

ಕುದೂರು: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆಗೆ ಶಾಸಕ ಎಚ್.ಸಿ.ಬಾಲಕೃಷ್ಣ ದಿಢೀರ್ ಭೇಟಿ ನೀಡಿ, ಪ್ರಾಂಶುಪಾಲರು, ಶಿಕ್ಷಕರು ಮತ್ತು ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಸಭೆ ನಡೆಸಿದರು.
ಹಿಂದಿನ ಶೈಕ್ಷಣಿಕ ವರ್ಷದ ಫಲಿತಾಂಶ ಸೇರಿ ನೂತನ ಶೈಕ್ಷಣಿಕ ವರ್ಷದಲ್ಲಿ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರೊಂದಿಗೆ ವಿಸ್ತೃತವಾಗಿ ಚರ್ಚಿಸಿದರು. ಪ್ರಮುಖವಾಗಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ಫಲಿತಾಂಶವನ್ನು ಹೆಚ್ಚಿಸಲು, ಹಲವು ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳಲು ಸೂಚಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಗಡಿ ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ ಸ್ಥಾಪನೆ ಮಾಡುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಮುನ್ನುಡಿ ಬರೆಯಲು ಹಲವು ನೀತಿ, ನಿರೂಪಣೆಗಳನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ತಾಲೂಕಿನ ಪ್ರಾಥಮಿಕ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವ ಕೆಲಸ ಕ್ಷೇತ್ರ ಶಿಕ್ಷಣಾಧಿಕಾರಿ ಮಾಡಬೇಕು ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರಯ್ಯ ಅವರಿಗೆ ಶಾಸಕರು ಮಾಗಡಿ ತಾಲೂಕಿನ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಾಲಾ ಮಕ್ಕಳ ಪ್ರಗತಿ ಮತ್ತು ಶಿಕ್ಷಕರ ದಕ್ಷ ಬೋಧನೆ ಕಡಿಮೆಯಾಗುತ್ತಿದೆ. ಇದರ ಬಗ್ಗೆ ಕ್ರಮ ವಹಿಸಬೇಕು. ಕೇವಲ ಇಲಾಖೆಯ ಆದೇಶಗಳು, ಕಡತಗಳನ್ನು ನೋಡಿಕೊಂಡು ಕೂರುವುದಲ್ಲ. ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಅಧಿಕಾರಿಗಳು ಶಾಲೆಗಳಿಗೆ ಆಗಾಗ ಭೇಟಿ ಮಾಡಬೇಕು. ಇಸಿಒ ಹಾಗೂ ಸಿ.ಆರ್.ಪಿ ಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಸೂಚಿಸಿ ಕಾಲಕಾಲಕ್ಕೆ ವರದಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಶಿಕ್ಷಕರು ರಾಜಕೀಯ ಮಾಡುವುದು ಮತ್ತು ರಾಜಕೀಯ ಸೋಂಕು ಅಂಟಿಸಿಕೊಳ್ಳುವುದನ್ನು ಬಿಡಬೇಕು. ಮಕ್ಕಳ ಪ್ರಗತಿಯತ್ತ ಗಮನಹರಿಸಬೇಕು. ಕರ್ನಾಟಕ ಪಬ್ಲಿಕ್ ಶಾಲೆಯ ಕೆಲ ನಿಯಮಾವಳಿಗಳಿಗೆ ಮಾರ್ಪಾಡು ತರಬೇಕಿದೆ. ನ್ಯೂನತೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಲಿದ್ದೇನೆ ಎಂದರು.
ಕೆಪಿಎಸ್ ಶಾಲೆಗೆ ನಾನೇ ಅಧ್ಯಕ್ಷನಾಗಿರುವುದರಿಂದ ಮೂಲಸೌಕರ್ಯ ಕೊರತೆ ಬರುವುದಿಲ್ಲ. ಗುಣಮಟ್ಟ ಶಿಕ್ಷಣ ಕೊಡುವುದು ನಿಮ್ಮ ಜವಾಬ್ದಾರಿ ಎಂದು ಶಿಕ್ಷಕರಿಗೆ ತಿಳಿಸಿದರು. ಕೆಲಕಾಲ ವಿದ್ಯಾರ್ಥಿಗಳೊಂದಿಗೆ ಸಮಾಲೋಚನೆ ನಡೆಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್, ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ನಾರಾಯಣಪ್ಪ, ಮುಖ್ಯ ಶಿಕ್ಷಕಿ ಶ್ರೀದೇವಿ, ಕೃಷ್ಣಮೂರ್ತಿ, ಇಸಿಒ ಗಂಗಾಧರ್, ಕೆ.ಬಿ.ಬಾಲರಾಜು, ಹನುಮಂತರಾಯಪ್ಪ, ವಿನಯ್ ಗೌಡ, ಜಗದೀಶ್, ಲೋಕೇಶ್, ಶಶಾಂಕ್, ಶಾಲಾಭಿವೃದ್ಧಿ ಸಮಿತಿ ನಿರ್ದೇಶಕರು, ಶಿಕ್ಷಕರು ಮತ್ತು ಉಪನ್ಯಾಸಕರು ಪಾಲ್ಗೊಂಡಿದ್ದರು.