಂದಿಗೆ ಶಾಲೆಯ ಟಾಪರ್ ಆಗಿದ್ದಾರೆ. ಶೇ.90ರಷ್ಟು ಫಲಿತಾಂಶವನ್ನು ಶಾಲೆ ಗಳಿಸಿದ್ದು, ಯಶಸ್ವಿನಿ 603 ಅಂಕಗಳೊಂದಿಗೆ ಶಾಲೆಗೆ ದ್ವಿತೀಯ ಸ್ಥಾನ ಗಳಿಸಿದ್ದಾರೆ. 13 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆಂದು ಶಾಲೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಆಡಳಿತ ಮಂಡಳಿ ವಿದ್ಯಾರ್ಥಿಗಳ ಸಾಧನೆಗೆ ಅಭಿನಂದಿಸಿದೆ.

ಸಂತ ಜೋಸೆಫರ ಶಾಲೆಗೆ ಸರಾಸರಿ ಶೇ.74ರ ಫಲಿತಾಂಶ: ಸಂತ ಜೋಸೆಫರ ಪ್ರೌಢಶಾಲೆಯ ಕನ್ನಡ ಮಾಧ್ಯಮ ವಿಭಾಗದಲ್ಲಿ ಶೇ.61.79ರ ಫಲಿತಾಂಶ ದೊರೆತಿದ್ದರೆ, ಆಂಗ್ಲಮಾಧ್ಯಮದಲ್ಲಿ ಶೇ.86.30 ಫಲಿತಾಂಶ ದೊರಕಿದೆ. ಕನ್ನಡ ಮಾಧ್ಯಮ ವಿಭಾಗದಲ್ಲಿ ಒಟ್ಟು 5 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದರೆ, ಆಂಗ್ಲ ಮಾಧ್ಯಮದಲ್ಲಿ 22 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮ ವಿಭಾಗದಲ್ಲಿ ಮಹಮದ್ ಕಬೀರ್ 588 ಅಂಕಗಳೊಂದಿಗೆ ಶಾಲೆಗೆ ಟಾಪರ್ ಆಗಿದ್ದರೆ, ಆಂಗ್ಲ ಮಾಧ್ಯಮದಲ್ಲಿ ಎಚ್.ಸಿ.ಲಹರಿ 598 ಅಂಕಗಳೊಂದಿಗೆ ಶಾಲೆಗೆ ಟಾಪರ್ ಆಗಿದ್ದಾರೆ. ಶಿಫಾನಾ ಬಾನು 561 ಅಂಕಗಳೊಂದಿಗೆ (ಕನ್ನಡ ಮಾಧ್ಯಮ ದ್ವಿತೀಯ ಸ್ಥಾನ) ಮತ್ತು ಭವಾನಿ 596 ಅಂಕಗಳೊಂದಿಗೆ (ಆಂಗ್ಲಮಾಧ್ಯಮ)ದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net