ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕೆಗೆ ಪೂರಕ

23-hvr-05
Published on

ಹಾವೇರಿ: ಕರೊನಾದಂತಹ ಈ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಹಿನ್ನಡೆಯಾಗದಂತೆ ಹಾವೇರಿ ಬಿಇಒ ನೇತೃತ್ವದಲ್ಲಿ ಶಿಕ್ಷಕ ಸಮೂಹ ವರದಾ ಜ್ಞಾನವಾಹಿನಿ ಯುಟ್ಯೂಬ್ ಚಾನಲ್ ಆರಂಭಿಸಿರುವುದು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದೆ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದ ಗುರುಭವನದಲ್ಲಿ ಸೋಮವಾರ ಆಯೋಜಿಸಿದ್ದ ವರದಾ ಜ್ಞಾನವಾಹಿನಿ ಶೈಕ್ಷಣಿಕ ಯೂಟ್ಯೂಬ್ ಚಾನಲ್ ಲೋಕಾರ್ಪಣೆ, ಎನ್​ಟಿಎಸ್​ಸಿ, ಎನ್​ಎಂಎಂಎಸ್ ಪರೀಕ್ಷೆಯ ಆನ್​ಲೈನ್ ತರಗತಿ ಪಾಠ ಬೋಧನೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗಾಗಿ ತಾಲೂಕಿನ ವಿಷಯ ಶಿಕ್ಷಕರ ಕಾರ್ಯಾಗಾರ ಹಾಗೂ 2019-2020ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಲ್ಯಾಪ್​ಟಾಪ್ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಮಗ್ರ ಶಿಕ್ಷಣ ಅಭಿಯಾನ ಜಂಟಿ ನಿರ್ದೇಶಕ ಈರಣ್ಣ ಜತ್ತಿ ಮಾತನಾಡಿ, ಕರೊನಾ ಸಮಯದಲ್ಲಿ ಶಿಕ್ಷಣ ಇಲಾಖೆ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡುತ್ತಿದೆ. ತರಗತಿ ಆರಂಭವಾಗದಿರುವ ಸಂದರ್ಭದಲ್ಲಿ ತಂತ್ರಜ್ಞಾನದ ಮೂಲಕ ಮಕ್ಕಳನ್ನು ತಲುಪುವ ಕಾರ್ಯವನ್ನು ಶಿಕ್ಷಣ ಇಲಾಖೆ ಕೈಗೊಂಡಿದೆ. ಹಾವೇರಿಯಲ್ಲಿ ವರದಾ ಜ್ಞಾನವಾಹಿನಿ ಯೂಟ್ಯೂಬ್ ಶೈಕ್ಷಣಿಕ ಚಾನಲ್ ಆರಂಭಗೊಳಿಸಿ ಮಕ್ಕಳ ಕಲಿಕೆಗೆ ಮುಂದಾಗಿರುವುದು ಅಭಿನಂದನೀಯ ಎಂದರು.

ಡಿಡಿಪಿಐ ಅಂದಾನೆಪ್ಪ ವಡಗೇರಿ ಮಾತನಾಡಿ, ಕಳೆದ ಸಾಲಿನ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆಯಾದ ಹಿನ್ನೆಲೆಯಲ್ಲಿ ಈ ವರ್ಷ ಫಲಿತಾಂಶ ಹೆಚ್ಚಿಸಲು ಸಾಕಷ್ಟು ಪರಿಶ್ರಮ ವಹಿಸಬೇಕಾಗಿದೆ. ಶೈಕ್ಷಣಿಕ ಪ್ರಗತಿಗೆ ಅಗತ್ಯ ತಯಾರಿ ಮಾಡಿಕೊಳ್ಳುವ ಹಿನ್ನೆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರದಿಂದ ಸಂಪನ್ಮೂಲ ವ್ಯಕ್ತಿಗಳಿಂದ ಪಾಠಗಳನ್ನು ತಯಾರಿಸಲಾಗಿದೆ. ಸ್ಮಾರ್ಟ್​ಫೋನ್ ಹಾಗೂ ಟಿವಿ ಸೌಕರ್ಯವಿಲ್ಲದ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ನಾವು ಆಲೋಚನೆ ಮಾಡಬೇಕಾಗಿದೆ. ಆನ್​ಲೈನ್ ಕ್ಲಾಸ್​ಗಳು 70ರಿಂದ 80ರಷ್ಟು ವಿದ್ಯಾರ್ಥಿಗಳಿಗೆ ತಲುಪುತ್ತಿದೆ. ಉಳಿದ ಶೇ. 20ರಷ್ಟು ಮಕ್ಕಳನ್ನು ತಲುಪುವ ಕೆಲಸವಾಗಬೇಕು. ಮಕ್ಕಳಿಗೆ ಕಲಿಕೆಯ ಪರೀಕ್ಷೆ ಮಾಡಬೇಕು. ಕಳೆದ 8 ತಿಂಗಳಿಂದ ಶಿಕ್ಷಕರು ಮನೆಯಲ್ಲಿದ್ದರೂ ಸರ್ಕಾರ ವೇತನ ನೀಡುತ್ತಿದೆ. ಹಗಲು, ರಾತ್ರಿ ವಿಶ್ರಾಂತಿ ಇಲ್ಲದೇ ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡೋಣ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

ಬಿಇಒ ಎಂ.ಎಚ್. ಪಾಟೀಲ ಮಾತನಾಡಿ, ವರದಾ ಜ್ಞಾನವಾಹಿನಿ ಚಾನಲ್​ನಲ್ಲಿ ಸದ್ಯ 60 ಪಾಠಗಳನ್ನು ತಯಾರಿಸಲಾಗಿದೆ. ಮಕ್ಕಳಿಗೆ ಸುಲಭವಾಗಿ ಮನನವಾಗಲು ಆಕರ್ಷಕ ಬೋಧನಾ ಕ್ರಮ ಅಳವಡಿಸಲಾಗಿದೆ. ರಾಜ್ಯದ 10ನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೂ ಯೂಟ್ಯೂಬ್ ಚಾನಲ್​ನಲ್ಲಿ ಅಳವಡಿಸಿರುವ ಪಠ್ಯಕ್ರಮಗಳು ತುಂಬಾ ಸಹಕಾರಿಯಾಗಿವೆ. ಎಲ್ಲ ಮಕ್ಕಳು ಸದುಪಯೋಗಪಡಿಸಿಕೊಂಡು ಪರೀಕ್ಷೆಯಲ್ಲಿ ಯಶಸ್ಸು ಗಳಿಸಬೇಕು ಎಂದರು. ನಂತರ ಯೂಟ್ಯೂಬ್ ಮೂಲಕ ಪಾಠಗಳನ್ನು ತಯಾರಿಸಲು ಶ್ರಮಿಸಿದ ಶಿಕ್ಷಕರನ್ನು ಸನ್ಮಾನಿಸಲಾಯಿತು. ಡಯಟ್ ಉಪನಿರ್ದೇಶಕ ಡಿ.ಎಂ. ಬಸವರಾಜಪ್ಪ, ದೈಹಿಕ ಶಿಕ್ಷಣಾಧಿಕಾರಿ ನಾಗರಾಜ ಇಚ್ಚಂಗಿ, ಚಂದ್ರಣ್ಣ ಪಟ್ಟಣಶೆಟ್ಟಿ, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಎಸ್. ಭಗವಂತಗೌಡ್ರ ಇತರರಿದ್ದರು.

ಟಾಪರ್​ಗಳಿಗೆ ಲ್ಯಾಪ್​ಟಾಪ್ ವಿತರಣೆ

ಸರ್ಕಾರಿ ಶಾಲೆಗಳಲ್ಲಿ ಓದಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಟಾಪರ್​ಗಳಿಗೆ ಲ್ಯಾಪ್​ಟಾಪ್​ಗಳನ್ನು ಶಾಸಕ ನೆಹರು ಓಲೇಕಾರ ವಿತರಿಸಿದರು. ಜಿಲ್ಲಾಮಟ್ಟದಲ್ಲಿ ಹಾನಗಲ್ಲ ತಾಲೂಕಿನ ಬೈಚವಳ್ಳಿಯ ರಮ್ಯಾ ಸೋಮಪ್ಪನವರ, ಹಿರೇಕೆರೂರು ತಾಲೂಕು ಹೊಸಕಟ್ಟೆಯ ಶಿವಕುಮಾರ ಬಣಕಾರ ಹಾಗೂ ಹಾವೇರಿ ತಾಲೂಕು ಕನವಳ್ಳಿಯ ಸಬೀಯಾಬಾನು , ತಾಲೂಕು ಮಟ್ಟದಲ್ಲಿ ಕಾಟೇನಹಳ್ಳಿಯ ದೀಪಾ ಪಾಟೀಲ, ಯಲಗಚ್ಚದ ಮೇಘಾ ಯರೇಶಿಮಿ, ಮೌಲಾಲಿ ಲ್ಯಾಪ್​ಟಾಪ್ ಪಡೆದುಕೊಂಡರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net